“ಭವಿಷ್ಯದಲ್ಲಿ ಪೊಲೀಸರ ವೃತ್ತಿ ಮತ್ತಷ್ಟು ಕಠಿಣವಾಗಲಿದ್ದು, ಹೆಚ್ಚುತ್ತಿರುವ ಹೊಸ ರೀತಿಯ ಅಪರಾಧ ಕೃತ್ಯಗಳು ಸವಾಲಾಗಲಿವೆ, ಪೊಲೀಸರು ಹೊಸ ಟೂಲ್ ಗಳನ್ನು ಪರಿಣಾಮಕಾರಿಯಾಗಿ ಬಳಸಬೇಕಿದೆ” ಎಂದು ದಾವಣಗೆರೆಯಲ್ಲಿ ಪೂರ್ವ ವಲಯ (IGP) ಪೊಲೀಸ್ ಮಹಾನಿರೀಕ್ಷಕ ಡಾ.ರವಿಕಾಂತೇಗೌಡ ಐಪಿಎಸ್ ರವರು ಹೇಳಿದರು* .

ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ನಡೆದ 7 ನೇ ವಲಯ ಪೊಲೀಸ್ ಕರ್ತವ್ಯಕೂಟ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ “ಕರ್ನಾಟಕದಲ್ಲಿ ಪ್ರತಿ ವರ್ಷ 27 ಸಾವಿರ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ವಂಚನೆಯಾಗುತ್ತಿರುವ ಮೊತ್ತ ನೂರಾರು ಕೋಟಿಗಳಾಗಿವೆ. ಈ ರೀತಿ ಹೊಸ ಅಪರಾಧಗಳು, ಹೊಸ ಶೈಲಿಯ ಅಪರಾಧಿಗಳು ನಮ್ಮ ಮುಂದೆ ಬರುತ್ತಿವೆ. ಇದರ ಮಧ್ಯೆ ಪೊಲೀಸ್ ಇಲಾಖೆಯಲ್ಲಿ ಕಟ್ಟಡಗಳು ಮತ್ತು ವಾಹನಗಳು ಉತ್ತಮಗೊಂಡಿರಬಹುದು, ಆದರೆ, ಪೊಲೀಸರಿಗೆ ಎದುರಾಗಿರುವ ಸವಾಲುಗಳ ಸ್ವರೂಪ, ಆಯಾಮ ಬದಲಾಗಿದೆ” ಎಂದು ಅಭಿಪ್ರಾಯಪಟ್ಟರು.
“ಸೈಬರ್ ಅಪರಾಧಿಗಳು ಕೃತ್ಯ ಎಸಗಲು ಅನೇಕ ಟೂಲ್ ಗಳನ್ನು ಉಪಯೋಗಿಸುತ್ತಿದ್ದಾರೆ. ಅವುಗಳನ್ನು ಭೇದಿಸಲು ಇಲಾಖೆ ಕೂಡ ಅನೇಕ ಟೂಲ್ ಗಳನ್ನು ಉಪಯೋಗಿಸುತ್ತಿದೆ. ಆದರೆ ಈ ರೀತಿಯ ಕೃತ್ಯಗಳು ನಡೆಯದೇ ಇರಲು ಅಥವಾ ಅವುಗಳನ್ನು ಪರಿಣಾಮಕಾರಿಯಾಗಿ ಪತ್ತೆ ಹಚ್ಚುವ ಟೂಲ್ ಗಳನ್ನು ಉಪಯೋಗಿಸುವ ಚಾಕಚಕ್ಯತೆಯನ್ನು ಗಳಿಸಿಕೊಂಡರೆ ಅಪರಾಧಿಗಳಿಗಿಂತ ನಾವು ಒಂದು ಹೆಜ್ಜೆ ಮುಂದೆ ಹೋಗಬಹುದು. ಇಲ್ಲವಾದರೆ ಅಪರಾಧಿ ಸಾವಿರ ಹೆಜ್ಜೆ ಮುಂದೆ ಇರುತ್ತಾನೆ, ನಾವು ಇದ್ದಲ್ಲೇ ಇರುತ್ತೇವೆ” ಎಂದು ತಿಳಿಸಿದರು.

