ಅಂಬೇಡ್ಕರ್ ಶಾಲಾ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿನಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಆಹಾರದಲ್ಲಿ ಹುಳುಗಳು ಕಂಡು ಬಂದಿದ್ದು, ಅದೇ ಆಹಾರವನ್ನು ವಿದ್ಯಾರ್ಥಿನಿಯರಿಗೆ ವಿತರಣೆ ಮಾಡುತ್ತಿದ್ದು ಹಾಸ್ಟೆಲ್ ಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಘಟಕ ಆಗ್ರಹಿಸಿದೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಜೆ.ಸಿ.ಬಡಾವಣೆಯ ಹಾಸ್ಟೆಲ್‌ನಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗಿನ 190ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಈ ಹಾಸ್ಟೆಲ್‌ನಲ್ಲಿ ಭಾನುವಾರ ಮತ್ತು ಶನಿವಾರದಂದು ಹುಳುಗಳಿರುವ ಅಕ್ಕಿಯಲ್ಲಿ ಮಾಡಿದ ಆಹಾರವನ್ನು ತಯಾರಿಸಿ ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ. ಬಡಿಸಿದ ಆಹಾರದಲ್ಲಿ ಹುಳುಗಳನ್ನು ಕಂಡ ವಿದ್ಯಾರ್ಥಿನಿಯರಲ್ಲಿ ಹಲವರು ಊಟವನ್ನು ಮಾಡಿಲ್ಲ. ಅನಿವಾರ್ಯ ಎನಿಸಿದ ಹಲವು ಮಕ್ಕಳು ಹುಳುಗಳನ್ನು ತೆಗೆದು ಆಹಾರ ಸೇವಿಸಿದ್ದಾರೆ. ಸೋಮವಾರದಂದು ಬೆಳಿಗ್ಗೆ ತಯಾರಿಸಿದ ತಿಂಡಿಯಲ್ಲೂ ಹುಳಗಳು ಕಂಡು ಬಂದಿದ್ದರಿಂದ ತಿಂಡಿ ಸೇವಿಸದೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯರು ಅಳುತ್ತಿದ್ದನ್ನು ಗಮನಿಸಿದ ಮರುಗಿದ ವಿವಿಧ ಶಾಲೆಯ ಶಿಕ್ಷಕರು ಆ ವಿದ್ಯಾರ್ಥಿನಿಯರಿಗೆ ಬಿಸ್ಕೆಟ್ ಕೊಟ್ಟು ಸಮಾಧಾನಪಡಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ದಸಂಸ ಸಂಚಾಲಕ ಮಹಾಂತೇಶ “ಈ ಹಾಸ್ಟೆಲ್ ನಲ್ಲಿ ಅರ್ಧ ಬೆಂದ ಒಂದೇ ಚಪಾತಿ, ಅನ್ನವನ್ನೂ ಹೊಟ್ಟೆ ತುಂಬ ನೀಡುವುದಿಲ್ಲ, ಬಿಸಿ ನೀರಿನ ತರಹ ಇರುವ ಚಹಾ ವಿತರಣೆ ಮಾಡುತ್ತಿದ್ದಾರೆ. ಕುಡಿಯುವ ನೀರಲ್ಲಿ ವಾಸನೆ ಇರುತ್ತದೆ, ಪ್ರಶ್ನೆ ಮಾಡಿದವರಿಗೆ ತಾರತಮ್ಯ ಮಾಡುತ್ತಿದ್ದಾರೆ. ಬಿಸಿ ನೀರು ಲಭ್ಯವಿಲ್ಲ. ಸಂಜೆಯ ಸ್ನಾಕ್ಸ್ ನಿಯತವಾಗಿ ನೀಡುತ್ತಿಲ್ಲ. ಶೌಚಾಲಯಗಳಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗದೆ ಕಟ್ಟಿಕೊಂಡಿದ್ದು ಮೂಗು ಮುಚ್ಚಿಕೊಂಡು ಬಳಸಬೇಕಿದೆ ಎಂದು ಆರೋಪಿಸಿದರು.
“ಈ ಬಗ್ಗೆ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಮೌಖಿಕವಾಗಿ ತಮ್ಮ ಬಳಿ ಸಂಕಷ್ಟ ಹೇಳಿಕೊಂಡಿದ್ದಾರೆ. ಈ ಹಾಸ್ಟೆಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವಾರ್ಡನ್ ಹಾಸ್ಟೆಲ್‌ನಲ್ಲಿ ನಿಯಮಿತವಾಗಿ ಇರುವುದಿಲ್ಲ, ಈ ಹಿಂದೆ ಇವರು ಬೇರೆ ಹಾಸ್ಟೆಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವಾಗಲೂ ಇವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದರೂ ಕೂಡ ಶುಚಿ, ರುಚಿಯಾದ ಆಹಾರ ನೀಡದೆ ವಿದ್ಯಾರ್ಥಿನಿಯರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿರುವ ಇಲಾಖೆಯ ಸಂಬಂಧಿತ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೂಡಲೇ ವ್ಯವಸ್ಥೆ ಸರಿಪಡಿಸಿ, ಕ್ರಮ ಕೈಗೊಳ್ಳಬೇಕು. ಹುಳುಭರಿತ ಆಹಾರ ವಿತರಣೆ ಬಗ್ಗೆ ಸಂಘಟನೆಯವರಿಗೆ ಮಾಹಿತಿ ನೀಡಿದ್ದಾರೆಂದು ಹಾಸ್ಟೆಲ್‌ನ ವಿದ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಇಲಾಖೆಯವರು ಕಿರುಕುಳ ಕೊಟ್ಟಲ್ಲಿ ಸಂಘಟನೆಯಿಂದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದರ ಜೊತೆಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಕದಸಂಸಯ ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ.ಮಹಾಂತೇಶ್ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಹನುಮಂತಪ್ಪ,”ಅಡುಗೆಯವರ ಸಣ್ಣ ನಿರ್ಲಕ್ಷ್ಯದಿಂದ ಭಾನುವಾರ ಒಂದೆರಡು ಮಕ್ಕಳಿಗೆ ಅಡುಗೆಯಲ್ಲಿ ಹುಳುಗಳು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಬಂದ ತಕ್ಷಣ ಹಾಸ್ಟೆಲ್ ಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ಅಲ್ಲಿ ನಾ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿಯವರಿಗೆ ಎಚ್ಚರಿಕೆ ನೀಡಿದ್ದು, ಮಕ್ಕಳಿಗೆ ಉತ್ತಮ ಆಹಾರ, ನೀರು ಒದಗಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ. ಸರಿಯಾಗಿ ಮಕ್ಕಳಿಗೆ ಟೀ-ಕಾಫಿ, ಸಂಜೆ ತಿಂಡಿ, ಬಿಸಿನೀರು ಲಭ್ಯವಿಲ್ಲ ಎಂದು ತಿಳಿದು ಬಂದಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಿ ಉತ್ತಮ ಸೇವೆ ಆಹಾರ ಒದಗಿಸಲು ಎಚ್ಚರಿಕೆ ನೀಡಲಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಕಟ್ಟಡ ಕೂಡ ಹಳೆಯದಾಗಿರುವುದರಿಂದ ಸದ್ಯದಲ್ಲೇ ಬೇರೆ ಉತ್ತಮ ಸುಸಜ್ಜಿತ ವ್ಯವಸ್ಥೆ ಮಕ್ಕಳಿಗೆ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಆಹಾರದಲ್ಲಿ ಹುಳು ಕಂಡುಬಂದ ಸಂಬಂಧ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟೀಸ್ ಜಾರಿ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.





