ನಿರ್ಭಯ ಪ್ರಕರಣ ನಡೆದ ದಿನವಾದ ಇಂದು (ಡಿಸೆಂಬರ್ 16) ಕರ್ನಾಟಕದಲ್ಲೂ ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು, ಎಲ್ಲ ಶೋಷಿತ, ದಮನಿತ ಮಹಿಳೆಯರಿಗೂ ನ್ಯಾಯ ಮತ್ತು ಘನತೆಯ ಬದುಕು ಖಾತ್ರಿಗೊಳ್ಳಬೇಕೆಂದು ಒತ್ತಾಯಿಸಿ ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ಗಳು ನಡೆದಿವೆ. ಈ ಸಮಾವೇಶದ ಬಳಿಕ ಕೊಂದವರು ಯಾರು? ತಂಡವು ಬೆಳ್ತಂಗಡಿ ತಾಲೂಕು ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸುತ್ತಮುತ್ತಲಿನಲ್ಲಿ ನಡೆದಿರುವ ಭೀಕರ ಅತ್ಯಾಚಾರಗಳು, ಅಸಹಜ ಸಾವು, ನಾಪತ್ತೆ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತ್ರರ ಕುಟುಂಬಗಳಿಗೆ ನ್ಯಾಯ ಒದಗಿಸುವ ಹಾಗೂ ಅಲ್ಲಿನ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಲು ಆಗ್ರಹಿಸಿದೆ. ಹಾಗೆಯೇ ಇದೆಲ್ಲವೂ ನಡೆಯಲು ಕಾರಣವಾದ ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸುತ್ತಾ, ಅವುಗಳಲ್ಲಿ ಸಾಂಸ್ಥಿಕ ಪರಿವರ್ತನೆ ಬರುವಂತಹ ಕ್ರಮಗಳಿಗೆ ಮುಂದಾಗಲು ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಎದೆ ಮುಟ್ಟಿ ನೋಡಿ ಹೇಳಿ ನೀವಲ್ಲವೇ ಕೊಂದವರನ್ನು ಬೆಂಬಲಿಸಿದವರು? – ಮಲ್ಲಿಗೆ ಸಿರಿಮನೆ
“ಡಿಸೆಂಬರ್ 16, ದೆಹಲಿಯ ನಿರ್ಭಯ ಪ್ರಕರಣ ನಡೆದ ದಿನವಾಗಿದ್ದು, ಕಳೆದ 13 ವರ್ಷಗಳಿಂದಲೂ ದೇಶದಾದ್ಯಂತ ಮಹಿಳಾ ಸಂಘಟನೆಗಳು ಅದನ್ನು ‘ಅತ್ಯಾಚಾರ ವಿರೋಧಿ ದಿನʼವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಈ ದಿನವು ಭೀಕರವಾದ ದೌರ್ಜನ್ಯಕ್ಕೆ ಗುರಿಯಾದ ನಂತರವೂ ವಿದ್ಯಾರ್ಥಿನಿ ನಿರ್ಭಯ ತೋರಿದ ಧೈರ್ಯ, ಸಾಹಸ, ಬದುಕಬೇಕೆಂಬ ಇಚ್ಛಾಶಕ್ತಿಯನ್ನು ನೆನಪಿಸುವ ದಿನವೂ ಆಗಿದೆ. ಹಾಗೆಯೇ, ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಯನ್ನು ತಡೆಗಟ್ಟಲು ಹೊಸ ಕಾನೂನುಗಳು ರೂಪುಗೊಂಡ ಸಂದರ್ಭವೂ ಅದಾಗಿತ್ತು ಎಂಬುದನ್ನೂ ಕೂಡಾ” ಎಂದು ಮಹಿಳಾ ಹೋರಾಟಗಾರರು ಹೇಳಿದ್ದಾರೆ.

