“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 80,000 ಕ್ಕೂ ಅಧಿಕ ಮುಸ್ಲಿಂ ಮತದಾರರ ಸಂಖ್ಯೆ ಇದ್ದು, ಒಟ್ಟಾರೆ ಶೇಕಡಾ 80ಕ್ಕೂ ಹೆಚ್ಚು ಭಾಗ ಅಹಿಂದ ಎಂದ ಮತದಾರರಿದ್ದಾರೆ. ಹಾಗಾಗಿ ಮುಸ್ಲಿಂ ಅಥವಾ ಅಹಿಂದ ವರ್ಗಕ್ಕೆ ಈ ಬಾರಿ ಅವಕಾಶ ನೀಡಬೇಕು” ಎಂದು ದಾವಣಗೆರೆಯಲ್ಲಿ ಅಹಿಂದ ಮುಖಂಡರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ಅಬ್ದುಲ್ ಜಬ್ಬಾರ್ ಸಾಬ್ ಒತ್ತಾಯಿಸಿದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಮಾತನಾಡಿ, “30-40ವರ್ಷಗಳಿಂದ ಜಾತ್ಯತೀತ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪನವರು ಶಾಸಕರಾಗಿ ಎಲ್ಲಾ ಜಾತಿ ಧರ್ಮಗಳ ಹಿತೈಷಿಗಳಾಗಿ, ಸೆಕ್ಯುಲರ್ ಆಗಿದ್ದ ಕಾರಣ ನಾವು ಯಜಮಾನರು ಇದ್ದಾರೆ ಎಂದು ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ನಮಗೆ ಅವಕಾಶ ಕೊಡಿ ಎಂದು ಇದುವರೆಗೂ ಕೇಳಿರಲಿಲ್ಲ. ಆದರೆ ಈಗ ಅವರ ಅಕಾಲಿಕ ನಿಧನದಿಂದ ಜಾಗ ಖಾಲಿ ಆಗಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಕುರುಬರು, ಉಪ್ಪಾರರು, ಲಿಂಗಾಯತ ಪಂಚಮಸಾಲಿ ಸೇರಿ ಅತಿ ಹೆಚ್ಚಿನ ಅಹಿಂದ ವರ್ಗದವರು ಇದ್ದಾರೆ. ಅವರಿಗೆ ಈ ಬಾರಿ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.

“ಶಾಮನೂರು ಕುಟುಂಬದಲ್ಲಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಪ್ರಭಾ ಮಲ್ಲಿಕಾರ್ಜುನ ಕೂಡ ಸಂಸದರಾಗಿದ್ದಾರೆ. ಅಲ್ಲದೆ ಇದೇ ವರ್ಗಕ್ಕೆ ಸೇರಿದ ಚನ್ನಗಿರಿ ಮತ್ತು ಹೊನ್ನಾಳಿಯ ಕ್ಷೇತ್ರಗಳಲ್ಲಿ ಶಾಸಕರು ಕೂಡ ಇದ್ದಾರೆ. ಹಾಗಾಗಿ ಬೇರೆ ಸಮಾಜಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ” ಎಂದು ತಿಳಿಸಿದರು.
“ಮಾಯಕೊಂಡ ಮತ್ತು ಜಗಳೂರು ಕ್ಷೇತ್ರಗಳಲ್ಲಿ ಪರಿಶಿಷ್ಟರ ಮೀಸಲಾತಿ ಕಾರಣದಿಂದ ಅಧಿಕಾರ ಸಿಕ್ಕಿದೆ. ಆದರೆ ಜಿಲ್ಲೆಯಲ್ಲಿ ಬೇರೆ ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಗಳಿಗೆ ಅವಕಾಶ ಸಿಕ್ಕಿಲ್ಲ. ಹಾಗಾಗಿ ನಾವು ಎಐಸಿಸಿ ಮತ್ತು ಕೆಪಿಸಿಸಿಗೆ ಮನವಿ ಮಾಡಿದ್ದು ಅವರು ನ್ಯಾಯ ಒದಗಿಸಿ ಟಿಕೆಟ್ ಕೊಡುವ ಭರವಸೆ ಇದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಮುಸ್ಲಿಮರು ಶೇಕಡಾ 80,000ಕ್ಕೂ ಅಧಿಕ ಇದ್ದು ನಾವು ಪ್ರಥಮವಾಗಿ ಮುಸ್ಲಿಂ ಸಮುದಾಯವನ್ನೇ ಪರಿಗಣಿಸಬೇಕು ಎಂದು ಒತ್ತಾಯಿಸಿ ಮನವಿ ಮಾಡಿದ್ದೇವೆ. ಯಾವುದಾದರೂ ಅಡೆತಡೆಗಳು ಇದ್ದ ಕಾರಣದಲ್ಲಿ ಬೇರೆ ಸಮುದಾಯಕ್ಕೆ ಕೊಡಲು ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು. ವೀರಣ್ಣನವರ ನಂತರ ಲಿಂಗಾಯತ ಪಂಚಮಸಾಲಿ ಸಮುದಾಯದ ಯಾರೂ ಅಧಿಕಾರಕ್ಕೆ ಬಂದಿಲ್ಲ. ಅಲ್ಲದೆ ಯಾವುದೇ ಅಹಿಂದ ವರ್ಗದ, ಸಮುದಾಯದ ಅಭ್ಯರ್ಥಿಗೆ ಕೊಟ್ಟರೂ ನಾವು ಕಾಂಗ್ರೆಸ್ ಅನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.

