“ಕುಟುಂಬದ ಹಿರಿಯರ ಹೃದ್ರೋಗ ಶಸ್ತ್ರಚಿಕಿತ್ಸೆಗೆ 1.80 ಲಕ್ಷ ರು. ಸಾಲ ಪಡೆದು, ಐದಾರು ದಶಕದಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಜಮೀನು ಅಡಮಾನ ಮಾಡಿದ್ದ 3 ಎಕರೆ ಬಗರ್ ಹುಕುಂ ಜಮೀನು ಕಬಳಿಕೆಗೆ ಯತ್ನಿಸುತ್ತಿದ್ದು, ಬಡ ದಲಿತ ಕುಟುಂಬದ ಸಾಗುವಳಿ ಭೂಮಿ ವಾಪಾಸ್ಸು ಕೊಡಿಸಬೇಕು”ದಸಂಸ ದಾವಣಗೆರೆ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಒತ್ತಾಯಿಸಿದರು.
ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಚನ್ನಗಿರಿ ತಾಲೂಕು ಸಾರಥಿ ಹೊಸೂರು ಗ್ರಾಮದ ಶಿವಣ್ಣ ತಂದೆ ರುದ್ರಪ್ಪ ಮಾದಿಗ ಸಮುದಾಯದವರಾಗಿದ್ದು, ಶಿವಣ್ಣನ ತಂದೆ ಹಾಗೂ ಹಿರಿಯರು ಚನ್ನಗಿರಿ ಕಸಬಾ ಹೋಬಳಿ ದೊಂದ್ರಘಟ್ಟ ಗ್ರಾಮದ ರಿ.ಸ.ನಂ.56ರಲ್ಲಿ 3 ಎಕರೆ ಬಗರ್ ಹುಕುಂ ಜಮೀನನ್ನು ಐದಾರು ದಶಕದಿಂದಲೂ ಸಾಗುವಳಿ ಮಾಡಿಕೊಂಡು ಬಂದಿದ್ದು, ಈಗ
ಅದೇ ಜಮೀನನ್ನು ಕಬಳಿಸಲು 1.80 ಲಕ್ಷ ರು. ಸಾಲ ಕೊಟ್ಟಿದ್ದ ವ್ಯಕ್ತಿ ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಶಿವಣ್ಣನ ತಂದೆ ರುದ್ರಪ್ಪ ಐದಾರು ದಶಕದಿಂದಲೂ ದೊಂದ್ರಘಟ್ಟ ಗ್ರಾಮದ ಅರಣ್ಯ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದರು. ಮಾದಿಗ ಸಮುದಾಯದ ಶಿವಣ್ಣ ತಂದೆ ರುದ್ರಪ್ಪ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮಾದೇನಹಳ್ಳಿಯ ಶ್ರೀನಿವಾಸ ಎಂಬುವರ ಬಳಿ 1.80 ಲಕ್ಷ ರು.ಗೆ ಹಣ ಗುತ್ತಿಗೆ(ಮಿಟ್ಟಾ)ಗೆಂದು 2016ರಲ್ಲಿ
ಹಣಕ್ಕೆ ಬಡ್ಡಿ ಇಲ್ಲ, ಜಮೀನಿಗೆ ಬಾಡಿಗೆ ಇಲ್ಲ, ಹಣ ಕೊಟ್ಟಾಗ ಯಥಾಸ್ಥಿತಿಯಲ್ಲಿ ಜಮೀನನ್ನು ಬಿಟ್ಟು ಕೊಡಬೇಕೆಂಬ ಮಾತಿನಂತೆ ಹಣ ಪಡೆದಿದ್ದರು” ಎಂದು ಅವರು ಹೇಳಿದರು.
