“ನನಗೀಗ 60ರ ಆಸುಪಾಸು. ನನಗೆ ಗೊತ್ತಿರೋ ಹಾಗೆ ಕಳೆದ ಮೂವತ್ತು ವರ್ಷದಿಂದ ರಸ್ತೆಯಲ್ಲಿ ಗುಂಡಿ ಇದಾವೋ ಅಥವಾ ಗುಂಡಿ ಇರೋ ಕಡೆ ರಸ್ತೆ ಇದೆಯೋ ಅನ್ನೋದೆ ಗೊತ್ತಾಗುವುದಿಲ್ಲ. ಇನ್ನು ರಾಜಕಾರಣಿಗಳು, ಅಧಿಕಾರಿಗಳು ಬಕ್ಕಪ್ಪನಕೊಪ್ಪಲಿಗೆ ಇರೋದು ರಸ್ತೆನೊ ಅಥವಾ ಕೆಸರು ಗದ್ದೆನೋ ಹೇಳಿ ಅಂದ್ರೆ ಅವ್ರು ಇತ್ತ ಸುಳೀತಾನೆ ಇಲ್ಲ. ನಮ್ಮೂರಿನವರಿಗೆ ಏನು ಮಾಡಬೇಕು ಅಂತಾನೂ ಗೊತ್ತಾಗ್ತಿಲ್ಲ. ನಮ್ಮೂರಿಂದ 60 ಮಕ್ಳು ಡೈಲಿ ಸ್ಕೂಲಿಗೆ ಹೋಗ್ತವೆ. ದಿನ ಒಂದಿಲ್ಲೊಂದು ಮಗು ಗುಂಡಿ ತುಂಬಿರೋ ರಸ್ತೆಗ್ ಬಿದ್ದು ಕೆಸರು ಮಾಡ್ಕೊಂಡು ಬರ್ತದೆ. ಈ ಸಮಸ್ಯೆಗೆ ಪರಿಹಾರ ಯಾರ್ ಕೊಡ್ತಾರೋ ಏನೋ ಗೊತ್ತಿಲ್ಲ!”
ಇದು, ಹಾಸನದ ಅರಸೀಕೆರೆ ತಾಲೂಕಿಗೆ ಸೇರಿದ ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್ ಹೋಬಳಿಯ ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಪ್ಪನಕೊಪ್ಪಲು ಗ್ರಾಮದ ಹಿರಿಯರೊಬ್ಬರ ಮಾತು. 50 ರಿಂದ 60 ಮಕ್ಕಳು ಏಕಾಏಕಿ ಬಂದೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಬಂದು ನ್ಯಾಯ ಬೇಕು, ರಸ್ತೆ ಬೇಕು, ಚರಂಡಿ ಬೇಕು ಎಂಬೆಲ್ಲ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ. ಇಷ್ಟೆಲ್ಲ ಆಗ್ತಿದೆ ಅಂದ್ರೆ ಏನೋ ಸಮಸ್ಯೆ ಇದೆ ಅನ್ಕೊಂಡ್ರೆ ಬಕ್ಕಪ್ಪನಕೊಪ್ಪಲು, ಸಿದ್ದರಟ್ಟಿ ಗ್ರಾಮದಲ್ಲಿರೋದೆಲ್ಲ ಬರೀ ಸಮಸ್ಯೆ ಅನ್ನೋದು ಆನಂತರ ಅರಿವಿಗೆ ಬಂತು.

ಹೌದು, ಬಂದೂರು ಗ್ರಾಮ ಪಂಚಾಯಿತಿಗೆ ಸೇರಿದ ಬಕ್ಕಪ್ಪನಕೊಪ್ಪಲು, ಲಿಂಗಲಾಪುರ ಸಿದ್ದರಹಟ್ಟಿ ಗ್ರಾಮಗಳಿಗೆ ಮೂರ್ನಾಲ್ಕು ದಶಕಗಳಿಂದ ರಸ್ತೆ, ಚರಂಡಿ ವ್ಯವಸ್ಥೆಯೇ ಇಲ್ಲದಾಗಿದೆ. ಈ ಎರಡು ಗ್ರಾಮಗಳಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸಮಾಡುತ್ತಿದ್ದು, 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚು ವೃದ್ದರು ಈ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಸಮರ್ಪಕ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಪರದಾಡುವಾತಾಗಿದೆ.
