ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮದ 1ನೇ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಪರಿಶಿಷ್ಟ ಪಂಗಡದ ಮಹಿಳೆಯನ್ನು ಖಾಯಂ ಮಾಡಲು ಆಗ್ರಹಿಸಿ ನಡೆಯುತ್ತಿರುವ ಧರಣಿ ಶುಕ್ರವಾರ ಆರನೇ ದಿನಕ್ಕೆ ಕಾಲಿಟ್ಟಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ತಿಂಗಳಿನಿಂದ ಅಡುಗೆ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರೂ, ನಕಲಿ ದಾಖಲೆ ನೀಡಿದ ಮತ್ತೊಬ್ಬ ಮಹಿಳೆಗೆ ನೇಮಕಾತಿ ಆದೇಶ ನೀಡಿರುವುದಕ್ಕೆ ವಿರೋಧವಾಗಿ ಡಿವೈಎಫ್ಐ ಸಂಘಟನೆ ಮತ್ತು ಮಹಿಳೆಯ ಕುಟುಂಬಸ್ಥರು ನಿರಂತರ ಧರಣಿ ನಡೆಸುತ್ತಿದ್ದಾರೆ.
ಪ್ರತಿಭಟನೆ ನಿರಂತರ ಆರು ದಿನಗಳಿಂದ ನಡೆಯುತ್ತಿದ್ದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಾರದೇ ಇರುವುದು ಅಧಿಕಾರಿಗಳ ಕೈವಾಡವಿದೆ ಎಂದು ಶಂಕೆ ವ್ಯಕ್ತವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಸಹಾಯಕಿ ನೇಮಕಾತಿ ಆದೇಶ ರದ್ದುಗೊಳಿಸಿ ಕಳೆದ 30 ತಿಂಗಳಿಂದ ಸೇವೆ ಸಲ್ಲಿಸಿದ ಬಡ ಮಹಿಳೆಗೆ ಅಡುಗೆ ಸಹಾಯಕಿ ಹುದ್ದೆಗೆ ಖಾಯಂ ಮಾಡಬೇಕು ಹಾಗೂ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಡಿವೈಎಫ್ಐ ಸಂಘಟನೆಯ ಕಾರ್ಯದರ್ಶಿ ರಾಜು ನಾಯಕ ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೋ ಪ್ರಕರಣ ದಾಖಲು
ಇದೆ ಸಂಧರ್ಭದಲ್ಲಿ ಡಿವೈಎಫ್ಐ ಸಂಘಟನೆಯ ಅದ್ಯಕ್ಷ ರಿಯಾಜ್ ಆರ್ತೀ, ಜಿಲ್ಲಾ ಮುಖಂಡರಾದ ಶಬ್ಬೀರ್, ಗ್ರಾ.ಪಂ ಸದಸ್ಯರಾದ ಮಕ್ತುಮ್ ಭಾಷಾ, ತಿಮ್ಮಣ್ಣ ನಾಯಕ ದಿವಾನ, ಮುಖಂಡರಾದ ರಂಗನಾಥ ಮುರಾಳ, ರಂಗನಾಥ ಬುಂಕಲದೊಡ್ಡಿ, ಅಮೀರ್ ಪಟೇಲ್, ಕಲಿಂ, ಮೈಬೂ, ಮಹಾಲಿಂಗ ದೊಡ್ಡಮನಿ, ಗುರು ತೋಟದ್, ಭೀಮಾಶಂಕರ ಮಕಾಶಿ, ಮಾಜಿ ಗ್ರಾ.ಪಂ ಅದ್ಯಕ್ಷ ರಂಗನಾಥ ಮಾಕಾಶಿ, ನೊಂದ ಮಹಿಳೆ ನರಸಮ್ಮ ಸೇರಿದಂತೆ ಅನೇಕರಿದ್ದರು.