ಕುರುಬ ಸಮಾಜದ ಮುಖಂಡ ವೀರಣ್ಣ ಮಾತನಾಡಿ “ಈಗ 35 ವರ್ಷಗಳಿಂದಲೂ ಶಾಮನೂರು ಶಿವಶಂಕರಪ್ಪನವರ ಮನೆತನಕ್ಕೆ ಸಹಕಾರ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಇದುವರೆಗೂ ಅಹಿಂದ ವರ್ಗಕ್ಕೆ ಅವಕಾಶ ಸಿಕ್ಕಿಲ್ಲ. ಹಾಗಾಗಿ ಮುಸ್ಲಿಂ ಅಥವಾ ಇತರ ಹಿಂದುಳಿದ ವರ್ಗಗಳಿಗೆ ಅವಕಾಶ ನೀಡಬೇಕು” ಎಂದು ತಿಳಿಸಿದರು.
ನಿವೃತ್ತ ಡಿವೈಎಸ್ಪಿ ರುದ್ರಮುನಿ ಮಾತನಾಡಿ “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಕೀಯವನ್ನು ಮತ್ತು ಅಭ್ಯರ್ಥಿಗಳನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲ್ಲಿನ ಅಹಿಂದ ವರ್ಗದ ಬೇಡಿಕೆಯನ್ನು ಪರಿಗಣಿಸಬೇಕು. ಅಹಿಂದ ವರ್ಗಕ್ಕೆ ನ್ಯಾಯ ಒದಗಿಸಬೇಕು” ಎಂದು ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಮುಖಂಡ ಸುಭಾಷ್ ಚಂದ್ರ ಮಾತನಾಡಿ “ಇಲ್ಲಿನ ಎಲ್ಲಾ ಮುಖಂಡರು ಪಕ್ಷ ಕಟ್ಟಿದವರು. ಅಲ್ಲದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಇದುವರೆಗೂ ಕಾಂಗ್ರೆಸ್ ಗೆ ದುಡಿದವರು. ಇಲ್ಲಿ ಎಲ್ಲಾ ಸಮಾಜದ ಜನ ಮತ್ತು ಮುಖಂಡರು ಇದ್ದಾರೆ. ಇಲ್ಲಿರುವ ಎಲ್ಲರೂ ಜನಬಲದಿಂದ ಬಂದವರು. ನಮಗೆ ಪ್ರಾತಿನಿಧ್ಯ ದೊರಕಬೇಕಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದಲಿತರು, ಲಿಂಗಾಯಿತ-ಪಂಚಮಸಾಲಿ ಸೇರಿದಂತೆ ಯಾರಿಗಾದರೂ ಟಿಕೆಟ್ ಕೊಡಬೇಕು. ಈ ವರ್ಗಗಳ ಮನವಿಯನ್ನು ಕಾಂಗ್ರೆಸ್ ಪರಿಗಣಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ಕ್ಷೇತ್ರದ ಚುನಾವಣೆ; ಮುಸ್ಲಿಂ ಅಹಿಂದ ವರ್ಗಕ್ಕೆ ಅವಕಾಶ ನೀಡಲು ಸಚಿವರಿಗೆ ಮನವಿ
ಸುದ್ದಿಗೋಷ್ಠಿಯಲ್ಲಿ ಚಲವಾದಿ ಸಮುದಾಯದ ಮುಖಂಡ ಹೊನ್ನಾಳಿಯ ಸಿದ್ದಪ್ಪ, ನಾಯಕ ಸಮುದಾಯದ ಮುಖಂಡ ವೀರಭದ್ರಪ್ಪ, ಮುಸ್ಲಿಂ ಒಕ್ಕೂಟದ ಅಬ್ದುಲ್ ಘನಿ ತಾಹಿರ್, ಅಜಾಜ್ ಅಹ್ಮದ್ ಎಸ್ ಕೆ ಇಜಾಜ್, ಸಿರಾಜ್, ಆಂಜನೇಯ ಗುರೂಜಿ ಸುರೇಶ್, ಕೃಷ್ಣನಾಯಕ್, ರಂಗಣ್ಣ, ಸಂತೋಷ್ ನಾಯಕ್, ಕಾರ್ತಿಕ್, ಕಡತಿ ತಿಪ್ಪೇಶ್ ಸೇರಿದಂತೆ ಇಂದ ವರ್ಗಗಳ ಮುಖಂಡರು ಭಾಗವಹಿಸಿದ್ದರು.