ಶಾಲೆ ಹಾಗೂ ಬಸ್ ವ್ಯವಸ್ಥೆ ಇರುವ ಹಾರನಹಳ್ಳಿ – ಜಾವಗಲ್ ಮುಖ್ಯ ರಸ್ತೆಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಈ ಊರುಗಳಿಗೆ ಚುನಾವಣೆ ಸಂದರ್ಭದಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ಸರ್ಕಾರಿ ಬಸ್ ಗಳು ಈ ಊರಿನ ದಾರಿಯನ್ನೇ ಹತ್ತಿಲ್ಲ ಎನ್ನುವುದು ಸತ್ಯ.
ವಿದ್ಯಾರ್ಥಿಗಳ, ನೌಕರರ, ಹೊರ ಸ್ಥಳಗಳಲ್ಲಿ ಕೆಲಸ ಮಾಡುವ ಕೆಲಸಗಾರರ ಜೀವನದ ಭಾಗವೇ ಆಗಿರುವ ಮುಖ್ಯ ರಸ್ತೆಯಲ್ಲಿರುವ ಬಂದೂರು ಗ್ರಾಮದ ದಾರಿಯ ತುಂಬೆಲ್ಲ ಗುಂಡಿ, ಗುಂಡಿ ತುಂಬೆಲ್ಲ ನೀರು! ಬೇಸಿಗೆ ಕಾಲದಲ್ಲಿ ಹಾಗೋ ಹೀಗೋ ಗುಂಡಿ ರಸ್ತೆಯಲ್ಲೇ ಸಂಚರಿಸುವ ಗ್ರಾಮಸ್ಥರು ಮಳೆಗಾಲ ಬಂತೆಂದರೆ ಮಕ್ಕಳನ್ನು ಶಾಲೆಗೆ ಕಳಿಸಲು, ಆಸ್ಪತ್ರೆಗೆ ತೆರಳಲು, ಹಾಗೂ ತಮ್ಮ ಕೆಲಸಗಳಿಗೆ ತೆರಳಲು ಎರೆಡೆರಡು ಬಾರಿ ಯೋಚಿಸಿ ನಿರ್ಧಾರ ಮಾಡಬೇಕಾದ ಪರಿಸ್ಥಿತಿ ಈ ಎರಡು ಗ್ರಾಮಗಳ ಗ್ರಾಮಸ್ಥರದ್ದಾಗಿದೆ ಎಂದರೆ ತಪ್ಪಾಗಲಾರದು.


ಮಳೆಗಾಲದಲ್ಲಿ ಈ ಗ್ರಾಮಗಳ ರಸ್ತೆಗಳಲ್ಲಿ ಬತ್ತ ನಾಟಿ ಮಾಡಿದರೆ, ಗದ್ದೆಯಂತೆಯೇ ಬೆಳೆ ಬರುವ ರೀತಿಯಲ್ಲಿ ರಸ್ತೆಗಳು ಸಿದ್ದವಾಗಿಬಿಟ್ಟಿರುತ್ತವೆ. ಇಂತಹ ರಸ್ತೆಯಲ್ಲಿ ದಿನನಿತ್ಯ ಎದ್ದು ಬಿದ್ದು ಶಾಲೆಯಿಂದ ಮನೆಗೆ ಮನೆಯಿಂದ ಶಾಲೆಗೆ ಓಡಾಡಲು ವಿದ್ಯಾರ್ಥಿಗಳಿಗೆ, ಸಂಚಾರಕ್ಕೆ ಮುಕ್ತವಾದ ರಸ್ತೆ, ಸರಾಗವಾಗಿ ನೀರು ಸಾಗುವಂತಹ ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮಸ್ಥರು ತಮ್ಮ ಹಕ್ಕು ಕೇಳುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಗ್ರಾಮಸ್ಥ ಪರಮೇಶ್, “ಬಂದೂರು ಗ್ರಾಮಕ್ಕೆ ಹಾಗೂ ಲಿಂಗಲಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿ ವಾಹನ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಬೈಕ್ ಸವಾರರು ಅನೇಕ ಬಾರಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಸರಿಪಡಿಸುವಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ರೋಡು ಕೆಟ್ಟೋಗಿದೆ. ಬರಿ ಮಣ್ಣೊಡಿಸುತ್ತಾರೆ, ಶಾಶ್ವತ ಪರಿಹಾರ ಯಾರು ನೀಡುತ್ತಿಲ್ಲ. ಚರಂಡಿ ವ್ಯವಸ್ಥೆಯು ಕೂಡ ಅಷ್ಟಕ್ಕೇ ಅಷ್ಟೇ. ಹತ್ತಿರದಲ್ಲಿ ಸ್ಕೂಲ್ ಇಲ್ಲ. ಮಳೆಗಾಲದಲ್ಲಿ ಗುಂಡಿಗಳನ್ನು ತುರ್ತು ದುರಸ್ತಿಗೊಳಿಸಿ, ಮಳೆಗಾಲದ ನಂತರ ಶಾಶ್ವತ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡುತ್ತೇವೆ” ಎಂದರು.
“ಗ್ರಾಮಕ್ಕೆ ಶಾಶ್ವತ ರಸ್ತೆ ಹಾಗೂ ಚರಂಡಿ ವ್ಯವಸ್ಥೆಗಾಗಿ ಅನೇಕ ದಶಕಗಳಿಂದ ಮನವಿ ಮಾಡಿಕೊಂಡೆ ಬರುತ್ತಿದ್ದೇವೆ. ಆಡಳಿತ ವರ್ಗ ಹಾಗೂ ಜನ ಪ್ರತಿನಿಧಿಗಳು ನಮ್ಮನ್ನು ಕಡೆಗಣಿಸುತ್ತಿರುವ ಯಾಕೆ ಎಂಬುದು ಮಾತ್ರ ತಿಳಿಯುತ್ತಿಲ್ಲ. ಈ ವರ್ಷ ಶಾಶ್ವತ ರಸ್ತೆ ನಿರ್ಮಾಣವಾಗದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸುತ್ತೇವೆ” ಎನ್ನುತ್ತಾರೆ ಈದಿನಕ್ಕೆ ಪ್ರತಿಕ್ರಿಯಿಸಿದ ಬಕ್ಕಪ್ಪನಕೊಪ್ಪಲು ಗ್ರಾಮದ ಜವರೇಗೌಡ.
“ನಮ್ಮದು ಬಸಪ್ಪನಕೊಪ್ಪಲು ಗ್ರಾಮದಿಂದ ಬಂದುರುಗೆ ಹೋಗಲು ದಾರಿ ಇಲ್ಲಾ. ಮಕ್ಕಳು ಶಾಲೆಗೆ ಹೋಗಲು ಬಹಳ ಕಷ್ಟ 65 ಮಕ್ಕಳು ಶಾಲೆಗೆ ಹೋಗಲು ದಾರಿ ಇಲ್ಲಾ. ಹೋಲಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ನೂರುಕ್ಕೂ ಅಧಿಕ ಮನೆಗಳಿವೆ. ರಾಜಕಾರಣಿಗಳಿಗೆ ಹೇಳಿದ್ರೆ ಏನು ಮಾಡಿಲ್ಲ ಅವರು ಬರಿ ಸುಳ್ಳು ಹೇಳ್ತಾರೆ. ಈ ಊರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲಾ. ಒಂದು ಸಮುದಾಯ ಭವನ ಇಲ್ಲ. ಸಣ್ಣ ಮಕ್ಕಳಿಗೂ ಅಂಗನವಾಡಿಯು ಇಲ್ಲ ಇದು ನಮ್ಮೂರಿನ ದುರಂತ” ಎಂದು ಬಕ್ಕಪ್ಪನಕೊಪ್ಪಲು ಗ್ರಾಮಸ್ಥರು ಅಳಲು ತೋಡಿಕೊಂಡರು.

