ದಾವಣಗೆರೆ ಜಿಲ್ಲೆ ಮಹಾನಗರ ಪಾಲಿಕೆಯ 4ನೇ ವಾರ್ಡ್ ಕಸ ಸಂಗ್ರಹಣೆ ಸಮಯದಲ್ಲಿ ವಾಹನದ ಚಾಲಕ ಮತ್ತು ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಲು ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಹಾನಿಗೊಳಿಸಿ ಗಲಾಟೆ ಮಾಡಿದವರ ವಿರುದ್ದ ಸೂಕ್ತ ಕ್ರಮ ಹಾಗೂ ಪಾಲಿಕೆಯ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸೂಕ್ತ ಕಾನೂನು ರಕ್ಷಣೆ ನೀಡುವಂತೆ ಕೋರಿ ಮನವಿ ದಲಿತ ಸಂಘರ್ಷ ಸಮಿತಿಯ ಮುಖಂಡರು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “ದಾವಣಗೆರೆ ನಗರದ ಮೆಹಬೂಬ್ ನಗರದಲ್ಲಿ 4ನೇ ಕ್ರಾಸಿನಲ್ಲಿ ದಿನನಿತ್ಯದಂತೆ ಮನೆ-ಮನೆ ಕಸ ಸಂಗ್ರಹಣೆಗಾಗಿ ಪಾಲಿಕೆ ಕಸ ಸಂಗ್ರಹಣೆ ವಾಹನವು ಕೆಲಸ ನಿರ್ವಹಿಸಲು ಹೋಗಿದೆ. ಆ ಸಮಯದಲ್ಲಿ ಹಸಿ ಕಸ-ಒಣ ಕಸ ಹಾಗೂ ಹಾನಿಕಾರಕ ಕಸಗಳನ್ನು ಬೇರ್ಪಡಿಸಿ ನೀಡುವುದು ಪ್ರತಿನಿತ್ಯ ಕಸ ಸಂಗ್ರಹಣ ವಾಹನದಲ್ಲಿ ಧ್ವನಿವರ್ಧಕಗಳ ಮೂಲಕ ಹೇಳುತ್ತಿರುತ್ತಾರೆ. ಕೃಷಿ ಬೇರ್ಪಡಿಸಲು ಹೇಳಿದ ಕಾರಣಕ್ಕೆ ಅಲ್ಲಿನ ನಿವಾಸಿಗಳಾದ ನೂರು ಮತ್ತು ಅಜ್ಜು ಮತ್ತು ಇತರರು ಸೇರಿದಂತೆ ಬಂದು ಚಾಲಕನನ್ನು ದೊಣ್ಣೆಗಳಿಂದ ಹಲ್ಲೆ ಮಾಡಲು ಮುಂದಾಗಿ ಸರ್ಕಾರಿ ವಾಹನದ ಮೇಲೆ ಹೊಡೆದು ಮೀಟರ್ ಮುರಿದು ವಾಹನಕ್ಕೆ ಘಾಸಿಗೊಳಿಸಿರುತ್ತಾರೆ. ಕಸ ಸಂಗ್ರಹಿಸುವ ಸಹಾಯಕ ಕಾರ್ಮಿಕರಿಗೆ ಬಾಯಿಗೆ ಬಂದಂತೆ ಬೈದು ಮೈಮೇಲೆ ಕೈ ಹಾಕಿ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದಾವಣಗೆರೆ ಜಿಲ್ಲೆಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರುವ ಆಡಳಿತ ವಿಭಾಗ ಮತ್ತು ಪಾಲಿಕೆಯ ಅಧಿಕಾರಿಗಳು ನೀಡಿದ ಆದೇಶದ ಮೇರೆಗೆ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸಿರುತ್ತಾರೆ. ಇಂತಹ ಅಹಿತಕರ ಘಟನೆಗಳು ನಡೆದಾಗ ಕಾರ್ಮಿಕರ ಮೇಲೆ ಹಲ್ಲೆಗೆ ಮುಂದಾದಾಗ ನೇರವಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕರ್ತವ್ಯ ನಿರತ ಕಾರ್ಮಿಕರಿಗೆ ಮತ್ತು ಪಾಲಿಕೆ ಎಲ್ಲಾ ಹೊರಗುತ್ತಿಗೆ ಮತ್ತು ಗುತ್ತಿಗೆಯ, ಯು.ಜಿ.ಡಿ. ಕಾರ್ಮಿಕರಿಗೂ ರಕ್ಷಣಾತ್ಮಕ ನಿಯಮಗಳನ್ನು
ಜಾರಿಗೊಳಿಸುವುದು ಅನಿವಾರ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರು ಸಮಾಜದ ಗಲೀಜನ್ನು ತಮ್ಮ ಮನೆಯ ಮಕ್ಕಳು ಮಾಡಿರುವ ಗಲೀಜು ಎಂಬ ಮನೋಭಾವದೊಂದಿಗೆ ಸ್ವಚ್ಚಗೊಳಿಸುತ್ತಿರುವುದು ನಮ್ಮ ಕಣ್ಣಿಗೆ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ಸೂಕ್ತವಾದ ಕಾನೂನು ಮತ್ತು ನಿಯಮಗಳನ್ನು ರೂಪಿಸಿ ಅವರಿಗೆ ರಕ್ಷಣೆ ನೀಡಬೇಕು”ಎಂದು ಒತ್ತಾಯಿಸಿದರು.
