ಪವಿತ್ರ ರಂಜಾನ್ (ಈದ್ ಉಲ್ ಫಿತುರ್) ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು.

ದಾವಣಗೆರೆ ನಗರದಲ್ಲಿ ಪ್ರಾರ್ಥನೆ ಸಲ್ಲಿಸಲು ಮಕ್ಕಳು, ಬಂಧು-ಬಾಂಧವರೊಂದಿಗೆ ಆಗಮಿಸಿ ದಾವಣಗೆರೆ ಹಳೇ ಪಿಬಿ ರಸ್ತೆಯ ರೇಣುಕಾ ಮಂದಿರದ ಮುಂಭಾಗದಿಂದ ಕೋರ್ಟ್ ವೃತ್ತದವರೆಗೆ ಎರಡೂ ಬದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬೆಳಗಿನಿಂದಲೇ ಆಗಮಿಸಿದ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಚಾಪೆ, ಬಟ್ಟೆ, ಹೊದಿಕೆ ಹಾಸಿ ಪ್ರಾರ್ಥನೆ ಸಲ್ಲಿಸಿದರು. ಪೊಲೀಸರು ಬಿಗಿ ಭದ್ರತೆ ಒದಗಿಸಿ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟರು. ಪ್ರಾರ್ಥನೆ ಬಳಿಕ ಶುಭಾಶಯ ವಿನಿಮಯ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.

ರಂಜಾನ್ ಆಚರಣೆ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಮುಸ್ಲಿಂರು ಈದ್ ಉಲ್ ಫಿತುರ್ ಹಿಂದಿನ ದಿನ ಚಂದ್ರದರ್ಶನದೊಂದಿಗೆ ಉಪವಾಸ ಅಂತ್ಯ ಗೊಳಿಸುತ್ತಾರೆ. ಹಬ್ಬದ ದಿನ ಪ್ರಾರ್ಥನೆ ಸಂಜೆ ಸಲ್ಲಿಸಿ ಝಕಾತ್ ನೀಡುತ್ತಾರೆ. ಝಕಾತ್ ಎಂದರೆ ಪ್ರತಿ ಮುಸ್ಲಿಮನು ರಂಜಾನ್ ನಲ್ಲಿ ತಮ್ಮ ದುಡಿಮೆ ಅಥವಾ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅಸಹಾಯಕ, ನಿರ್ಗತಿಕ, ಬಡವರ್ಗದ ಜನತೆಗೆ ಆಹಾರ, ಬಟ್ಟೆ, ಹಣ್ಣು ಹಂಪಲು ಸೇರಿದಂತೆ ಹಲವು ವಿಧಾನಗಳಲ್ಲಿ ದಾನ ನೀಡುವ ಮೂಲಕ ಅವರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಸಹಾಯ ಮಾಡುವ ಪ್ರಕ್ರಿಯೆಯ ವಿಶಿಷ್ಟ ಆಚರಣೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಂಜಾನ್ ಪ್ರಾರ್ಥನೆ ವೇಳೆ ಈದ್ಗಾ ಮೈದಾನದಲ್ಲಿ ಹೆಜ್ಜೇನು ದಾಳಿ
ಸಮಾಜದಲ್ಲಿ ಸಮಾನತೆ ಮತ್ತು ಸಹಾನುಭೂತಿ ಬೆಳೆಸುವುದು ಝಕಾತ್ ಆಚರಣೆಯ ಮುಖ್ಯ ಉದ್ದೇಶ. ಮನುಷ್ಯನ ಕೆಟ್ಟ ಚಟಗಳು, ಕೋಪ, ಸುಳ್ಳು ಇತ್ಯಾದಿಗಳನ್ನು ದೂರವಿಟ್ಟು ಸತ್ಯ ಮತ್ತು ಶಾಂತಿಯನ್ನು ಪಾಲಿಸುವಂತೆ ಮಾಡುವುದು ರಂಜಾನ್ ಆಚರಣೆ ಉದ್ದೇಶವಾಗಿದೆ.