“ಬಕ್ಕಪ್ಪನ ಕೊಪ್ಪಲು ಗ್ರಾಮದದಲ್ಲಿ ಶಾಲೆಯಿಲ್ಲ. ಶಾಲೆಯಿರುವ ಬಂದೂರು ಗ್ರಾಮಕ್ಕೆ ಪ್ರತಿನಿತ್ಯ ಅರವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಡಾಡುತ್ತಾರೆ. ಅಷ್ಟೇ ಅಲ್ಲದೆ ನೂರಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ನಮ್ಮ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಸಮರ್ಪಕವಾಗಿಲ್ಲ. ರಸ್ತೆ ತುಂಬಾ ಬರೀ ಗುಂಡಿಗಳಿವೆ. ವೃದ್ಧರು ಪೆನ್ಷನ್ ತರಲು, ವಿದ್ಯಾರ್ಥಿಗಳು ಶಾಲೆಗೆ ಹಾಗೂ ಗ್ರಾಮಸ್ಥರು ರೇಶನ್ ಅಕ್ಕಿ ತರಲು ಕೂಡ ಸೊಸೈಟಿಗೆ ನಮ್ಮೂರಿಂದ ಬೇರೆ ಊರಿಗೆ ತರಬೇಕು. ತೆರಳಿದ ನಂತರ ಎಲ್ಲಿ ಬೀಳುತ್ತೇವೋ ಎಲ್ಲಿ ಏನು ತೊಂದರೆ ಆಗುತ್ತದೆಯೋ ಎಂಬ ಭಯ ನಮ್ಮೂರಿನ ಗ್ರಾಮಸ್ಥರೆಲ್ಲರಲ್ಲೂ ಸಹ ಕಾಡುತ್ತದೆ. ಕಳೆದ 20 ವರ್ಷಗಳಿಂದ ಸುತ್ತಮುತ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ ಕಾರ್ಯವಾಗಿಲ್ಲ. ಹೊಸ ರಸ್ತೆಯ ನಿರ್ಮಾಣ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಕೇಳಿದರೆ ಏನು ಉತ್ತರವನ್ನು ಕೊಡಲ್ಲ. ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳು ತೆರಿಗೆ ವಸೂಲಿಗೆ ಬಂದರೆ ರಾಜಕಾರಣಿಗಳು ಮತ ಕೇಳುವ ಸಂದರ್ಭದಲ್ಲಿ ಮಾತ್ರ ನಮ್ಮೂರಿಗೆ ಬರುತ್ತಾರೆ. ಬೇರೆ ಸಮಯದಲ್ಲಿ ಬಕ್ಕಪ್ಪನ ಕೊಪ್ಪಲು ಎಂಬ ಊರಿದೆ ಎಂಬುದನ್ನು ಮರೆತುಬಿಡುತ್ತಾರೆ. ಮಳೆಗಾಲದಲ್ಲಿ ರಸ್ತೆಯ ಇಂಚಿಂಚಿಗೂ ಇರುವ ಗುಂಡಿಗಳು ತುಂಬಿ ತುಳುಕುತ್ತಿರುತ್ತವೆ. ಅಂತಹ ರಸ್ತೆಯಲ್ಲಿಯೇ ನಾವು ದಿನನಿತ್ಯ ಸಂಚರಿಸಬೇಕಾದ ವಾತಾವರಣವಿದೆ. ಇನ್ನು ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ ಬರುವ ನೀರೆಲ್ಲ ಮನೆಗಳಿಗೆ ನುಗ್ಗಿತ್ತಿದೆ ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಗಮನಹರಿಸಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು” ಎಂದು ಗ್ರಾಮದ ಯುವಕ ಸಂತೋಷ್ ಮನವಿ ಮಾಡಿದರು.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಗ್ರಾಮ ಪಂಚಾಯತ್‌ನಲ್ಲಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡ ಎಸ್‌ಐಟಿ
