ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಪಿಐ ಮಲ್ಲಮ್ಮ ಚೌಬೆ ನೇತೃತ್ವದಲ್ಲಿ ಪೊಲೀಸರು ಸಂತೆಬೆನ್ನೂರು ಗ್ರಾಮ ವೃತ್ತದಲ್ಲಿ “ಹೆಲ್ಮೆಟ್ ಹಾಗೂ ವಿಶೇಷ ಸಂಚಾರ ಜಾಗೃತಿ ಕಾರ್ಯಕ್ರಮ” ನಡೆಸಲಾಯಿತು. ಈ ವೇಳೆ ಬೈಕ್ ಸವಾರರಿಗೆ ಗುಲಾಬಿ ಹೂವುಗಳನ್ನು ನೀಡಿ, ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಅರಿವು ಮೂಡಿಸಿದರು.

ಈ ವೇಳೆ ಮಾತನಾಡಿದ ವೃತ್ತ ನಿರೀಕ್ಷಕರಾದ ಮಲ್ಲಮ್ಮ ಚೌಬೆ “ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗಾಗಿ ಅತ್ಯಂತ ಅಗತ್ಯವಾಗಿದ್ದು, ಅಪಘಾತಗಳ ವೇಳೆ ಗಂಭೀರ ಗಾಯ, ಜೀವ ಹಾನಿಯನ್ನು ತಪ್ಪಿಸಬಹುದು. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಜೀವ ಸುರಕ್ಷಿತವಾಗಿರಬೇಕು” ಎಂದು ಹೇಳಿ ಅರಿವು ಮೂಡಿಸಿದರು.

ಇದೇ ವೇಳೆ ಕೆಲವು ಸವಾರರಿಗೆ ಹೂವು ನೀಡುವ ಮೂಲಕ ಎಚ್ಚರಿಕೆಯನ್ನು ನೀಡಿದ ಅವರು “ಬೈಕ್ ಸ್ಕೂಟರ್ ಗಳನ್ನು ಹತ್ತುವಾಗ ಮೊದಲು ಹೆಲ್ಮೆಟ್ ಧರಿಸಿ ನಂತರ ಬೈಕನ್ನು ಚಲಾಯಿಸಬೇಕು. ಹೆಲ್ಮೆಟ್ ಇದ್ದರೂ ಕೂಡ ಅದನ್ನು ಬಿಟ್ಟು ಹಾಗೆ ಬೈಕ್ ಚಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಮೊದಲ ಬಾರಿಗೆ ಎಚ್ಚರಿಕೆಯ ದೃಷ್ಟಿಯಿಂದ ಹೂ ಕೊಟ್ಟು ಅರಿವು ಮೂಡಿಸುತ್ತಿದ್ದೇವೆ. ಮುಂದಿನ ಬಾರಿ ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತದೆ” ಎಂದು ಎಚ್ಚರಿಸಿದರು.
ಈ ವೇಳೆ ಮಹಿಳಾ ಸವಾರರು ಸೇರಿದಂತೆ ಬೈಕ್ ಸವಾರರನ್ನು ಹೆಲ್ಮೆಟ್ ಇದೆಯಾ? ಎಂದು ಪ್ರಶ್ನಿಸಿ, ಹೆಲ್ಮೆಟ್ ಖರೀದಿ ಮಾಡಿದ್ದೀರಾ, ಹೆಲ್ಮೆಟ್ ಇದ್ದರೂ ಕೂಡ ಏಕೆ ಧರಿಸುತ್ತಿಲ್ಲ?” ಎಂದು ಪ್ರಶ್ನೆ ಹಾಕಿದರು.

“ಕಾನೂನಿನ ಬಗ್ಗೆ ಅಸಡ್ಡೆ ಮಾಡಬಾರದು, ಪೊಲೀಸರು ಏನು ಮಾಡುತ್ತಾರೆ ಬಿಡು? ಎನ್ನುವ ಧೋರಣೆ ಬೇಡ. ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ, ನಿಮ್ಮ ಸುರಕ್ಷತೆಯ ಕ್ರಮಕ್ಕಾಗಿ ಪೊಲೀಸರು ದಂಡ ವಿಧಿಸಿ ಎಚ್ಚರಿಸುತ್ತಾರೆ. ನಿಮ್ಮ ಸುರಕ್ಷತೆ ನೀವೇ ಕಾಯ್ದುಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ಷರದವ್ವ ಸಾವಿತ್ರಿ ಭಾಪುಲೆ ಹಾಗೂ ಶಿಕ್ಷಕಿ ಫಾತಿಮಾ ಶೇಖ್ ಜನ್ಮದಿನಾಚರಣೆ
ಈ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಭಾರತಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಸಂಚಾರ ನಿಯಮಗಳ ಮಹತ್ವವನ್ನು ವಿವರಿಸಿದರು. ಗ್ರಾಮಸ್ಥರು ಹಾಗೂ ವಾಹನ ಸವಾರರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.





