ಒಳ ಮೀಸಲಾತಿ ಜಾರಿಗೊಳಿಸಿ ಸರಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು, ಒಳಮೀಸಲಾತಿ ಸಂಬಂಧ ಗೊಂದಲಗಳನ್ನು ಶೀಘ್ರ ಪರಿಹರಿಸಬೇಕು’ ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಮಾದಿಗ ಸಮುದಾಯದಿಂದ ಶುಕ್ರವಾರ ದಾವಣಗೆರೆ ನಗರ ಹಾಗೂ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 6 ಗಂಟೆಗೆ ಆಗಮಿಸಿದ ಪ್ರತಿಭಟನಾಕಾರರು ನಗರದ ವಿವಿಧ ಭಾಗಗಳಲ್ಲಿ ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು.

ಬೆಳಿಗ್ಗೆ 6 ಗಂಟೆಗೆ ಆರಂಭಗೊಂಡ ಮಧ್ಯಾಹ್ನ 12ರ ವರೆಗೆ ಅಲ್ಲಲ್ಲಿ ಮುಂದುವರೆಯಿತು. ಬಂದ್ ಗೆ ದಲಿತ ಸಂಘರ್ಷ ಸಮಿತಿ, ಮಾದಿಗ ಸಂಘಟನೆಗಳು, ಎಡ ಪಕ್ಷಗಳ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಜನಪರ, ಒಳಮೀಸಲಾತಿ ಪರ ಸಂಘಟನೆಗಳು ಬೆಂಬಲ ಸೂಚಿಸಿದ್ದವು.

ಬಂದ್ ಬಿಸಿ ಸಾರ್ವಜನಿಕರಿಗೆ ಮುಟ್ಟುತ್ತಿದ್ದಂತೆ ಬೆಳಿಗ್ಗೆ 9ಗಂಟೆಗೆ ಸುಮಾರಿಗೆ ಆಗಮಿಸಿದ ಪೊಲೀಸ್ ಮೀಸಲು ಪಡೆ, ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಚದುರಿಸಲು ಹರಸಾಹಸಪಟ್ಟರು. ಕೆಎಸ್ಆರ್ಟಿಸಿ, ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ, ಜಯದೇವ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಬಂಧಿಸಿ ಕರೆದೊಯ್ದರು. ನೂರಕ್ಕೂ ಹೆಚ್ಚು ಮಂದಿ ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು
ಮಾತನಾಡಿ, “ಒಳಮೀಸಲಾತಿ ಕಡೆಗಣಿಸಿ ನೇಮಕಾತಿ ನಡೆಸುವುದು ಸಂವಿಧಾನದ ಮತ್ತು ಸುಪ್ರೀಂ ಕೋರ್ಟ್ ನ ಆದೇಶದ ಉಲ್ಲಂಘನೆ. ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವಂತಹ ಸರಕಾರಕ್ಕೆ ಉತ್ತರ ನೀಡಬೇಕಾಗಿದೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಸಮುದಾಯದ ಶಾಸಕರು ಮತ್ತು ಸಚಿವರು ಅಲ್ಲಿರುವುದಕ್ಕೆ ಯಾವುದೇ ನೈತಿಕತೆ ಇಲ್ಲ. ಸಚಿವರು, ನಿಗಮ ಮಂಡಳಿ ಅಧ್ಯಕ್ಷರು ಸೇರಿದಂತೆ ಎಲ್ಲರೂ ರಾಜೀನಾಮೆ ನೀಡಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು” ಎಂದು ಒತ್ತಾಯಿಸಿದರು.

ಮಾದಿಗ ಸಮುದಾಯದ ಮುಖಂಡರು ಮಾತನಾಡಿ, “ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿದೆ. ಒಳಮೀಸಲಾತಿ ಇಲ್ಲದೆ ನೇಮಕಾತಿ ನಡೆದರೆ ನೂರಾರು ವರ್ಷಗಳಿಂದ ಇದುವರೆವಿಗೆ ನಡೆದಿರುವ ಅನ್ಯಾಯ ಮುಂದುವರಿಯಲಿದೆ. ಹೀಗಾಗಿ ಒಳಮೀಸಲಾತಿ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ಮಾಡಬೇಕು. ಒಳಮೀಸಲಾತಿ ಗೊಂದಲ ಪರಿಹರಿಸಿ ಮಾದಿಗರಿಗೆ ನ್ಯಾಯಕೊಡಬೇಕು. ಇಲ್ಲವಾದಲ್ಲಿ ಈ ಹೋರಾಟ ರಾಜ್ಯವ್ಯಾಪಿ ಪ್ರಾರಂಭವಾಗುತ್ತದೆ. ರಾಜ್ಯಾದ್ಯಂತ ಬಂದ್ ಮಾಡಿ ಹೋರಾಟ ತೀವ್ರಗೊಳಿಸುತ್ತೇವೆ” ಎಂದು ಆಗ್ರಹಿಸಿದರು.

