ಜನಪರ ಶಿಕ್ಷಣ ನೀತಿಗಾಗಿ “ಜನ ಸಂಸತ್ತು” ಅಖಿಲ ಭಾರತ ಮಟ್ಟದ ಕಾರ್ಯಕ್ರಮವನ್ನು 24 ಜನವರಿ 2026 ರಂದು ಬೆಂಗಳೂರಿನಲ್ಲಿ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಪೆಕ್ಸ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಪರ್ಯಾಯವಾಗಿ “ಜನಪರ ಶಿಕ್ಷಣ ನೀತಿ”ಯನ್ನು ಅಂತಿಮಗೊಳಿಸಲಾಗುವುದು ಇದರ ಭಾಗವಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ದಾವಣಗೆರೆ ಘಟಕದಿಂದ ದಾವಣಗೆರೆಯ ವಿವಿಧ ಹಾಸ್ಟೆಲ್ ಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರಚಾರವನ್ನು ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಮುಖಂಡರು “ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ದೇಶದ ಶಿಕ್ಷಣ ವ್ಯವಸ್ಥೆ ದಯನೀಯ ಸ್ಥಿತಿಯಲ್ಲಿದ್ದು, ಇದಕ್ಕೆ ಸರ್ಕಾರಗಳೇ ಹೊಣೆಗಾರರು. ಕೋವಿಡ್-19 ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಚರ್ಚೆ ಇಲ್ಲದೆ ಬಲವಂತವಾಗಿ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಸಾರ್ವಜನಿಕ ಶಿಕ್ಷಣದ ಮೂಲವನ್ನೇ ದುರ್ಬಲಗೊಳಿಸುತ್ತಿದೆ” ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಎನ್‌ಇಪಿ ಮೂಲಕ ಸರ್ಕಾರಿ ಶಾಲೆಗಳ ಮುಚ್ಚುವಿಕೆ, ಶಿಕ್ಷಣದ ವ್ಯಾಪಾರೀಕರಣ, ತಾರತಮ್ಯ ವೃದ್ಧಿ, ಸರ್ಕಾರದ ಜವಾಬ್ದಾರಿಯಿಂದ ಹಿಂತೆಗೆತ, ಭಾಷಾ ಹಾಗೂ ಉದ್ಯೋಗ ಕೌಶಲ್ಯಗಳ ಮೇಲಿನ ನಿರ್ಲಕ್ಷ್ಯ, ಪಠ್ಯಕ್ರಮದಲ್ಲಿ ರಾಜಕೀಯ ಹಸ್ತಕ್ಷೇಪ, ಧರ್ಮನಿರಪೇಕ್ಷ–ಪ್ರಜಾತಾಂತ್ರಿಕ ಮೌಲ್ಯಗಳ ಕುಸಿತ ನಡೆಯುತ್ತಿದೆ ಎನ್ನುವ ಆತಂಕ ಮೂಡಿಸಿದೆ” ಎಂದರು.

“ಕೇಂದ್ರಿಕೃತ ನಿಯಂತ್ರಣದ ಮೂಲಕ ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಈ ಸಮಸ್ಯೆಗಳಿಗೆ, ಎನ್‌ಇಪಿಗೆ ಪರ್ಯಾಯವಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ‘ಜನ ಶಿಕ್ಷಣ ನೀತಿ’ಯ ಪ್ರಮುಖ ಅಂಶಗಳನ್ನು ಮುಂದಿಟ್ಟಿದೆ. ಸರ್ಕಾರವೇ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಬೇಕು, ಶಿಕ್ಷಣಕ್ಕೆ ಹೆಚ್ಚಿನ ಹಣಕಾಸು ಮೀಸಲಿಡಬೇಕು, ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು, ವ್ಯಾಪಾರೀಕರಣ, ಕೋಮುವಾದ, ತಾರತಮ್ಯಗಳನ್ನು ತೊಡೆದುಹಾಕಬೇಕು, ಮಾತೃಭಾಷೆ ಹಾಗೂ ಇಂಗ್ಲಿಷ್ ದ್ವಿಭಾಷಾ ಶಿಕ್ಷಣ ಜಾರಿಗೊಳಿಸಬೇಕು, ವೈಜ್ಞಾನಿಕ ಮತ್ತು ಧರ್ಮನಿರಪೇಕ್ಷ ಪಠ್ಯಕ್ರಮ ರೂಪಿಸಬೇಕು ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು ಎಂದು ಜನ ಶಿಕ್ಷಣ ನೀತಿಯಲ್ಲಿ ಎಂದು ಒತ್ತಾಯಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತರಿಗೆ ಕೃಷಿಸಾಲ ನೀಡದ ಬ್ಯಾಂಕ್ ವಿರುದ್ಧ ಮಲೆಬೆನ್ನೂರಿನಲ್ಲಿ ರೈತಸಂಘ ಪ್ರತಿಭಟನೆ
ಜನ ಸಂಸತ್ತಿನ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ಪ್ರಮುಖ ಶಿಕ್ಷಣ ತಜ್ಞರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಚಾರದ ವೇಳೆ ಸಮಿತಿಯ ಸಂಚಾಲಕರಾದ ತಿಪ್ಪೇಸ್ವಾಮಿ ಅಣಬೇರು ಹಾಗೂ ಇತರರು ಹಾಜರಿದ್ದರು.