10 ಗಂಟೆಗೆ ಸ್ಕೂಲಿಗೆ ಬರಬೇಕೆಂದರೆ 8 ಗಂಟೆಗೆ ಮನೆ ಬಿಡಬೇಕು, ಅಷ್ಟು ಟೈಮ್ ಬೇಕು ಒಂದೂವರೆ ಕಿಲೋಮೀಟರ್ ಹೋಗೋಕೆ, ಬರೋ ರೋಡ್ ತುಂಬಾ ಬರೀ ಗುಂಡಿನೇ ಇದಾವೆ. ಎಷ್ಟೋ ಸಲ ಜಾರಿ ಬಿದ್ದು ಸ್ಕೂಲಿಗೆ ಹೋಗೋದು ಬಿಟ್ಟು ಮನೆಗೆ ವಾಪಾಸ್ ಹೋಗಿದ್ದೇವೆ. ಬರೋ ಅಷ್ಟ್ರಲ್ಲಿ ಯುನಿಫಾರ್ಮ್, ಬ್ಯಾಗ್ ಎಲ್ಲ ಕೊಳೆ ಆಗಿರುತ್ತೆ. ದಿನ ಇದೆ ಪರಿಸ್ಥಿತಿ ಆಗಿದೆ. ಮಳೆ ಬಂದ್ರೆ ಅಂತೂ ನಮ್ಮ ಪರಿಸ್ಥಿತಿ ಯಾರಿಗೂ ಬೇಡ ಆಗಿರುತ್ತೆ. ನಮ್ಮ ಕಷ್ಟ ಯಾರಿಗೂ ಕಾಣುಸ್ತಿಲ್ಲ. ಗೊತ್ತಿದ್ರು ಗೊತ್ತಿಲ್ಲ ಅನ್ನೋತರ ಇರ್ತಾರೆ, ನಮಗೆ ನ್ಯಾಯ ಬೇಕು, ನಮ್ಮೂರಿಗೆ ರಸ್ತೆ ಚರಂಡಿ ಬೇಕು” ಇದು 10ನೇ ತರಗತಿ ವಿದ್ಯಾರ್ಥಿಯೊಬ್ಬನ ಮಾತು.
ಬಂದೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಸಿಂಹ ಮಾತನಾಡಿ, “ಬಕ್ಕಪ್ಪನಕೊಪ್ಪಲು ಹಾಗೂ ಸಿದ್ದರಟ್ಟಿ ಗ್ರಾಮದಲ್ಲಿನ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು, ಪಂಚಾಯಿತಿ ವತಿಯಿಂದ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೆ ಸಮಸ್ಯೆ ಬಗೆಹರಿಸುತ್ತೇವೆ” ಎಂದಿದ್ದಾರೆ.
ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಚುನಾವಣೆ ಸಮಯದಲ್ಲಿ ಮತ ಕೇಳಲು ಬರುತ್ತಾರೆ ಆದರೆ ನಂತರ ಈ ಗ್ರಾಮಗಳಿರುವುದನ್ನೇ ಮರೆಯುತ್ತಾರೆ ಎಂಬ ಗ್ರಾಮಸ್ಥರ ಆಕ್ರೋಶವು ಸರಿಯಾದದ್ದೇ. ಎರಡು ದಶಕಗಳಿಂದ ಅಧಿಕಾರಿಗಳಿಂದ ಸ್ಪಂದನೆ ಇಲ್ಲ ಎನ್ನುವುದೇ ಸರ್ಕಾರದ ನಿರ್ಲಕ್ಷ್ಯದ ತಾಜಾ ಉದಾಹರಣೆ. ಅಧಿಕಾರಿಗಳು ಗ್ರಾಮಸ್ಥರ ತೀವ್ರ ಅಸಮಾಧಾನ, ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವ ಜವಾಬ್ದಾರಿ ಹೊರಬೇಕಾಗಿದೆ.




