ಭಾರಿ ಸ್ಫೋಟದೊಂದಿಗೆ ಭೂಮಿ ಕಂಪಿಸಿದ ಅನುಭವದಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗಡೆ ಬಂದು ಭಯದಿಂದ ಬೀದಿಯಲ್ಲಿ ನಿಂತ ಘಟನೆ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ, ಗೊಲ್ಲರಹಟ್ಟಿ, ತೊರೆಸಾಲು ಮತ್ತು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಭಾಗದಲ್ಲಿ ನಡೆದಿದೆ ತಿಳಿದು ಬಂದಿದೆ.
ಇಂದು ಸಂಜೆ 7: 30ರಿಂದ 8:00 ಗಂಟೆ ನಡುವೆ ದಾವಣಗೆರೆ ಜಿಲ್ಲೆ ಜಗಲೂರು ತಾಲೂಕಿನ ಚಿಕ್ಕಮಲ್ಲನಹೊಳೆ, ಗೊಲ್ಲರಹಟ್ಟಿ, ತೊರೆಸಾಲು ಹಾಗೂ ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಕಲ್ಲಹಳ್ಳಿ ಗ್ರಾಮಗಳ ಭಾಗದಲ್ಲಿ ದೊಡ್ಡ ಸ್ಫೋಟವೊಂದು ಕೇಳಿಬಂದಿದ್ದು, ಭೂಮಿಯು ಕಂಪಿಸಿದ ಅನುಭವವಾಗಿದೆ. ಇದರಿಂದ ಮನೆಯಿಂದ ವಸ್ತುಗಳು ಅಲುಗಾಡಿದ್ದು, ಭಯಭೀತರಾದ ಜನ ಕೂಡಲೇ ಭಯದಿಂದ ಬೀದಿಗೆ ಬಂದು ನಿಂತಿದ್ದು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೊಡ್ಡ ಸ್ಫೋಟದ ಶಬ್ದ ಮತ್ತು ಕಂಪಿಸಿದ ಅನುಭವಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಭಾಗದಲ್ಲಿ ಸೋಲಾರ್ ವಿದ್ಯುತ್ ಫಲಕಗಳ ಅಳವಡಿಕೆ, ಪವನ ಯಂತ್ರ ಚಾಲಿತ ವಿದ್ಯುತ್ ಸ್ಥಾವರಗಳ ಅಳವಡಿಕೆ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಆದರೂ ಈ ಶಬ್ದ ಯಾವ ಮೂಲದಿಂದ ಬಂದಿದೆ ಎಂದು ಗೊತ್ತಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. “ಕಳೆದ ಮೂರು ನಾಲ್ಕು ದಿನಗಳಿಂದಲೂ ಇದೇ ಸಮಯಕ್ಕೆ ಸಣ್ಣ ಸಣ್ಣ ಬಿರುಸಿನ ಸ್ಫೋಟದ ಶಬ್ದ ಕೇಳಿ ಬರುತ್ತಿತ್ತು. ಇಂದು ಬಹಳ ದೊಡ್ಡದಾದ ಶಬ್ದ ಕೇಳಿ ಬಂದಿದೆ” ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಕುರಿತು ಈ ದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಚಿಕ್ಕಮಲ್ಲನಹೊಳೆ ಗ್ರಾಮದ ಸ್ಥಳೀಯ ಪತ್ರಕರ್ತ ಸಂದೀಪ್ “ಎರಡು ಮೂರು ದಿನದಿಂದ ಪ್ರತಿ ದಿನ ಎಂಟರ ಸಮಯಕ್ಕೆ ಸಣ್ಣ ಸ್ಫೋಟ ಕೇಳಿ ಬರುತ್ತಿತ್ತು ಎಂದು ಚಿಕ್ಕಮಲ್ಲನಹೊಳೆ ಮತ್ತು ಗೊಲ್ಲರಹಟ್ಟಿ ಭಾಗದ ಸ್ಥಳೀಯರು ತಿಳಿಸಿದ್ದಾರೆ. ಆದರೆ ಇಂದು ಬಹುತೇಕ ಜೋರಾದ ಶಬ್ದ ಬಂದಿದ್ದು ಮನೆಯಲ್ಲಿ ವಸ್ತುಗಳು ಅಲುಗಾಡಿದ ಶಬ್ದವಾಗಿದೆ. ಸ್ಪೋಟಕ್ಕೆ ಬೆಚ್ಚಿಬಿದ್ದ ಜನತೆ ಮತ್ತು ನಾವುಗಳು ಬೀದಿಗೆ ಬಂದು ನಿಂತೆವು. ಈ ಸ್ಫೋಟದ ಮೂಲ ಇನ್ನು ಗೊತ್ತಾಗಿಲ್ಲ. ಗೊಲ್ಲರಹಟ್ಟಿ ಗ್ರಾಮದ ಕಡೆಯಿಂದ ಸ್ಪೋಟದ ಶಬ್ದವಾಗಿದ್ದು, ಇದರ ಮೂಲ ಇನ್ನಷ್ಟೇ ಪತ್ತೆ ಮಾಡಬೇಕಿದೆ. ಜನರು ಭಯಭೀತರಾಗಿದ್ದಾರೆ. ಸ್ಥಳೀಯ ತಹಶೀಲ್ದಾರರು, ಅಧಿಕಾರಿಗಳು ಕೂಡಲೇ ಆಗಮಿಸಿ ಜನರಿಗೆ ಧೈರ್ಯ ತುಂಬಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸರ್ಕಾರಿ ಶಾಲೆಗಳ ವಿಲೀನ ಮುಚ್ಚುವ ಪ್ರಕ್ರಿಯೆ ಸಂವಿಧಾನದ ಶಿಕ್ಷಣ ಹಕ್ಕು ಉಲ್ಲಂಘನೆ
ಮಾಹಿತಿಯ ಮೂಲಗಳ ಪ್ರಕಾರ ಜಗಲೂರು ತಹಶೀಲ್ದಾರ್, ಚಿಕ್ಕಮಲ್ಲನಹೊಳೆ ಮತ್ತು ತೊರೆಸಾಲು ಭಾಗಕ್ಕೆ, ಕೂಡ್ಲಿಗಿ ತಹಸಿಲ್ದಾರ್ ಕಲ್ಲಳಿಯ ಭಾಗಕ್ಕೆ ಭೇಟಿ ನೀಡಲು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು ಸ್ಪೋಟದ ಕಾರಣವನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.