“ಶಿವಣ್ಣನಿಗೆ ಕೆಲವು ದಿನಗಳ ನಂತರ ಸಹೋದರಿಯರು ಹಣ ಹೊಂದಿಸಿ, ಜಮೀನು ಬಿಡಿಸಿಕೊಳ್ಳುವಂತೆ ಹೇಳಿದ್ದರು. ಅದರಂತೆ ಶಿವಣ್ಣ ಸಹ ತಾನೊಂದಿಷ್ಟು ಹಣ ಹೊಂದಿಸಿ, ಶ್ರೀನಿವಾಸರಿಗೆ ಕೊಟ್ಟು, ಜಮೀನು ಬಿಟ್ಟು ಕೊಡುವಂತೆ ಕೇಳಲು ಹೋಗಿದ್ದರು. ಆಗಿನಿಂದಲೂ ಶ್ರೀನಿವಾಸ ಎಂಬುವರು ಶಿವಣ್ಣನ ಕೈಗೆ ಸಿಕ್ಕಿರಲಿಲ್ಲ. ಶಿವಣ್ಣ, ಆತನ ಸಹೋದರಿಯರು ಸಾಕಷ್ಟು ಸಲ ಶ್ರೀನಿವಾಸ ಮನೆ ಬಳಿ ಹೋದರೂ ಸಿಕ್ಕಿರಲಿಲ್ಲ. ಇಡೀ ಊರಿನಲ್ಲಿ ಶಿವಣ್ಣ ರುದ್ರಪ್ಪ ಮಾತ್ರ ಮಾದಿಗ ಸಮುದಾಯದವರಿದ್ದಾರೆ. ಈಗ ಅದೇ ಕೊಟ್ಟು ಜಮೀನು ಕಬಳಿಸುವ ಪ್ರಯತ್ನ ನಡೆದಿದೆ” ಎಂದು ಅವರು ದೂರಿದರು.

“ಇತ್ತೀಚೆಗೆ ಶಿವಣ್ಣನ ಹೊಲದಲ್ಲಿ ಕೊಳವೆ ಬಾವಿ ಕೊರೆಯುವ ಸದ್ದು ಕೇಳಿ ಹೋಗಿ ನೋಡಿದರೆ ಸುರೇಂದ್ರ ನಾಯ್ಕ ಮತ್ತಿತರರು ಅಲ್ಲಿ ಬೋರ್ ಕೊರೆಸುತ್ತಿದ್ದರು. ತನ್ನ ಹೊಲದಲ್ಲಿ ನೀವು ಯಾಕೆ ಬೋರ್ ಕೊರೆಸುತ್ತೀರೆಂದು ಶಿವಣ್ಣ ಕೇಳಿದಾಗ 3 ಎಕರೆ ಜಮೀನನ್ನು ಶ್ರೀನಿವಾಸ ತಮಗೆ ಮಾರಾಟ ಮಾಡಿದ್ದಾರೆ. ಇದು ತಾನು ಖರೀದಿಸಿದ ಆಸ್ತಿ ಎಂಬುದಾಗಿ ಶಿವಣ್ಣ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ತಕ್ಷಣವೇ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಹವಾಲು ಆಲಿಸಿದರು. ಪೊಲೀಸರು ಕೊಳವೆ ಬಾವಿ ಕೊರೆಸುವುದನ್ನು ನಿಲ್ಲಿಸುವಂತೆ ಸುರೇಂದ್ರ ನಾಯ್ಕಗೆ ಸೂಚಿಸಿದ್ದರು” ಎಂದು ಅವರು ತಿಳಿಸಿದರು.
