ಕರ್ನಾಟಕ ಜನಶಕ್ತಿ ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘ(ರಿ), ದಾವಣಗೆರೆಯ ಶ್ರಮಜೀವಿ ಮೆಕಾನಿಕ್ ಕಾರ್ಮಿಕರ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 20 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಾವಣಗೆರೆ ಆರ್ ಎಲ್ ಕಾನೂನು ಕಾಲೇಜಿನ ಉಪನ್ಯಾಸಕ ಪ್ರೊ.ವಿದ್ಯಾಧರ ವೇದವರ್ಮ ಮಾತನಾಡಿ “ನಾನು ಮೂಲತಃ ತೆಲುಗು ಭಾಷೆಯವನು. ಆದರೆ ನನಗೆ ಅನ್ನ ಕೊಟ್ಟ ಭಾಷೆ ಕನ್ನಡ, ಕನ್ನಡ ಮಾಧ್ಯಮಾದಲ್ಲಿಯೇ ಕಾನೂನು ಪದವಿಯನ್ನು ಪಡೆದಿದ್ದೇನೆ. ಕರ್ನಾಟಕ ಒಂದು ವಿಶೇಷವಾದ ರಾಜ್ಯ 8 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ಈ ನಾಡು ಶರಣರ ಇತಿಹಾಸ ಹೊಂದಿದೆ. ಕನ್ನಡ ನಾಡಿನ ಹಿರಿಮೆ ಮತ್ತು ಗರಿಮೆ ಸವಿಸ್ತಾರವಾಗಿದ್ದು, ಎಷ್ಟು ಹೇಳಿದರೂ ಸಾಲದು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಪವಿತ್ರ ಮಾತನಾಡಿ “ಕನ್ನಡ ಉಳಿಸಲು ನಾವು ಕನ್ನಡವನ್ನು ಹೆಚ್ಚಾಗಿ ಬಳಸಿದರೆ ಸಾಕು, ಬೇರೆ ಭಾಷೆ ಮೇಲೆ ದ್ವೇಷ ಬೇಡ, ಆದರೆ ನಮ್ಮ ಭಾಷೆಯ ಮೇಲೆ ಇರುವುದಕ್ಕಿಂತ ಹೆಚ್ಚು ಪ್ರೀತಿಯೂ ಬೇಡ. ಕರ್ನಾಟಕದಲ್ಲಿ ಅತಿಯಾದ ನಿರುದ್ಯೋಗ ಸಮಸ್ಯೆ ಇದೆ. ಅದಕ್ಕೆ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಕನ್ನಡಿಗರಿಗೆ, ಸ್ಥಳೀಯರಿಗೆ ಪ್ರಮುಖ್ಯತೆ ನೀಡಬೇಕು” ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಮಿಕ ಮುಖಂಡ ಆವರಗೆರೆ ಉಮೇಶ್ ಮಾತನಾಡಿ “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಕಾರ್ಮಿಕರು ಹಾಗೂ ಇತರೆ ಜನವರ್ಗಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ, ಕಂಪನಿಗಳ ಹಿತ ಕಾಯುವುದರಲ್ಲಿ ಮಗ್ನವಾಗಿದೆ. ಅದು ತರುತ್ತಿರುವ ನೀತಿಗಳ ಪರಿಣಾಮವಾಗಿ ಜನರು ತೀವ್ರ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದಾರೆ. ಈ ಕಾರಣಕ್ಕಾಗಿಯೇ ನಾವು ಕಾರ್ಮಿಕರು ಯಾವಾಗಲೂ ವಿರೋಧ ಪಕ್ಷವಾಗಿ ಸರ್ಕಾರವನ್ನು ಪ್ರಶ್ನೆ ಮಾಡಬೇಕಾಗಿದೆ. ಅದಕ್ಕಾಗಿಯೇ ಸರ್ಕಾರದ ಮುಂದೆ ರಾಜ್ಯದ ದುಡಿಯುವ ಹಾಗೂ ದಮನಿತ ಜನರ ಹದಿನೈದು ಪ್ರಮುಖ ಹಕ್ಕೊತ್ತಾಯಗಳನ್ನು ನವೆಂಬರ್ 26 ರಂದು ಬೆಂಗಳೂರು ಚಲೋ ಮಾಡುವುದರ ಮೂಲಕ ಸರ್ಕಾರದ ಮುಂದಿಡುತ್ತಿದ್ದೇವೆ. ಅದಕ್ಕೆ ಎಲ್ಲಾ ಕಾರ್ಮಿಕರು ಭಾಗವಹಿಸಬೇಕು” ಎಂದು ಕರೆ ನೀಡಿ ಕನ್ನಡ ರಾಜ್ಯೋತ್ಸವದ ಶುಭ ಕೋರಿದರು.
ಕನ್ನಡ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯ ಮೇಲಿದ್ದ ಗಣ್ಯರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಚಿಕ್ಕಣ್ಣರವರು ಮೆಕಾನಿಕ್ ಕಾರ್ಮಿಕರಿಗೆ ಸ್ಮಾರ್ಟ ಕಾರ್ಡ್ ವಿತರಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತ ಕಾರ್ಮಿಕ ಜನವಿರೋಧಿ ನೀತಿ ಬದಲಾಯಿಸಲು ಫ್ರೀಡಂ ಪಾರ್ಕಿನಲ್ಲಿ ಹೋರಾಟ
ಕಾರ್ಯಕ್ರಮದಲ್ಲಿ ಸತೀಶ್ ಅರವಿಂದ್, ಸೈಯದ್ ಅಶ್ಫಾಕ್, ಜಾಫರ್ ಶರೀಫ್, ಇಮ್ತಿಯಾಜ್, ಆದೀಲ್ ಖಾನ್, ಚಂದ್ರಶೇಖರ್, ರಮೇಶ್, ರಾಮಾಂಜನೇಯ ಸೇರಿದಂತೆ ಟೈಲರ್ ಕಾರ್ಮಿಕ ಮಹಿಳೆಯರು ಭಾಗವಹಿಸಿದ್ದರು.





