ದಾವಣಗೆರೆ ಗ್ರಾಮಾಂತರ ರಾಷ್ಟ್ರೀಯ ಹೆದ್ದಾರಿ ಬಳಿಯ ಹೊನ್ನೂರು ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ರಾಟ್ ವೀಲರ್ ನಾಯಿಗಳ ಮಾಲೀಕರನ್ನು ಪತ್ತೆ ಹಚ್ಚಿ ಪೋಲೀಸರು ಬಂಧಿಸಿದ್ದಾರೆ. ಅಜಾಗರೂಕತೆಯಿಂದ ಅಪಾಯಕಾರಿ ನಾಯಿಗಳನ್ನು ಬಿಟ್ಟು ಬಂದಿದ್ದು, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 5, 2025 ರ ಮದ್ಯರಾತ್ರಿ ಸುಮಾರು 12.30 ರಿಂದ 2.30 ರ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ-48 ಬಳಿ ಹೊನ್ನೂರು ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ಹೊನ್ನೂರು ಕಡೆಗೆ ನಡೆದುಹೋಗುತ್ತಿದ್ದ ಕೂಲಿ ಕೆಲಸದ 36 ವರ್ಷದ ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ ಕೋಂ ಲೇ|| ಹಾಲೇಶ್ ಎನ್ನುವ ಮಹಿಳೆ ಮೇಲೆ 02 ರಾಟ್ ವೀಲರ್ ನಾಯಿಗಳು ಎರಗಿ ಆಕೆಯ ಮುಖ, ಕೈ-ಕಾಲುಗಳ ಮಾಂಸ ಕಿತ್ತು ತಿಂದು ತೀವ್ರದಾಳಿ ನಡೆಸಿದ್ದವು. ಈ ವೇಳೆ ಸಹಾಯಕ್ಕೆ ಹೊನ್ನೂರು ಗ್ರಾಮದ ಕರಿಬಸಪ್ಪ ಮತ್ತು ಮಲ್ಲಿಕಾರ್ಜುನ ಇವರು ನೋಡಿ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದರೂ ನಾಯಿಗಳು ಹೋಗದೆ ಇದ್ದುದ್ದರಿಂದ ಸ್ಥಳಕ್ಕೆ 112 ವಾಹನವನ್ನು ಕರೆಯಿಸಿಕೊಂಡು ಪೊಲೀಸರ ಸಹಾಯದಿಂದ ನಾಯಿಗಳು ಓಡಿಸಿ ಮಹಿಳೆಯನ್ನು ರಕ್ಷಿಸಿದ್ದರು.

ತೀವ್ರ ಗಾಯಗಳಾಗಿದ್ದ ಮಹಿಳೆಯನ್ನು ಚಿಕಿತ್ಸೆಗೆ ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಶಿರಾ ಬಳಿ ಮೃತಪಟ್ಟಿದ್ದರು. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದುರದೃಷ್ಟವಶಾತ್ ಅನಿತಾ ಇವರ ಸಾವಿಗೆ ಕಾರಣವಾದ 2 ರಾಟ್ ವೀಲರ್ ನಾಯಿಗಳನ್ನು ನಿರ್ಲಕ್ಷತನದಿಂದ ಬಿಟ್ಟು ಹೋಗಿದ್ದ ಮಾಲೀಕರ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ ಎಸ್ ರವರ ಮಾರ್ಗದರ್ಶನದಲ್ಲಿ ತಂಡ ರಚಿಸಿ ದಾವಣಗೆರೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರವರು ಆದೇಶಿಸಿದ್ದರು.
ಮಾಹಿತಿ ಸಂಗ್ರಹಿಸಿ ಕಾರ್ಯಪ್ರವೃತ್ತರಾಗಿದ್ದ ತನಿಖಾ ತಂಡ ಮಹಿಳೆ ಸಾವಿಗೆ ಕಾರಣವಾಗಿದ್ದ ರಾಟ್ ವೀಲರ್ ನಾಯಿಗಳ ಮಾಲೀಕರಾದ ದೇವರಾಜ ಅರಸ್ ಬಡಾವಣೆಯ 27 ವರ್ಷದ ಆರೋಪಿತ ಪ್ರಕಾಶ ಎನ್ನುವವರ ಮಗ ಶೈಲೇಶ ಕುಮಾರ ಪಿ ಎನ್ನುವವರನ್ನು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ ಆರೋಪಿ ಶೈಲೇಶ್ ತಾನು ಬ್ರಾಡೋ, ಪಪ್ಪಿ ಮತ್ತು ಹಿರೋ ಎನ್ನುವ 03 ರಾಟ್ ವೀಲರ್ ನಾಯಿಗಳನ್ನು ಸಾಕಿದ್ದು, ಪಪ್ಪಿ ಮತ್ತು ಹಿರೋ ಎನ್ನುವ 2 ನಾಯಿಗಳು ಇತ್ತೀಚಿಗೆ ನಮ್ಮ ಮೇಲೆ ಹಲ್ಲೆ ನಡೆಸಲು ಬರುತ್ತಿದ್ದು, ಇತ್ತೀಚಿಗೆ ನನಗೆ ಹಾಗೂ ಸಂಬಂಧಿಕರಿಗೆ ಪರಚಿದ್ದರಿಂದ ಬೇಸರಗೊಂಡು ಡಿಸೆಂಬರ್ 4, 2025 ರ ರಾತ್ರಿ 10:30 ಗಂಟೆ ಸುಮಾರಿಗೆ ಪಪ್ಪಿ ಮತ್ತು ಹಿರೋ ನಾಯಿಗಳನ್ನು ಹೊನ್ನೂರು ಬಳಿ ಬಿಟ್ಟು ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಯು ರಾಟ್ ವೀಲರ್ ನಾಯಿಗಳು ದಾಳಿ ನಡೆಸಿದಲ್ಲಿ ಮಾನವ ಪ್ರಾಣಕ್ಕೆ ಹಾನಿ ಉಂಟಾಗುತ್ತದೆಂದು ಗೊತ್ತಿದ್ದರೂ ಸಹ ನಿರ್ಲಕ್ಷತನದಿಂದ ನಾಯಿಗಳು ಬಿಟ್ಟು ಹೋಗಿದ್ದರ ಪರಿಣಾಮವಾಗಿ ಅಮಾಯಕ ಮಹಿಳೆ ಅನಿತಾ ಇವರ ಮೇಲೆ ಈ ನಾಯಿಗಳು ದಾಳಿ ಮಾಡಿ ತೀವ್ರವಾದ ಗಾಯಗೊಳಿಸಿದ್ದರ ಪರಿಣಾಮ ಅನಿತಾ ಇವರು ಮೃತಪಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಶೈಲೇಶ ಕುಮಾರ ಇವರನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಒಪ್ಪಿಸಲಾಗಿರುತ್ತದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಡಾ.ಬಿಆರ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಸ್ಮರಣೆ: ಕ್ಯಾಂಡಲ್ ಮಾರ್ಚ್
ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಅಣ್ಣಯ್ಯ ಕೆ.ಟಿ ಇವರ ನೇತೃತ್ವದ ತಂಡದಲ್ಲಿದ್ದ ರಮೇಶ್ ಮತ್ತು ನಾಗಭೂಷಣರನ್ನು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತರವರು ಶ್ಲಾಘಿಸಿದ್ದಾರೆ.





