“ಕುಟುಂಬ ರಾಜಕಾರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಹಿಂದ ಸಮುದಾಯವನ್ನು ಪರಿಗಣಿಸಿ ಅವಕಾಶ ನೀಡಿ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಬೇಕು” ಎಂದು ಸ್ವಾಭಿಮಾನಿ ಬಳಗದ ಅಧ್ಯಕ್ಷ ಹಾಗೂ ಇನ್ಸೈಟ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ ಬಿ ವಿನಯ್ ಕುಮಾರ್ ದಾವಣಗೆರೆಯಲ್ಲಿ ಪ್ರತಿಪಾದಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು “ದಾವಣಗೆರೆಯಲ್ಲಿ ಕುಟುಂಬ ರಾಜಕಾರಣ ಹಿಂದಿನಿಂದಲೂ ಬೆಳೆದು ಬಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ದಾವಣಗೆರೆಯಲ್ಲಿ ನಮ್ಮದೇ ಸರ್ಕಾರ ಎನ್ನುವ ರೀತಿ ಕುಟುಂಬ ರಾಜಕಾರಣ ಬೆಳೆಸಿದ್ದಾರೆ. ದಾವಣಗೆರೆಯು ಭೌಗೋಳಿಕ ಸ್ಥಿತಿಗೆ ತಕ್ಕಂತೆ ಇಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಂಡಿಲ್ಲ. ಸರ್ಕಾರಿ ಮೆಡಿಕಲ್ ಕಾಲೇಜು, ಉತ್ತಮ ಕ್ರೀಡಾಂಗಣ, ಉತ್ತಮ ಸಭಾಂಗಣಗಳು ಸೇರಿದಂತೆ ಯಾವುದನ್ನು ಇಲ್ಲಿ ಬೆಳೆಯಲು ಬಿಟ್ಟಿಲ್ಲ. ತಮ್ಮದೇ ವ್ಯವಹಾರಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದಕ್ಕಾಗಿ ಅವರಿಗೆ ಅಧಿಕಾರ ಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಉದ್ಘಾಟಿಸಿದ ರಾಜ್ಯ ಸರ್ಕಾರ ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ತೆರೆಯುವ ಮನಸ್ಸು ಮಾಡಲಿಲ್ಲ. ಕಾರಣ ಇಲ್ಲಿರುವ ಕುಟುಂಬ ರಾಜಕಾರಣ ಮತ್ತು ಮಿನಿ ರಿಪಬ್ಲಿಕ್ ಅನ್ನು ಎದುರು ಹಾಕಿಕೊಳ್ಳುವ ಸಾಹಸ ಮಾಡುತ್ತಿಲ್ಲ. ದಕ್ಷಿಣದಲ್ಲಿ ಉಪಚುನಾವಣೆ ಎದುರಾಗಿದ್ದು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪಕ್ಷಗಳು ಅಹಿಂದ ವರ್ಗಕ್ಕೆ ಅಭ್ಯರ್ಥಿಗೆ ಮಣೆ ಹಾಕಬೇಕು” ಎಂದು ಒತ್ತಾಯಿಸಿದರು.
“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತದಾರರು ಮುಸ್ಲಿಂ ಸಮುದಾಯದಲ್ಲಿ ಇದ್ದಾರೆ. ಹಾಗಾಗಿ ಮುಸ್ಲಿಂ ಸಮುದಾಯದಲ್ಲಿ ಕೂಡ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಕೂಗು ಎದ್ದಿದೆ. ಅದು ಸಹಜವಾಗಿ ನ್ಯಾಯವಾದುದು. ಮುಸ್ಲಿಂ ಸೇರಿದಂತೆ ಅಹಿಂದ ವರ್ಗದ ಯಾರಿಗೇ ಕೊಟ್ಟರೂ ಸ್ವಾಭಿಮಾನಿ ಬಳಗದಿಂದ ಬೆಂಬಲಿಸುತ್ತೇವೆ” ಎಂದು ತಿಳಿಸಿದರು.
“ನಾನು ಈವರೆಗೂ ದಾವಣಗೆರೆ ದಕ್ಷಿಣಕ್ಕೆ ಯಾವುದೇ ಪಕ್ಷದ ಚುನಾವಣಾ ಟಿಕೆಟ್ ಆಕಾಂಕ್ಷಿಯಲ್ಲ. ಕಾಂಗ್ರೆಸ್ ಬಿಜೆಪಿ ಸೇರಿದಂತೆ ಯಾರನ್ನು ನಾನು ಟಿಕೆಟ್ ಕೇಳಿಲ್ಲ ನಾನು ಈಗ ತಟಸ್ಥ ಸ್ಥಿತಿಯಲ್ಲಿದ್ದು ನಾನು ಸೂಕ್ತ ಎನ್ನಿಸಿ, ಕಾಂಗ್ರೆಸ್ ಅಥವಾ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಅಹಿಂದ ವರ್ಗದ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ನಾನು ಬೆಂಬಲಿಸುತ್ತೇವೆ. ಹೆಸರಿಗೆ ಮಾತ್ರ ಮುಸ್ಲಿಂ ಸಮುದಾಯಕ್ಕೆ ಕೊಟ್ಟು ಹಿಂಬಾಗಿಲಿನಿಂದ ಸೋಲಿಸುವ ಕೆಲಸ ಮಾಡಬಾರದು. ದಾವಣಗೆರೆಯಲ್ಲಿ ಕುಟುಂಬ ರಾಜಕಾರಣವನ್ನು ಮತದಾರರು ತಿರಸ್ಕರಿಸಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ಉಪಚುನಾವಣೆ;ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್: ಅಲ್ಪಸಂಖ್ಯಾತರ ವಿಭಾಗ ಒತ್ತಾಯ
“ನಾನು ಈಗ ತಟಸ್ಥವಾಗಿದ್ದು ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿದ್ದೇನೆ. ಕೆಲವು ಪಕ್ಷಗಳು ಆಹ್ವಾನ ನೀಡಿವೆ. ನಾನು ಯಾವುದೇ ಪಕ್ಷದಲ್ಲಿದ್ದರೂ ನಮ್ಮ ಜಾತ್ಯಾತೀತ ನಿಲುವಿನಿಂದ ಬದಲಾಗುವುದಿಲ್ಲ. ಆದರೆ ಅಹಿಂದ ವರ್ಗಕ್ಕೆ ಸ್ಥಾನಮಾನಗಳು ರಾಜಕೀಯ ಅವಕಾಶಗಳು ದೊರಕಬೇಕು ಎನ್ನುವ ತೀರ್ಮಾನಕ್ಕೆ ಬದ್ಧವಾಗಿದ್ದೇನೆ” ಎಂದು ತಿಳಿಸಿದರು.





