ರೈತರು ಬೆಳೆದ ಭತ್ತಕ್ಕೆ ರೂ.3500, ಮೆಕ್ಕೆಜೋಳಕ್ಕೆ ರೂ 3,000 ಬೆಂಬಲ ಬೆಲೆ ನೀಡಿ, ಸರ್ಕಾರ ಬೆಳೆ ಖರೀದಿಗಾಗಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಬೆಳೆ ಕಟಾವು ಮಾಡುವ ಯಂತ್ರಗಳಿಂದ ಮಾಲೀಕರು ಏಜೆಂಟರು ರೈತರಿಂದ ದುಬಾರಿ ಬೆಲೆ ಪಡೆಯುತ್ತಿದ್ದು, ರೈತರ ಸುಲಿಗೆ ತಡೆಯಲು ಬೆಲೆ ನಿಗದಿಗೆ ಒತ್ತಾಯಿಸಿ, (ಎಐಕೆಕೆಎಂಎಸ್) ಅಖಿಲ ಭಾರತ ರೈತರು ಕೃಷಿ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ದಾವಣಗೆರೆ ಉಪವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡರು “ದಾವಣಗೆರೆ ಸೇರಿದಂತೆ ಮದ್ಯ ಕರ್ನಾಟಕ ಮತ್ತು ಇತರೆಡೆಗಳಲ್ಲಿ ಭತ್ತ ಮತ್ತು ಮೆಕ್ಕೆಜೋಳ ಹೆಚ್ಚು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಮುಂಗಾರಿನ ಪ್ರಾರಂಭದ ಹಂತದಲ್ಲಿ ಮೆಕ್ಕೆಜೋಳಕ್ಕೆ ಉತ್ತಮವಾಗಿದ್ದ ಬೆಲೆ ಈಗ ಬಹಳಷ್ಟು ಕುಸಿದಿದೆ. ಮತ್ತು ಭತ್ತದ ಬೆಲೆಯೂ ಸಹ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಜೊತೆಗೆ ಇಂದು ರೈತರ ಉತ್ಪಾದನಾ ವೆಚ್ಚವೂ ಸಹ ಬಹಳಷ್ಟು ಹೆಚ್ಚಾಗಿದ್ದು, ರೈತರು ಇಂದು ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇಂತಹ ಸಂದರ್ಭದಲ್ಲಿ ಸರ್ಕಾರ ನೀಡುವ ಬೆಂಬಲ ಬೆಲೆ ರೈತರನ್ನು ಸ್ವಲ್ಪ ಸಂಕಷ್ಟಗಳಿಂದ ಪಾರು ಮಾಡುವಂತಿತ್ತು. ಆದರೆ ಸರ್ಕಾರದ ವತಿಯಿಂದ ನಡೆಯುವ ಬೆಳೆ ಖರೀದಿಯು ಸಹ ಇಂದು ಸರಿಯಾದ ಸಮಯಕ್ಕೆ ನಡೆಯದೆ, ಸರ್ಕಾರ ಕೂಡ ಖಾಸಗಿ ವ್ಯಾಪಾರಸ್ಥರಿಗೆ ನೇರವಾಗಿ ಅನುಕೂಲ ಮಾಡಿಕೊಟ್ಟಂತಿದೆ. ಹಾಗಾಗಿ ಕೂಡಲೇ ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವುದು ರೈತರಿಗೆ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

“ಇತ್ತೀಚೆಗೆ ಸುರಿದಿದ್ದ ನಿರಂತರವಾದ ಮಳೆಯಿಂದಾಗಿ ಭತ್ತ ಹಾಗೂ ಮೆಕ್ಕೆಜೋಳ ಬೆಳೆಗಳು ಸಾಕಷ್ಟು ನಷ್ಟವಾಗಿದೆ. ಮತ್ತು ಮಳೆಗೆ ಭತ್ತದ ಬೆಳೆಯು ನೆಲಕ್ಕುರುಳಿದೆ, ಹಾಗೂ ಮೆಕ್ಕೆಜೋಳದ ಇಳುವರಿ ಕೂಡ ಕಡಿಮೆಯಾಗಿದೆ. ಪರಿಸ್ಥಿತಿ ಹೀಗಿದ್ದಾಗ, ಭತ್ತ ಕಟಾವು ಮಾಡುವ ಯಂತ್ರಗಳ ಮಾಲೀಕರು, ಏಜೆಂಟರು ರೈತರ ಇಂತಹ ಸಂಕಷ್ಟಮಯ ಪರಿಸ್ಥಿತಿಯನ್ನು ಬಳಸಿಕೊಂಡು ಭತ್ತ ಕಟಾವಿಗೆ ಒಂದು ಗಂಟೆಗೆ ಅತೀ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿದ್ದಾರೆ, ಭತ್ತ ಕಟಾವು ಯಂತ್ರಗಳಿಗೆ ಒಂದು ಗಂಟೆಗೆ 2000 ರೂ ಗಳಿಗಿಂತ ಹೆಚ್ಚಿನ ಬೆಲೆ ತೆಗೆದುಕೊಳ್ಳದಂತೆ ಜಿಲ್ಲಾಧಿಕಾರಿ ಯವರು ಅದೇಶಹೊರಡಿಸಿ ಮತ್ತು ಹೆಚ್ಚಿನ ಬೆಲೆ ತೆಗೆದುಕೊಂಡಲ್ಲಿ ಅಂತಹ ಯಂತ್ರಗಳ ಮಾಲೀಕರ ಮೇಲೆ ಗ್ರಾಮ ಪಂಚಾಯತಿ ವತಿಯಿಂದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆದೇಶಿಸಬೇಕು” ಎಂದು ಒತ್ತಾಯಿಸಿದರು.