“ಕಾಂಟ್ರಾಕ್ಟ್ ಲೇಬರ್ ಅಬೋಲೇಷನ್ ಆಕ್ಟ್ 1970 ರ ಪ್ರಕಾರ ಗುತ್ತಿಗೆ ಪೌರ ಕಾರ್ಮಿಕರ ರಕ್ಷಣೆ ಸರಿಯಾದ ವೇತನ ನೀಡುವುದು, ವಿಶ್ರಾಂತಿ ಅವರ ಸುರಕ್ಷತೆಯನ್ನು ಕಾಪಾಡುವುದು ಈ ಕಾನೂನಿನ ಕರ್ತವ್ಯವಾಗಿದೆ. ಪೌರ ಕಾರ್ಮಿಕರ ರಕ್ಷಣೆ ಮ್ಯಾನುವಲ್ ಸ್ಯಾವೆಂಜರ್ ಆಕ್ಟ್, ಎಸ್.ಸಿ./ಎಸ್.ಟಿ. ಆಕ್ಟ್, ಲೇಬರ್ ಲಾ, ಮಿನಿಮಮ್ ವೇಜಸ್ ಆಕ್ಟ್, ಇ.ಎಸ್.ಐ./ಪಿ.ಎಫ್. ಮತ್ತು ಅಕ್ಯೂಪೇಷನಲ್ ಸೇಫ್ಟಿ ಕೋಡ್ ಕಾನೂನುಗಳು ಅನ್ವಯಿಸುತ್ತಿದ್ದು ಸಮಾಜದಲ್ಲಿ ಘನತೆ ಮತ್ತು ಗೌರವದಿಂದ ಶಾಂತಿಯುತವಾಗಿ ಕರ್ತವ್ಯ ನಿರ್ವಹಿಸಲು ಈ ಮೇಲಿನ ಕಾನೂನುಗಳ ಬಗ್ಗೆ ಜನಸಾಮಾನ್ಯರಲ್ಲಿ ಮತ್ತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಪಾಲಿಕೆಯ ಕಾರ್ಮಿಕರ ಮೇಲೆ ಹಲ್ಲೆ ಮಾಡಿದಂತಹ ನೂರು ಮತ್ತು ಅಜ್ಜು ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅಹಿತಕರ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಮೆರಿಕ ಕೃಷಿ ವ್ಯಾಪಾರ ಒಪ್ಪಂದದ ಪ್ರತಿ ಸುಟ್ಟು ರೈತ ಸಂಘ ವಿರೋಧ
ಮನವಿ ಸಲ್ಲಿಸುವ ವೇಳೆ ದಸಂಸ ಮುಖಂಡರಾದ ಲಿಂಗರಾಜು ಗಾಂಧಿನಗರ, ಆದಿಲ್ ಖಾನ್, ಅರುಣ್ ಕುಮಾರ್, ಅಜಯ್ ಕುಮಾರ್, ನಾಗೇಶ್ ಹಾಜರಿದ್ದರು.