ಒಳಮೀಸಲಾತಿ ಪರ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಎಚ್ ಮಲ್ಲೇಶ್, ಆಲೂರು ನಿಂಗರಾಜ,ಕುಂದುವಾಡ ಮಂಜುನಾಥ್, ವಕೀಲ ಬಿಎಂ ಹನುಮಂತಪ್ಪ, ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್, ಬಸವರಾಜಪ್ಪ, ಮಾಜಿ ಕಾರ್ಪೊರೇಟರ್ ಎಂ ಹಾಲೇಶ್, ಮಾದಿಗ ಸಮಾಜದ ಹಿರಿಯ ಮುಖಂಡರಾದ ಎಚ್ ವಿಶ್ವನಾಥ್, ಎಚ್ ಸಿ ಗುಡ್ಡಪ್ಪ, ಸಾಹಿತಿ ಹುಚ್ಚಂಗಿ ಪ್ರಸಾದ್, ಹರಿಹರ ತಾಲೂಕ ಸಂಚಾಲಕ ಪಿ ಜೆ ಮಹಾಂತೇಶ್, ಲಿಂಗರಾಜು ಗಾಂಧಿನಗರ, ಮಂಜುನಾಥ್ ಶಾಂತಿನಗರ, ಡಿಎಸ್ಎಸ್ ಸಂಚಾಲಕ ರಾಘವೇಂದ್ರ ಕಡೆಮನಿ, ವೀರಭದ್ರಪ್ಪ, ಕಡ್ತಿ ಅಂಜಿನಪ್ಪ, ಭೀಮಾರ್ಮಿ ಜಿಲ್ಲಾ ಸಂಚಾಲಕ ನಿಂಗರಾಜ್ ಚಿಕ್ಕನಹಳ್ಳಿ , ರವಿಕುಮಾರ್ ಎಂ ಕೆ ಟಿ ಜೆ ನಗರ, ಶಿವಶಂಕರ್, ವೀರಭದ್ರಪ್ಪ, ನರಗನಹಳ್ಳಿ ರಾಮಚಂದ್ರಪ್ಪ, ಕುಂದವಾಡ ಮಹಾಂತೇಶ್, ಅಕ್ಕಿ ಬಸವರಾಜಪ್ಪ, ಅಜಯ್ ಕಡ್ಲೆಬಾಳು, ಹೊನ್ನಾಳಿ ತಮ್ಮಣ್ಣ, ಕೊಡತಾಳು ರುದ್ರೇಶ್ , ಚನ್ನಗಿರಿ ದಸಂಸ ಮಂಜು, ವಿದ್ಯಾರ್ಥಿ ಘಟಕದ ಚಿರಂಜೀವಿ, ಜಗಳೂರು ಕುಬೇಂದ್ರಪ್ಪ, ಹನುಮಂತಪ್ಪ, ವಕೀಲರಾದ ಮಾರುತಿ, ಅಂಜಿನಪ್ಪ, ಹರಪನಹಳ್ಳಿ ಮೈಲಪ್ಪ ಕಬ್ಬಳ್ಳಿ, ಪರಸಪ್ಪ ಕಬ್ಬಳ್ಳಿ, ರವಿಕುಮಾರ್ ಟಿ, ಮೂರ್ತಿ, ಕೆಂಚಮ್ಮನಹಳ್ಳಿ ರುದ್ರೇಶ್, ಗುಂಗುರು ಮಂಜುನಾಥ, ಗುನ್ನೂರ್ ಬಸವರಾಜ್, ಮಾಂತೇಶ್ ಹಾಲವರ್ತಿ, ವಕೀಲರಾದ ಶಾಮ್, ಮಂಜಪ್ಪ, ಸತೀಶ್ ಅರವಿಂದ್ ಸೇರಿದಂತೆ
ನೂರಾರು ಒಳಮೀಸಲಾತಿ ಪರ ಹೋರಾಟಗಾರರು ಬಂಧನಕ್ಕೊಳಗಾದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆಪಿಎಸ್ ಶಾಲೆಗಳು ವಿದ್ಯಾರ್ಥಿಗಳಿಗೆ ಗಾಳಿಗೋಪುರ ಹಾಗೂ ಮಾಡಿದ ಅವಮಾನ; ಪ್ರೊ. ಈಶ್ವರಪ್ಪ
ಒಳಮೀಸಲಾತಿ ಹೋರಾಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.