“ರಾಜ್ಯಾದ್ಯಂತ ಇತ್ತೀಚಿಗೆ ನಿರಂತರ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಭತ್ತ,ಮೆಕ್ಕೆಜೋಳ ಸೇರಿ ಬೆಳೆನಷ್ಟವಾಗುವ ಎಲ್ಲಾ ಸನ್ನಿವೇಶಗಳು ಸೃಷ್ಟಿಯಾಗಿವೆ. ಇಂತಹ ಕಷ್ಟಕರ ಸಂದರ್ಭದಲ್ಲಿ ರೈತರ ಹಿತ ಕಾಯುವುದು ತಮ್ಮ ಮೊದಲ ಜವಾಬ್ದಾರಿಯಾಗಿದೆ, ಆದ್ದರಿಂದ ಪ್ರತಿ ಹಳ್ಳಿಯಲ್ಲಿಯೂ ಸಹ ಸಮೀಕ್ಷೆ ಮಾಡಿ, ಎಲ್ಲೆಲ್ಲಿ ನಷ್ಟವಾಗಿದೆಯೋ ಅಲ್ಲಿ ಪ್ರತಿಯೊಬ್ಬ ರೈತರಿಗೂ ನಷ್ಟ ಪರಿಹಾರ ಒದಗಿಸಬೇಕು ಎಂದು ಎಐಕೆಕೆಎಂಎಸ್ ಜಿಲ್ಲಾ ಸಮಿತಿಯು ಮನವಿ ಮಾಡುತ್ತದೆ” ಎಂದು ತಿಳಿಸಿದರು.
“ಬೇಡಿಕೆಗಳಾದ ಖರೀದಿ ಕೇಂದ್ರವನ್ನು ಕೂಡಲೇ ಪ್ರಾರಂಭಿಸಿ, ಭತ್ತಕ್ಕೆ 3,500 ರೂ , ಮೆಕ್ಕೆಜೋಳ ಬೆಳೆಗೆ 3,000 ರೂ ಬೆಂಬಲ ಬೆಲೆ ನೀಡಿ, ಸರ್ಕಾರವೇ ಖರಿಧಿಸಬೇಕು. ಮೆಕ್ಕೆಜೋಳ ಬೆಳೆಯನ್ನು ಖರೀದಿ ಕೇಂದ್ರದ ಮೂಲಕ ಖರೀದಿಸಬೇಕು. ಮಳೆಯಿಂದಾಗಿ ನಷ್ಟಕ್ಕೀಡಾದ ಬೆಳೆಗೆ ಬೆಲೆ ನಷ್ಟ ಪರಿಹಾರ ಘೋಷಿಸಬೇಕು. ಭತ್ತ & ಮೆಕ್ಕೆಜೋಳವನ್ನು ಖರೀದಿ ಮಾಡಲು ಸರ್ಕಾರ ಒಂದು ಆವರ್ತನಿಧಿಯನ್ನು ಸ್ಥಾಪಿಸಬೇಕು ಎನ್ನುವ ರೈತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತ ಕಾರ್ಮಿಕ ಜನವಿರೋಧಿ ನೀತಿ ಬದಲಾಯಿಸಲು ಫ್ರೀಡಂ ಪಾರ್ಕಿನಲ್ಲಿ ಹೋರಾಟ
ಜಿಲ್ಲಾ ಅಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತ,ಜಿಲ್ಲಾ ಉಪಾಧ್ಯಕ್ಷ ಬಸವರಾಜಪ್ಪ ನೀರ್ಥಡಿ, ಸಹಕಾರ್ಯದರ್ಶಿ ನಾಗರಾಜ್ ರಾಮಗೊಂಡನಹಳ್ಳಿ, ಮುಖಂಡರಾದ ರಾಜು, ಸತೀಶ್ ಕೈದಾಳೆ, ಎಂದು ಎಲ್ಲಪ್ಪ ದ್ಯಾಮೇನಹಳ್ಳಿ , ಲೋಕೇಶ್ ನೀರ್ಥಡಿ , ಬೀರ್ ಲಿಂಗಪ್ಪ , ಜಂಪಣ್ಣ ಗುಡಾಲ್ , ತಿಪ್ಪೇಶ್,, ರಾಜಪ್ಪ ನಲ್ಕುಂದ , ಜಯಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು





