ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ವೆನೆಜುವೆಲಾ ಮೇಲಿನ ಸಾಮ್ರಾಜ್ಯಶಾಹಿ ಅಮೇರಿಕಾದ ಮಿಲಿಟರಿ ಆಕ್ರಮಣ, ದಾಳಿ ಹಾಗೂ ವೆನೆಜುವೆಲಾ ರಾಷ್ಟ್ರದ ಪ್ರಧಾನಿಯನ್ನು ಅಪಹರಿಸಿರುವುದನ್ನು ತೀವ್ರವಾಗಿ ಖಂಡಿಸಿ ದಾವಣಗೆರೆ ಜಿಲ್ಲೆಯ ಎಡಪಕ್ಷಗಳು (ಕಮ್ಯುನಿಸ್ಟ್) (CPI, CPI(M), SUCI(C)) ಹಾಗೂ ಜನಶಕ್ತಿ ಸಂಘಟನೆಗಳ ಒಕ್ಕೂಟದ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
‘ಅಮೇರಿಕಾ ದಾಳಿ ಖಂಡಿಸಿ ಮಾತನಾಡಿದ ಮುಖಂಡರು “ಎಲ್ಲಾ ಅಂತರಾಷ್ಟ್ರೀಯ ಕಾನೂನುಗಳು, ಸಂಹಿತೆಗಳು ಮತ್ತು ಆಚರಣೆಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಯುದ್ಧಕೋರ ಅಮೆರಿಕಾದ ಸಾಮ್ರಾಜ್ಯಶಾಹಿಗಳು ವೆನೆಜುವೆಲಾದ ಮೇಲೆ ಬಾಂಬ್ ದಾಳಿ ನಡೆಸಿವೆ. ಹಿಂದೆ ಇರಾಕ್ ಮೇಲೆ ದಾಳಿ ಮಾಡಿ, ಅಲ್ಲಿ ಸಮೂಹ ವಿನಾಶಕ ಶಸ್ತ್ರಾಸ್ತ್ರಗಳಿವೆ ಎಂಬ ಸುಳ್ಳು ನೆಪವೊಡ್ಡಿ ಇರಾಕಿನ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಕೊಂದಂತೆಯೇ, ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೇಲೆ ಮಾದಕ ದ್ರವ್ಯ ಕಳ್ಳಸಾಗಣೆಯ ಆರೋಪ ಹೊರಿಸಿ ಅವರನ್ನು ಅಪಹರಿಸಿದ್ದಾರೆ. ವಾಸ್ತವವಾಗಿ ಅಮೆರಿಕದ ಸಾಮ್ರಾಜ್ಯಶಾಹಿಗಳು, ಬಂಡವಾಳಶಾಹಿಗಳು ವೆನೆಜುವೆಲಾದ ಅಪಾರ ತೈಲ ಸಂಪನ್ಮೂಲಗಳನ್ನು ಕಬಳಿಸುವ ಉದ್ದೇಶದಿಂದ, ಮಡುರೊ ಅವರನ್ನು ಅಧಿಕಾರದಿಂದ ಬಲವಂತವಾಗಿ ಕೆಳಗಿಳಿಸಿ ಅಲ್ಲಿ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಲು ಬಹಳ ದಿನಗಳಿಂದ ರಹಸ್ಯವಾಗಿ ಸಂಚು ರೂಪಿಸುತ್ತಿದ್ದರು. ಅಮೆರಿಕ ಸಾಮ್ರಾಜ್ಯಶಾಹಿಯ ಈ ಕ್ರಿಮಿನಲ್ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಪಂಚದಾದ್ಯಂತ ಸಾಮ್ರಾಜ್ಯಶಾಹಿ ವಿರೋಧಿ, ಯುದ್ಧ ವಿರೋಧಿ ಮತ್ತು ಶಾಂತಿಪ್ರಿಯ ಜನರು ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ಈ ಅತ್ಯಂತ ಕ್ರೂರ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ಏಕಸ್ವಾಮ್ಯ ಬಂಡವಾಳಶಾಹಿ ವರ್ಗದ ಹಿತಾಸಕ್ತಿಗೆ ಅಧೀನವಾಗಿರುವ ಬಿಜೆಪಿ ನೇತೃತ್ವದ ಭಾರತ ಸರ್ಕಾರವು, ಭಾರತೀಯರ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಭವ್ಯ ಇತಿಹಾಸವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪೆಂಟಗನ್ ಆಡಳಿತಗಾರರ ಅಸಮಾಧಾನಕ್ಕೆ ಗುರಿಯಾಗಬಾರದು ಎಂಬ ಕಾರಣಕ್ಕಾಗಿಯೇ ಅಮೆರಿಕ ಸಾಮ್ರಾಜ್ಯಶಾಹಿಗಳ ಈ ಕ್ರಿಮಿನಲ್ ಕೃತ್ಯವನ್ನು ಖಂಡಿಸದೇ ಭಾರತ ಸರ್ಕಾರ ದೂರ ಉಳಿದಿದೆ” ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.