“ಈ ಹಿನ್ನೆಲೆಯಲ್ಲಿ ಕೊಂದವರು ಯಾರು ಆಂದೋಲನವು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶವನ್ನು ಡಿಸೆಂಬರ್ 16ರಂದು ಹಮ್ಮಿಕೊಂಡಿದೆ. ಕಳೆದ ಮೂರು, ನಾಲ್ಕು ದಶಕಗಳಿಂದ ಮಹಿಳೆಯರ ಹಕ್ಕುಗಳು ಮತ್ತು ಘನತೆಗಾಗಿ ನಿರಂತರ ಕೆಲಸ ಮಾಡಿಕೊಂಡು ಬರುತ್ತಿರುವ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ಸಮಾನತೆಯಲ್ಲಿ ನಂಬಿಕೆ ಇರಿಸಿದ ವ್ಯಕ್ತಿಗಳೆಲ್ಲರೂ ಸೇರಿ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿದ ʼಕೊಂದವರು ಯಾರು?ʼ ಎಂಬ ಆಂದೋಲನದ ಆರಂಭಿಸಿದ್ದೇವೆ” ಎಂದು ತಿಳಿಸಿದೆ.

“ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ನಡೆದಿರುವ ಭೀಕರವಾದ ದೌರ್ಜನ್ಯ ಪ್ರಕರಣಗಳಲ್ಲಿ, ಹೋರಾಟ ನಡೆಸುತ್ತಿರುವ ಸಂತ್ರಸ್ತ್ರರ ಕುಟುಂಬಗಳೊಂದಿಗೆ ನಿಲ್ಲುವುದು, ಪಿತೃಪ್ರಧಾನ ವ್ಯವಸ್ಥೆಯ ದಬ್ಬಾಳಿಕೆಯಲ್ಲಿ ಅಡಗಿಹೋಗಿರುವ ಮಹಿಳೆಯರು ಮತ್ತು ಜನಸಾಮಾನ್ಯರ ಧ್ವನಿಗೆ ಪುನಶ್ಚೇತನ ನೀಡುವುದು, ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸಿ, ವ್ಯವಸ್ಥೆಗೆ ತನ್ನ ಹೊಣೆಗಾರಿಕೆಯನ್ನು ನೆನಪಿಸುವುದು ನಮ್ಮ ಉದ್ದೇಶ. ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು” ಎಂದು ಕೊಂದವರು ಯಾರು ತಂಡ ಮನವಿ ಮಾಡಿದೆ.
ಕೊಂದವರು ಯಾರು? ತಂಡದ ಹಕ್ಕೊತ್ತಾಯಗಳು:
- ಎಸ್‌ಐಟಿಯ ಸ್ವಾತಂತ್ರ್ಯದ ರಕ್ಷಣೆ ಮತ್ತು ಅದು ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಬೇಕು: ಈಚೆಗೆ ಎಸ್‌ಐಟಿ ಮುಂದೆ ದೂರು ದಾಖಲಿಸಲು ಬಂದ ಸಂತ್ರಸ್ತರು ತಮ್ಮ ಮೇಲೆ ಕೆಲವು ಎಸ್‌ಐಟಿ ಅಧಿಕಾರಿಗಳು ದುರ್ವರ್ತನೆ ತೋರಿದ್ದಾರೆಂದು ಆಪಾದಿಸಿರುವ ಹಿನ್ನೆಲೆಯಲ್ಲಿ, ಅಂತಹ ಸಂದರ್ಭಗಳು ಬರದಂತೆ ಎಚ್ಚರ ವಹಿಸಬೇಕು.
- ಎಸ್‌ಐಟಿ ರಚನೆಯ ಸರ್ಕಾರಿ ಆದೇಶದಂತೆ, ಹಿಂದಿನ ಬಗೆಹರಿಯದ ಪ್ರಕರಣಗಳು ಮತ್ತು ಎಲ್ಲ ಅಸಹಜ ಸಾವುಗಳ ಸಮಗ್ರ ತನಿಖೆ: ಎಸ್‌ಐಟಿ ರಚನೆಯ ಕುರಿತ ಸರ್ಕಾರದ ಕಾರ್ಯಕಾರಿ ಆದೇಶದ ಅನ್ವಯ ಕಳೆದ ದಶಕದಲ್ಲಿ ವರದಿಯಾಗಿರುವ, ಎಲ್ಲ ನಾಪತ್ತೆ, ಹತ್ಯೆ ಅಥವಾ ಅತ್ಯಾಚಾರ ಪ್ರಕರಣಗಳನ್ನೂ, ಬಗೆಹರಿಯದ ಪ್ರಕರಣಗಳನ್ನೂ ಎಸ್ಐಟಿಯು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು.
