ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ಬಿ ಆರ್ ಗವಾಯಿಯವರ ಮೇಲೆ ಶೂ ಎಸೆತ ಮತ್ತು ಹಲ್ಲೆ ಪ್ರಯತ್ನಕ್ಕೆ ಮುಂದಾಗಿದ್ದ ವಕೀಲನ ಮೇಲೆ ಕಾನೂನು ಕ್ರಮ ಮತ್ತು ಗಡೀಪಾರಿಗೆ ಒತ್ತಾಯಿಸಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ)(ದಸಂಸ ) ಮತ್ತು ದಾವಣಗೆರೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ದಾವಣಗೆರೆ ಉಪವಿಭಾಗಾಧಿಕಾರಿಗಳ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ದಸಂಸ ಮುಖಂಡ ಕುಂದುವಾಡ ಮಂಜುನಾಥ್ “ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರಿಗೆ ನ್ಯಾಯಾಲಯದೊಳಗೇ ಹಲ್ಲೆಗೆ ಪ್ರಯತ್ನಿಸಿ ಇಡೀ ದೇಶದ ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಸನಾತನವಾದಿಗಳು ಅವಮಾನ ಮಾಡಿದ್ದಾರೆ. ಈವರೆಗೂ ಸರ್ಕಾರದ ಮಂತ್ರಿಗಳು ಮತ್ತು ಉನ್ನತ ಸ್ಥಾನದಲ್ಲಿರುವವರು ಇದನ್ನು ಖಂಡಿಸಿ ಮಾತನಾಡದೆ ಇರುವುದನ್ನು ನೋಡಿದರೆ ಪರೋಕ್ಷವಾಗಿ ಇವರೇ ಮನುವಾದಿಗಳಿಗೆ, ಸನಾತನವಾದಿಗಳಿಗೆ ಕುಮಕ್ಕು ನೀಡುತ್ತಿದ್ದಾರೆ ಎನ್ನುವ ಅನುಮಾನ ಬರುತ್ತಿದೆ. ಈ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನ್ಯಾ. ಬಿ ಆರ್ ಗವಾಯಿ ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ ವಕೀಲ ರಾಕೇಶ್ ಕಿಶೋರ್ನನ್ನು ಶಿಕ್ಷೆಗೊಳಪಡಿಸಿ ದೇಶದಿಂದಲೇ ಗಡಿಪಾರು ಮಾಡಬೇಕು” ಎಂದು ಆಗ್ರಹಿಸಿದರು.
“ಮುಖ್ಯ ನ್ಯಾಯಮೂರ್ತಿಗಳು ಬೌದ್ಧ ಧರ್ಮದ ಅನುಯಾಯಿ, ಅಂಬೇಡ್ಕರ್ ವಾದಿಗಳಾಗಿದ್ದು ಅವರು ನ್ಯಾಯಕ್ಕೆ ಚ್ಯುತಿ ಬರದ ರೀತಿಯಲ್ಲಿ ತೀರ್ಪುಗಳನ್ನು ನೀಡುತ್ತಿರುವುದು ಮನುವಾದಿಗಳಿಗೆ ಮತ್ತು ಸನಾತನವಾದಿಗಳಿಗೆ ಸಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಹೀಗಾಗಿ ಹಲ್ಲೆ ಮಾಡಲು ಪ್ರಯತ್ನಿಸುತ್ತಾರೆ. ಈ ಕೃತ್ಯ ಇಡೀ ದೇಶ, ಪ್ರಜಾಪ್ರಭುತ್ವದ ವ್ಯವಸ್ಥೆ ತಲೆತಗ್ಗಿಸುವಂಥಾಗಿದೆ. ಹಾಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಜಬೀನ ಖಾನಂ “ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಧೀಶ ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಈ ದೇಶದ ಸಂವಿಧಾನ ಮತ್ತು ದೇಶಕ್ಕೆ ಮಾಡಿದ ಅವಮಾನವೆಸಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ದಸಂಸ ಮುಖಂಡ ಬುಳ್ಳಸಾಗರ ಸಿದ್ದರಾಮಣ್ಣ ಮಾತನಾಡಿ, “ಸನಾತನ, ಮನುವಾದಿಗಳು ಎಲ್ಲೆಡೆ ಇದ್ದಾರೆ, ಬಿಜೆಪಿ ಹಾಗೂ ಇತರ ರೂಪದಲ್ಲಿ ಎಲ್ಲೆಡೆ ಕೋಮುವಾದ ಬೆಳೆಸುತ್ತಿದೆ. ಇದರ ವಿರುದ್ಧ ನಾವು ಜಾಗೃತರಾಗಿರಬೇಕು. ಮುಂದೆ ಇದರ ವಿರುದ್ಧ ಸಮರ್ಥವಾಗಿ ಸಂಘಟನೆ ಮೂಲಕ ಯುವಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು” ಎಂದು ತಿಳಿಸಿದರು.

ಮುಸ್ಲಿಂ ಒಕ್ಕೂಟದ ಮುಖಂಡ ಟಿ ಅಸ್ಗರ್ ಮಾತನಾಡಿ” ಮುಖ್ಯ ನ್ಯಾಯಾಧೀಶರ ಮೇಲಿನ ಹಲ್ಲೆ ಸಂವಿಧಾನದ ಮೇಲಿನ ಹಲ್ಲೆ. ಇದನ್ನು ಇಡೀ ಮುಸ್ಲಿಂ ಒಕ್ಕೂಟ ಖಂಡಿಸುತ್ತದೆ. ಅಂಬೇಡ್ಕರ್, ಸಂವಿಧಾನಪರ ಹೋರಾಟಕ್ಕೆ ನಾವು ಸದಾ ಬೆಂಬಲಿಸುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆ: ಗಣತಿದಾರರ ವಿರೋಧ
ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ತಾಲೂಕು ಸಂಚಾಲಕರಿದ ಚಿತ್ರಲಿಂಗಪ್ಪ, ನಾಗರಾಜ್ ಚಿತ್ತನಹಳ್ಳಿ, ಪರಮೇಶ್ವರಪ್ಪ, ಮುಖಂಡರಾದ ಪ್ರದೀಪ್ ಕೆಟಿಜೆ ನಗರ, ಮಂಜುನಾಥ್ ಶಾಂತಿನಗರ, ಹಾಲ್ವರ್ತಿ ಮಹಂತೇಶ್, ಶಂಕರ್ ಗಾಂಧಿನಗರ, ಶಿವಶಂಕರ್, ಖಾಲಿದ್ ಅಲಿ, ಪ್ರಶಾಂತ್ ತುರ್ಚಘಟ್ಟ, ಬೇತೂರು ಹನುಮಂತಪ್ಪ, ನಾಗರಾಜ್ ತುರ್ಚಘಟ್ಟ, ತ್ಯಾಗರಾಜು, ಚೆನಲ್ಲಿ ಆಲೂರು ದುರ್ಗಾ ಪ್ರಸಾದ್, ನಿಂಗಪ್ಪ ಅಣಜಿ ,ಆರತಿ ಬಿ ಚಿತ್ತಾನಳ್ಳಿ, ರಾಕೇಶ್, ತಿಪ್ಪೇಶ್, ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಮುಖಂಡ ಲಿಂಗರಾಜು ಎಂ ಗಾಂಧಿನಗರ, ಮುಖಂಡ ಲಿಯಾಖತ್ ಅಲಿ, ನೆರಳು ಬೀಡಿ ಕಾರ್ಮಿಕ ಸಂಘಟನೆಯ ಜಬೀನಖಾನಂ, ಕರಿಬಸಪ್ಪ, ಜೆಡಿಎಸ್ ಮುಖಂಡ, ದಾವಣಗೆರೆ ಮುಸ್ಲಿಂ ಒಕ್ಕೂಟದ ಸಂಚಾಲಕ ಟಿ ಅಜ್ಗರ್, ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ತಾಹಿರ್ ಸೇರಿದಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ದಾವಣಗೆರೆಯ ಸಂಘಟನೆಗಳ, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.





