“ಇತ್ತೀಚಿಗೆ ಎರಡು ತಿಂಗಳ ಹಿಂದೆ ದಾವಣಗೆರೆಯ ಎಸ್ ಎ ರವೀಂದ್ರನಾಥ್ ಬಡಾವಣೆಯಲ್ಲಿ ಪಾರ್ಕ್ ಜಾಗದಲ್ಲಿ ಕಟ್ಟಿದ್ದಾರೆ ಎನ್ನಲಾದ 36 ಮನೆಗಳನ್ನು ತೆರವುಗೊಳಿಸಿ, ವಸತಿರಹಿತರನ್ನು ತುರ್ಚಘಟ್ಟ ಬಳಿ ಗಂಜಿ ಕೇಂದ್ರದಲ್ಲಿ ಬಿಡಲಾಗಿತ್ತು. ಸೋಮವಾರ ಅವರನ್ನು ಗಂಜಿ ಕೇಂದ್ರದಿಂದ ಹೊರಗಡೆ ಹಾಕಿದ್ದಾರೆ. ಗಂಜಿ ಕೇಂದ್ರದಿಂದ ಹೊರದೂಡಿದ ದಾವಣಗೆರೆ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ತಕ್ಷಣ ಅವರಿಗೆ ಜಾಗದ ವ್ಯವಸ್ಥೆ ಮಾಡಿ ಮನೆಗಳನ್ನು ಕಟ್ಟಿ ಕೊಡಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಜಿಲ್ಲಾಧ್ಯಕ್ಷ ರಾಮೇಗೌಡ ಆಗ್ರಹಿಸಿದರು.
ಗಂಜಿ ಕೇಂದ್ರದ ಹೊರಗೆ ಮನೆ ಕಳೆದುಕೊಂಡ ನಿರಾಶ್ರಿತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು “ಅಕ್ರಮವಾಗಿ ಬಾಂಗ್ಲಾದೇಶದಿಂದ ಬಂದವರಿಗೆ ಕರ್ನಾಟಕದಲ್ಲಿ ಜಾಗ ನೀಡುವ ಸರ್ಕಾರಕ್ಕೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಮನೆ ಕಳೆದುಕೊಂಡ ಕಡುಬಡವರಿಗೆ ಮನೆ ಕೊಡುವುದಕ್ಕೆ ಜಾಗವಿಲ್ಲ. ಇದು ಯಾವ ಸೀಮೆ ಸರ್ಕಾರ. ಅಕ್ರಮ ವಲಸೆಗಾರಿಗೆ ಯಾವುದೇ ಕಾರಣಕ್ಕೂ ಜಾಗ ನೀಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ರಾಜ್ಯದಲ್ಲಿ ಎಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿರುವ ಸರ್ಕಾರದ ನೀತಿ, ಕ್ರಮ ಸರಿ ಇಲ್ಲ. ತಕ್ಷಣ ರಾಜ್ಯದಲ್ಲಿ ಎಲ್ಲಾ ಜಿಲ್ಲೆಯ ತಾಲೂಕು ಹೋಬಳಿ ಮಟ್ಟದಲ್ಲಿ ಸರ್ಕಾರ ಜಾಗ ಹುಡುಕಿ ವಸತಿ ರಹಿತರಿಗೆ ಮನೆ ಕಲ್ಪಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ದಲಿತ ಮುಖಂಡರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಕ್ರಮಕ್ಕೆ ಆಗ್ರಹ
“ಇತ್ತೀಚಿಗೆ ರವೀಂದ್ರನಾಥ ಬಡಾವಣೆ ನಿವಾಸಿಗಳ 36 ಮನೆಗಳನ್ನು ತೆರೆವುಗೊಳಿಸಿದ್ದರು. ಪಾಲಿಕೆ ಆಯುಕ್ತರು ತುರ್ಚಘಟ್ಟ ಬಳಿ ಗಂಜಿ ಕೇಂದ್ರಕ್ಕೆ 36 ಮನೆ ಕುಟುಂಬಗಳನ್ನು ಕಳಿಸಿಕೊಡಲಾಗಿತ್ತು. ಆದರೆ ಸೋಮವಾರದಿಂದ ಅವರನ್ನು ಗಂಜಿ ಕೇಂದ್ರದಿಂದ ಹೊರಗೆ ದೂಡಿ ಬೀಗ ಹಾಕಿದ್ದಾರೆ. ಈ ಕ್ರಮವನ್ನು ಕರವೇ ಖಂಡಸುತ್ತದೆ. ಜಿಲ್ಲಾಡಳಿತ ಮತ್ತು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ತಕ್ಷಣ ಅವರುಗಳಿಗೆ ಮನೆಗಳನ್ನು ಒದಗಿಸಿ ಕೊಡಬೇಕು” ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ಒತ್ತಾಯಿಸಿದ್ದಾರೆ.
ಈ ವೇಳೆ ರವೀಂದ್ರನಾಥ ಬಡಾವಣೆಯ ನಿರಾಶ್ರಿತರು ಹಾಜರಿದ್ದರು.