“ಅಮೆರಿಕದ ನೌಕಾಪಡೆ ಮತ್ತು ವಾಯುಪಡೆಯು ವೆನೆಜುವೆಲಾದ ಮೇಲೆ ದಾಳಿ ಆರಂಭಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ, ದೇಶವ್ಯಾಪಿ ಯುದ್ಧ ವಿರೋಧಿ, ಶಾಂತಿಪ್ರಿಯ ಜನತೆ ಹಾಗೂ ವಿವಿಧ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು ಕಳೆದ ಜನವರಿ 3 ಮತ್ತು 4 ರಂದು ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನಾ ಪ್ರದರ್ಶನಗಳನ್ನು ಆಯೋಜಿಸಿತ್ತು. ಈಗ ಜನವರಿ 6 ರಿಂದ ದೇಶದ ಪ್ರತಿಯೊಂದು ಭಾಗದಲ್ಲೂ ಎಡಪಕ್ಷಗಳ ಒಕ್ಕೂಟದ ವತಿಯಿಂದ ವಾರವಿಡೀ ಪ್ರತಿಭಟನೆ ಆಯೋಜಿಸಲಾಗುವುದು. ಅಮೆರಿಕದ ಸಾಮ್ರಾಜ್ಯಶಾಹಿ ಆಡಳಿತಗಾರರ ಇಂತಹ ಗೂಂಡಾಗಿರಿ ಮತ್ತು ದೌರ್ಜನ್ಯದ ವಿರುದ್ಧ ನಡೆಯುವ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎಡ ಪಕ್ಷಗಳ ಒಕ್ಕೂಟದಿಂದ ಕರೆ ನೀಡುತ್ತಿದ್ದು, ಎಲ್ಲಾ ಸಾಮ್ರಾಜ್ಯಶಾಹಿ ವಿರೋಧಿ, ಯುದ್ಧ ವಿರೋಧಿ ಮತ್ತು ಶಾಂತಿಪ್ರಿಯ ದೇಶವಾಸಿಗಳು ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ಕ್ಷೇತ್ರದ ಚುನಾವಣೆ; ಮುಸ್ಲಿಂ ಅಹಿಂದ ವರ್ಗಕ್ಕೆ ಅವಕಾಶ ನೀಡಲು ಸಚಿವರಿಗೆ ಮನವಿ
ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಮುಖಂಡರಾದ ಆವರಗೆರೆ ಉಮೇಶ್, ಆವರಗೆರೆ ಚಂದ್ರು, ಆನಂದ ರಾಜ್, ಮಂಜುನಾಥ್ ಕೈದಾಳ, ತಿಪ್ಪೇಸ್ವಾಮಿ, ಮಧು,
ಅಪರ್ಣಾ ಬಿ.ಆರ್. ಮಂಜುನಾಥ್ ಕುಕ್ಕುವಾಡ, ಶ್ರೀನಿವಾಸ್, ಪವಿತ್ರಾ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಷಣ್ಮುಖ ಸ್ವಾಮಿ, ಐರಣಿ ಚಂದ್ರು, ನೇತ್ರಾವತಿ ಸೇರಿದಂತೆ ಇತರ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.