“ಮರುದಿನ ಪೊಲೀಸ್ ಠಾಣೆಗೆ ಶಿವಣ್ಣ ರುದ್ರಪ್ಪ ದೂರು ನೀಡಿದ್ದು, ಅದೇ ರಾತ್ರಿ ಶಿವಣ್ಣನ ಜಮೀನಿನಲ್ಲಿ ಬೋರ್ ವೆಲ್ ಕೊರೆಯುವ ಕೆಲಸ ಶುರುವಾಗಿತ್ತು. 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೆ ಪೊಲೀಸರು ಮಾವಿನಕಟ್ಟೆಗೆ ಬಂದು, ಕೊಳೆವೆ ಬಾವಿ ಕೊರೆಸುವುದನ್ನು ನಿಲ್ಲಿಸುವಂತೆ ಹೇಳಿದರೂ ಸುರೇಂದ್ರ ನಾಯ್ಕ ನಿಲ್ಲಿಸಲಿಲ್ಲ. ಪೊಲೀಸರು ತಾವೇನೂ ಮಾಡಲು ಸಾಧ್ಯವಿಲ್ಲವೆಂದು ಕೈ ಚೆಲ್ಲಿದ್ದಾರೆ. ಮಾದಿಗ ಸಮುದಾಯದ ಶಿವಣ್ಣನ ಜಮೀನು ಕಬಳಿಸಲು ಶ್ರೀನಿವಾಸ ಹಲವಾರು ಸಲ ಶಿವಣ್ಣನ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿ, ಬೆದರಿಕೆ ಹಾಕಿದ್ದಾರೆ ಎಂದು ಕುಂದುವಾಡ ಮಂಜುನಾಥ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚಿನ್ನ ದರೋಡೆ ಆರೋಪದ ಪಿಎಸ್ಐಗಳ ಅಮಾನತುಗೊಳಿಸಿ ಪೊಲೀಸ್ ಇಲಾಖೆ ಆದೇಶ
ಸಂತ್ರಸ್ಥ ರೈತ ಆರ್.ಶಿವಣ್ಣ ಮಾತನಾಡಿ, “ಶ್ರೀನಿವಾಸ, ಸುರೇಂದ್ರ ನಾಯ್ಕ ಹಾಗೂ ಇತರರಿಂದ ತನಗೆ ಬೆದರಿಕೆ ಇದ್ದು, ನನ್ನ ಮೇಲೆ ಹಲ್ಲೆ ಮಾಡಿ, ಜಾತಿನಿಂದನೆ ಮಾಡಿದ್ದಾರೆ. ಸಾರಥಿ ಹೊಸೂರು ಗ್ರಾಮದ ಪ್ರಕಾಶ ದೊಡ್ಡಪ್ಪ ಎಂಬಾತ ಈ ಇಬ್ಬರೊಂದಿಗೆ ಸೇರಿಸಿ, ನನ್ನ ಕೊಲೆಗೆ ಪ್ರಯತ್ನಿಸಿದ್ದಾನೆ. ತನ್ನ ಹೊಲದಲ್ಲಿ ಬೋರ್ ವೆಲ್ ಕೊರೆಸಿದ ಬೋರ್ ಲಾರಿ ಮಾಲೀಕ, ಜಮೀನು ಕಬಳಿಸಲು ಯತ್ನಿಸುತ್ತಿರುವ ಶ್ರೀನಿವಾಸ, ಸುರೇಂದ್ರ ನಾಯ್ಕ, ಪ್ರಾಣ ಬೆದರಿಕೆ ಹಾಕಿ ಪ್ರಕಾಶ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನನ್ನ ಜಮೀನನ್ನು ನನಗೆ ವಾಪಾಸ್ಸು ಕೊಡಿಸಿ, ತನಗೆ, ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸಬೇಕು” ಎಂದು ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ವಿಜಯಮ್ಮ, ಚನ್ನಗಿರಿ ಚಿತ್ರಲಿಂಗಪ್ಪ, ಬುಳಸಾಗರ ಸಿದ್ದರಾಮಣ್ಣ, ನಾಗರಾಜ ಚಿತ್ತಾನಹಳ್ಳಿ, ಮೆಳ್ಳೆಕಟ್ಟೆ ಪರಶುರಾಮ ಸೇರಿದಂತೆ ಇತರರು ಹಾಜರಿದ್ದರು.