“ನ್ಯಾಯಾಲಯದ ಮುಂದೆ ವೈಯಕ್ತಿಕ ಸಾಕ್ಷಿಗಳು ಪ್ರಮಾಣ ವಚನ ತೆಗೆದುಕೊಂಡ ನಂತರ, ಹಿಂದೆ ಪೊಲೀಸರಿಗೆ ನೀಡಿದ ಹೇಳಿಕೆಗೆ ವಿರುದ್ಧವಾಗಿ ನುಡಿಯುತ್ತಾರೆ. ಇದಕ್ಕೆ ಒತ್ತಡ, ಆಸೆ-ಆಮಿಷ ಅಥವಾ ವೈರಾಗ್ಯ ಸೇರಿದಂತೆ ಬೇರೆ ಬೇರೆ ಕಾರಣಗಳು ಇರಬಹುದು.. ಆದರೆ ವೈಜ್ಞಾನಿಕವಾಗಿ ಸಂಗ್ರಹ ಮಾಡಿದಂತಹ ಸಾಕ್ಷಿಗಳು ಯಾವತ್ತೂ ಬದಲಾವಣೆ ಆಗುವುದಿಲ್ಲ. ಅವುಗಳೇ ಪೊಲೀಸರನ್ನು ಕಾಪಾಡುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತರಬೇತಿಯ ನಂತರ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಶಿವಮೊಗ್ಗ ವಿಭಾಗದ ಸಂಚಾರಿ ವಿಭಾಗದ ಸಿಪಿಐ ದೇವರಾಜ್ ಮಾತನಾಡಿ, “ಪೊಲೀಸ್ ಕರ್ತವ್ಯದಲ್ಲಿ ವೃತ್ತಿಪರತೆಯನ್ನು ಬೆಳೆಸಿಕೊಳ್ಳಲು ಮತ್ತು ಆಧುನಿಕ ತನಿಖಾ ಕೌಶಲ್ಯಗಳನ್ನು ಕಲಿಯಲು ಪೊಲೀಸ್ ಕರ್ತವ್ಯ ಕೂಟಗಳು ಅತ್ಯಂತ ಸಹಕಾರಿಯಾಗಿವೆ. ಇಂದಿನ ದಿನಗಳಲ್ಲಿ ಸಾರ್ವಜನಿಕರು ಪೊಲೀಸರ ಕಾರ್ಯವೈಖರಿ ಮತ್ತು ವೃತ್ತಿಪರತೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ” ಎಂದು ಇತ್ತೀಚೆಗೆ ಮೈಸೂರು ದಸರಾ ಹಾಗೂ ಧರ್ಮಸ್ಥಳದ ಪ್ರಕರಣಗಳನ್ನು ಉದಾಹರಿಸಿದರು.
ಸಮಾರೋಪ ಸಮಾರಂಭದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಪಿಎಸ್ ಐ ಅರವಿಂದ ಬಿ ಎಸ್ ಮಾತನಾಡಿ “ನಮ್ಮ ದೈನಂದಿನ ಕರ್ತವ್ಯಗಳಲ್ಲಿ ತರಬೇತಿಯು ತುಂಬಾ ಪ್ರಮುಖವಾಗಿದೆ. ಇಂತಹ ಸ್ಪರ್ದೇಗಳಿಂದ ನಮ್ಮ ಕರ್ತವ್ಯದ ಸಮಯದಲ್ಲಿ ಹೆಚ್ಚಿನ ಪರಿಪಕ್ವತೆ ಕಾಣಬಹುದಾಗಿದೆ” ಎಂದು ತಿಳಿಸಿದರು.

7 ನೇ ವಲಯ ಪೊಲೀಸ್ ಕರ್ತವ್ಯಕೂಟದಲ್ಲಿ ಎರಡು ದಿನಗಳ ಕೂಟದಲ್ಲಿ 23 ಪ್ರಶಸ್ತಿಗಳನ್ನು ಪಡೆದುಕೊಂಡ ದಾವಣಗೆರೆ ಪೊಲೀಸ್ ತಂಡ ಸರ್ವೋತ್ತಮ ಪ್ರಶಸ್ತಿಗೆ ಭಾಜನವಾಯಿತು. ದಾವಣಗೆರೆ ಜಿಲ್ಲೆಯ ಶ್ವಾನದಳದ ‘ತಾರಾ’ ಬೆಸ್ಟ್ ಡಾಗ್ ಪ್ರಶಸ್ತಿ ಪಡೆಯಿತು.
ಪೊಲೀಸ್ ಪೋಟೋಗ್ರಾಫಿ ಸ್ಪರ್ದೆಯಲ್ಲಿ ಪ್ರಥಮ ಹಾಗೂ ವಿಡಿಯೋಗ್ರಾಫಿಯಲ್ಲಿ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ಪೋಟೋಗ್ರಾಫರ್ ಪ್ರಶಾಂತ್ ಕುಮಾರ ಭಾಜನರಾದರು.
ಈ ಸುದ್ದಿ ಓದಿದ್ದೀರಾ? ಭಾರೀ ಮಳೆ | ನೆಲಕಚ್ಚಿದ ಮೆಕ್ಕೆಜೋಳದ ಇಳುವರಿ ಕುಸಿತ: ನಷ್ಟದಲ್ಲಿರುವ ರೈತರನ್ನು ಮೇಲೆತ್ತುವವರು ಯಾರು?
ಕಾರ್ಯಕ್ರಮದಲ್ಲಿ ದಾವಣಗೆರೆಯ ಪೊಲೀಸ್ ಅಧೀಕ್ಷಕಿ ಶ್ರೀಮತಿ ಉಮಾ ಪ್ರಶಾಂತ್, ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಶ್ರೀಮತಿ ಯಶೋಧಾ ವಂಟಗೋಡಿ, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ದಾವಣಗೆರೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ವಲಯ ಮಟ್ಟದ ಕ್ರೀಡಾಕೂಟದ ನೋಡಲ್ ಅಧಿಕಾರಿ ಡಿವೈಎಸ್ಪಿ ಶ್ರೀ ರುದ್ರೇಶ್ ಎ ಕೆ ಹಾಗೂ ಡಿವೈಎಸ್ಪಿ ಪಿ ಬಿ ಪ್ರಕಾಶ್ ರವರು ಸೇರಿದಂತೆ ಅನೇಕರು ಹಾಜರಿದ್ದರು..





