ನೆರಳು ಬೀಡಿ ಕಾರ್ಮಿಕರ ಯೂನಿಯನ್, ದಲಿತ-ಮುಸ್ಲಿಂ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ನಗರದ ಶಿವನಗರ 4ನೇ ತಿರುವಿನಲ್ಲಿ ಅಕ್ಷರದವ್ವ ಸಾವಿತ್ರಬಾಯಿ ಪುಲೆ, ಫಾತಿಮಾ ಶೇಕ್‌ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದಾವಣಗೆರೆ ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಹೆಚ್. ಅರುಣಕುಮಾರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಾತನಾಡಿ “ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಜಾತಿ ಭೇದ ಅಸಮಾನತೆಗಳ ವಿರುದ್ಧ ಹೋರಾಡಿ ಶಿಕ್ಷಣವೇ ಶೋಷಣೆ ವಿರುದ್ಧದ ಶಕ್ತಿ ಎಂದು ಸಾರಿದರು. ಸಮಾಜದ ವಿರೋಧ, ಕಲ್ಲೆಸೆತಗಳ ನಡುವೆಯೂ ಮೊಟ್ಟೆ ಸಗಣಿಯನ್ನು ಅಕ್ಷರಗಳ ಹೂವಾಗಿ ಸ್ವೀಕರಿಸಿ ಮಹಿಳೆಯರ ಶಿಕ್ಷಣ ಕ್ರಾಂತಿಗೆ ಕಾರಣರಾದರು. ವಿಧವಾ ಮಹಿಳೆಯರಿಗೆ ಹೆರಿಗೆ ಗೃಹ, ಬಾಲಹತ್ಯೆ ಪ್ರತಿಬಂಧಕ ಗೃಹಗಳನ್ನು ಸ್ಥಾಪಿಸಿದರು. ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂದು ನಂಬಿ ಅಕ್ಷರ ಜ್ಞಾನದ ಮೂಲಕ ಮಹಿಳೆಯರಿಗೆ ಘನತೆಯ ಬದುಕು ನೀಡಿದರು” ಎಂದು ಸ್ಮರಿಸಿದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಬಿ.ಎಂ. ಹನುಮಂತಪ್ಪ ಮಾತನಾಡಿ, “ಫಾತಿಮಾ ಶೇಕ್ ಅವರು ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕರಾಗಿದ್ದಾರೆ. ಅವರ ಕೊಡುಗೆ ಭಾರತದ ಮಹಿಳಾ ಮತ್ತು ಶಿಕ್ಷಣದ ಇತಿಹಾಸದಲ್ಲಿ ಅಳಿಸಲಾರದ ಛಾಪು ಮೂಡಿಸಿವೆ. ಸಾವಿತ್ರಿ ಭಾಪುಲೆ ಮತ್ತು ಫಾತಿಮಾ ಅವರ ಶಿಕ್ಷಣ ಕುರಿತ ಮೌಲ್ಯಗಳು ಸಂವಿಧಾನ ರಚನೆಯಲ್ಲೂ ಸಹಕಾರಿಯಾದವು” ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಎಸ್‌ಪಿ ರವಿನಾರಾಯಣ್ ಮಾತನಾಡಿ, “ಶಿಕ್ಷಣ ವಂಚಿತರಾದ ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಅವರಿಗೆ ಗೌರವ ನೀಡಬೇಕು” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಲಿತ ಮುಸ್ಲಿಂ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಜಬೀನಾ ಖಾನಂ ಮಾತನಾಡಿ, “ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಅವರು ಅವಮಾನ ಮತ್ತು ಪುರುಷ ಪ್ರಧಾನ ಸಮಾಜದ ಕೆಂಗಣ್ಣಿಗೆ ಒಳಗಾಗಿ ನೋವುಗಳನ್ನು ಮತ್ತು ಅವಮಾನಗಳನ್ನು ಅನುಭವಿಸಿದರೂ ಸಹ ಅಕ್ಷರ ಬಿತ್ತಿ ಅಕ್ಷರ ದಾಸೋಹಿಗಳಾಗಿದ್ದಾರೆ. ಇತಿಹಾಸದಲ್ಲಿ ಇಂಥ ಹಲವು ಮಹನೀಯರು ಮರೆಯಾಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸುವುದೇ ನಿಜವಾದ ಆಚರಣೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | 80 ಸಾವಿರ ಜನಸಂಖ್ಯೆಯ ಮುಸ್ಲಿಂ ಅಥವಾ ಅಹಿಂದ ವರ್ಗಕ್ಕೆ ಅವಕಾಶ ಕೊಡಿ: ಎಂಎಲ್ಸಿ ಅಬ್ದುಲ್ ಜಬ್ಬಾರ್
ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಅಬ್ದುಲ್ ಘನಿ ತಾಹೀರ್, ವಕೀಲರಾದ ರಿಜ್ವಿ ಖಾನ್, ಲಿಂಗರಾಜ್ ಗಾಂಧಿನಗರ, ಪರಿಸರ ಸಂರಕ್ಷಣ ವೇದಿಕೆ ರಾಜ್ಯ ಕಾರ್ಯದರ್ಶಿ ತಂಜೀಮ್ ಕಮಿಟಿ ಸದಸ್ಯರಾದ ಇಮ್ರಾನ್ ರಜ್ಜಾ, ನೆರಳು ಬೀಡಿ ಕಾಮಿಕರ ಯೂನಿಯನ್‌ನ ಕಾರ್ಯಕಾರಿ ಸಮಿತಿ ಸದಸ್ಯರಾದ ಫಾತಿಮಾ ಬಾನು, ದಲಿತ ಮುಸ್ಲಿಂ ಮಹಿಳಾ ಒಕ್ಕೂಟದ ಸದಸ್ಯರಾದ ಫಜೂನ್, ಮೆಹನತ್, ಸಬೀನಾ ತಾಜ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