- ದೂರುದಾರರು ಮತ್ತು ಸಾಕ್ಷಿಗಳ ಸುರಕ್ಷತೆ ಮತ್ತು ಗೌಪ್ಯತೆ: ‘ಸಾಕ್ಷಿ ಸಂರಕ್ಷಣಾ ಕಾಯ್ದೆʼಯ ಪ್ರಕಾರ ದೂರುದಾರರು ಮತ್ತು ಸಾಕ್ಷಿಗಳಿಗೆ ಭದ್ರತೆ ಒದಗಿಸುವ ಬಗ್ಗೆ ಹಾಗೂ ಅವರ ಗೌಪ್ಯತೆ ಕಾಪಾಡಲು ಬದ್ಧರಾಗಿರುವ ಬಗ್ಗೆ ಎಸ್‌ಐಟಿ, ಕರ್ನಾಟಕ ಸರ್ಕಾರ ಮತ್ತು ಮಹಿಳಾ ಆಯೋಗಗಳು ಬಹಿರಂಗ ಪ್ರಕಟಣೆಗಳನ್ನು ಹೊರಡಿಸಬೇಕು.
- ಲೋಪ ಎಸೆಗಿರುವ ಅಧಿಕಾರಗಳ ಮೇಲೆ ಕ್ರಮ ಜರುಗಿಸಿ: ಕರ್ನಾಟಕ ಉಚ್ಚ ನ್ಯಾಯಾಲಯದ, ಸೆಪ್ಟಂಬರ್ 13, 2024ರ ತೀರ್ಪು ಮತ್ತು ಸಿಬಿಐ ನ್ಯಾಯಾಲಯದ ತೀರ್ಪಿನ ಅನ್ವಯ, ಸೌಜನ್ಯ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತನಿಖೆ ನಡೆಸಿದವರು ತಮ್ಮಕರ್ತವ್ಯ ನಿಭಾಯಿಸುವಲ್ಲಿ ಗಂಭೀರವಾದ ಲೋಪ ಎಸಗಿರುವುದನ್ನು ಅಪರಾಧವೆಂದು ಪರಿಗಣಿಸಿ ರಾಜ್ಯ ಸರ್ಕಾರವು, ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಕಾನೂನಿನ ಪ್ರಕಾರ ನಡೆದುಕೊಳ್ಳದೇ ಹೋದರೆ ಶಿಕ್ಷೆ ನೀಡಬೇಕೆಂದು ಹೇಳುವ ಐಪಿಎಸ್ ಸೆಕ್ಷನ್ 166A ಸೇರಿದಂತೆ ಕಠಿಣ ಕಾನೂನಿನ ಕ್ರಮವನ್ನು ಖಾತ್ರಿ ಪಡಿಸಬೇಕು.
- ಲಿಂಗತ್ವ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಸ್ವತಂತ್ರ ಬೆಂಬಲ ಗುಂಪನ್ನು ಸ್ಥಾಪಿಸಿ: ಲಿಂಗತ್ವ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಸಲುವಾಗಿ ಎಸ್ಐಟಿಯನ್ನು ಬೆಂಬಲಿಸಲು ಸ್ವತಂತ್ರ ಬೆಂಬಲ ಗುಂಪನ್ನು ಸ್ಥಾಪಿಸಬೇಕು. ಅದರಲ್ಲಿ ಮಹಿಳಾ ಹಕ್ಕುಗಳ ಪರಿಣತರನ್ನು ಒಳಗೊಳ್ಳಬೇಕು.
- ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೂಕ್ತ ಮತ್ತು ಕಠಿಣವಾದ ಭದ್ರತಾ ಕ್ರಮಗಳನ್ನು ಜಾರಿಗೊಳಿಸಬೇಕು: ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು, ಮಹಿಳಾ ಸಹಾಯ ಡೆಸ್ಕ್ ಗಳಂತಹ ಸೂಕ್ತ ಮತ್ತು ಕಠಿಣವಾದ ಭದ್ರತಾ ವಿಧ್ಯುಕ್ತ ಕ್ರಮಗಳನ್ನು (ಪ್ರೊಟೊಕಾಲ್) ಜಾರಿಗೊಳಿಸಿ ಮಹಿಳೆಯರಿಗೆ ಭದ್ರತೆ ಒದಗಿಸಬೇಕು ಹಾಗೂ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು.
- ಎಲ್ಲ ಧರ್ಮಗಳ, ಧಾರ್ಮಿಕ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಿ: ಎಲ್ಲಾ ಧರ್ಮಗಳ, ಧಾರ್ಮಿಕ ಸಂಸ್ಥೆಗಳು, ಲೈಂಗಿಕ ಕಿರುಕುಳಗಳ ಪ್ರಕರಣಗಳನ್ನು ತೆಗೆದುಕೊಳ್ಳಲು ಪಾಶ್ (ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ)ಕಾಯ್ದೆಯಡಿ ಸ್ವತಂತ್ರ ಸಮಿತಿ ಸ್ಥಾಪಿಸುವುದನ್ನು ಕಡ್ಡಾಯ ಮಾಡಬೇಕು.
- ತಾಲೂಕು ಮಟ್ಟದಲ್ಲಿ ಲೈಂಗಿಕ ಹಿಂಸೆ ತಡೆಗೆ ‘ಸ್ಥಳೀಯ ಸಮಿತಿ’ (LC) ರಚನೆಯಾಗಿ, ಸಕ್ರಿಯಗೊಳಿಸಬೇಕು.
- ಉಗ್ರಪ್ಪ ಸಮಿತಿ ವರದಿಯ ಅನುಷ್ಟಾನವನ್ನು ಚುರುಕುಗೊಳಿಸುವ ಮತ್ತು ವರ್ಮಾ ಸಮಿತಿ ವರದಿಯ ಅನುಷ್ಟಾನಕ್ಕೂ ಮುಂದಾಗುವ ದೀರ್ಘಾವಧಿ ಕ್ರಮಗಳು: ದೀರ್ಘಾವಧಿ ಪ್ರಯತ್ನವಾಗಿ ಉಗ್ರಪ್ಪ ಸಮಿತಿ ಮತ್ತು ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಗಳನ್ನು ಪರಿಣತರ ತಂಡವು ಮರುಪರಿಶೀಲಿಸಿ ಶಿಫಾರಸುಗಳನ್ನು ಪರಿಷ್ಕರಿಸಬೇಕು ಮತ್ತು ವ್ಯಾಪಕ ಪ್ರಚಾರ ನೀಡಿ ನಿಗದಿತ ಅವಧಿಯೊಳಗೆ ಜಾರಿಗೊಳಿಸಬೇಕು.
- ಆರೋಗ್ಯಕರ ದೇಹಶಿಕ್ಷಣ: ಮನುಷ್ಯರಾಗಿ, ಸಹಜೀವಿಗಳಾಗಿ, ಸಹ ಪಯಣಿಗರಾಗಿ ಪರಸ್ಪರ ಗೌರವಿಸುವುದನ್ನು ಕಲಿಸುವ ಆರೋಗ್ಯಕರ ಮೌಲ್ಯಗಳನ್ನು ಶಿಕ್ಷಣವನ್ನು ಅಳವಡಿಸಬೇಕು.
- ಅನ್ಯಾಯವನ್ನು ಪ್ರತಿಭಟಿಸುವ ಮಹಿಳೆಯರನ್ನು ಜಾಲತಾಣಗಳಲ್ಲಿ ಅಶ್ಲೀಷವಾಗಿ ಪ್ರತಿಬಿಂಬಿಸುವ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಕಾಯ್ದೆಗಳು ಸಮರ್ಥವಾಗಿ ತಿದ್ದುಪಡಿಯಾಗಬೇಕು.





