ಸಿಎಂ ಸಿದ್ದರಾಮಯ್ಯನವರು ಮಂಡಿಸಿರುವ ರಾಜ್ಯ ಬಜೆಟ್ 2026-27ರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನವನ್ನು ಹೆಚ್ಚಿಸದೆ ನಿರಾಶೆಯನ್ನುಂಟು ಮಾಡಿರುವುದನ್ನು ಖಂಡಿಸಿ”ಸೀರೆ ಬಿಡಿ ಗೌರವಯುತ ವೇತನ ಕೊಡಿ”ಎಂದು ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ದಾವಣಗೆರೆ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಚಂದ್ರು ಆವರಗೆರೆ “ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಆರನೇ ಗ್ಯಾರಂಟಿಯಾಗಿ ಪ್ರಿಯಾಂಕ ಗಾಂಧಿಯವರು ಘೋಷಿಸಿರುವ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಸಹ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಗೌರವ ಧನ ಹೆಚ್ಚಿಸುವ ಮತ್ತು ಇಡಿಘಂಟು ನೀಡುವ ಭರವಸೆಯನ್ನು ಈಡೇರಿಸಿರುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೆಡರೇಷನ್ ಜಿಲ್ಲಾಧ್ಯಕ್ಷ್ಯೆ ಎಸ್ಎನ್ ಮಲ್ಲಮ್ಮ ಮಾತನಾಡಿ “ಈ ಹಿಂದೆ ಇದ್ದಂತಹ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿ.ಜೆ.ಪಿ ಸರ್ಕಾರ ತನ್ನ ಕೊನೆಯ ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಿಸುವುದಾಗಿ ಘೋಷಿಸಿತ್ತು. ಆದರೆ ಅಘೋಷಣೆ ಅನುμಷ್ಠಾನಕ್ಕೆ ಬರಲಿಲ್ಲ. ಇಂದಿನ ಸಾಲಿನ ಬಜೆಟ್‍ನಲ್ಲಿ ಕೇವಲ 1000 ರೂ ಗೌರವ ಧನವನ್ನು ಹೆಚ್ಚಿಸಿ ಘೋಷಣೆ ಮಾಡಲಾಗಿದೆ. ಆದರೆ ತಾವು ನೀಡಿದ ವಾಗ್ದಾನದಂತೆ ಕಾರ್ಯಕರ್ತೆಯರಿಗೆ ಮಾಸಿಕ ರೂ 15,000 ನೀಡುವ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಅಲ್ಲದೆ 2011 ನೇ ಇಸವಿಯಿಂದ ಅಂಗನವಾಡಿಗಳಲ್ಲಿ ದುಡಿದು ನಿವೃತ್ತಿರಾಗಿರುವ ವಯೋವೃದ್ಧ ಕಾರ್ಯಕರ್ತರು ಮತ್ತು ಸಹಾಯಕರಿಗೆ ಗ್ರಾಚುಟಿ ಸೌಲಭ್ಯ ಜಾರಿ ಮಾಡದೆ 2023 ರ ನಂತರ ನಿವೃತ್ತಿಯಾದವರಿಗೆ ಅನ್ವಯವಾಗುವಂತೆ ಗ್ರಾಚುಟಿ ಸೌಲಭ್ಯ ದೊರೆಯದಂತಾಗಿದೆ. ಪ್ರಸಕ್ತ ಬಜೆಟ್ಟಿನಲ್ಲಿ ಗೌರವಧನ ಹೆಚ್ಚಿಸುವ ಹಾಗೂ 2011 ರಿಂದ ಯ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಸಂಭಾವನೆಯನ್ನು ಹೆಚ್ಚಳ ಮಾಡದೆ ಸೀರೆಯನ್ನು ನೀಡುವುದಾಗಿ ಘೋಷಿಸುವ ಮೂಲಕ ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನದ ನಿರಾಕರಣೆ ಮಾಡಿದಂತಾಗಿದೆ. ಆದ್ದರಿಂದ ಬಜೆಟ್ ಅಂಗೀಕಾರಗೊಳ್ಳುವ ಮೊದಲು ಸೀರೆ ನೀಡುವ ಬದಲು ಸದರಿ ಅನುದಾನವನ್ನು ಗೌರವ ಧನವಾಗಿ ಹೆಚ್ಚಿಸಿ ಘೋಷಿಸಬೇಕು” ಎಂದು ಒತ್ತಾಯಿಸಿದರು.

ಕಾರ್ಯಕರ್ತೆ ಮಂಜುಳಾ ಮಾತನಾಡಿ “ಹೀಗೆ ಎರಡು ಮೂರು ವರ್ಷಗಳಿಂದಲೂ ವೇತನ ಹೆಚ್ಚಳ ಮಾಡಿಲ್ಲ 2023 ರಲ್ಲಿ ಘೋಷಿಸಿದಂತೆ ವೇತನ ಹೆಚ್ಚಳ ಮಾಡದೆ ಈ ಬಾರಿ ಕೇಳಿದರೆ ಈ ಬಾರಿ ಬಜೆಟ್ ನಲ್ಲಿ ಎರಡು ಸೀರೆಯನ್ನು ಕೊಡುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರನ್ನು ನಿರ್ಗತಿಕರ, ಸೀರೆ ಇಲ್ಲದವರ ರೀತಿಯಲ್ಲಿ ನೋಡಲಾಗುತ್ತಿದೆ. ಸರ್ಕಾರದ ಜನಗಣತಿ, ಜಾತಿಗಣತಿ, ಆರೋಗ್ಯ ಸೇರಿದಂತೆ ಎಲ್ಲಾ ಸೇವೆಗಳಿಗೆ, ಸರ್ವೇಗಳಿಗೆ ಬಳಸಿಕೊಳ್ಳುವ ನಮ್ಮನ್ನು ಸಿದ್ದರಾಮಯ್ಯನವರು ಅಲಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಮಗೆ ನೀವು ಭಿಕ್ಷೆಯ ರೀತಿಯಲ್ಲಿ ಕೊಡುವ ಸೀರೆ ಬೇಡ. ನಮ್ಮ ಕೆಲಸಕ್ಕೆ ಗೌರವಯುತವಾದ ವೇತನ ಕೊಡಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್; ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು
ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಉಮೇಶ್ ಆವರಗೆರೆ, ಹರಿಹರ ತಾಲೂಕಿನ ಅಧ್ಯಕ್ಷೆ ಸುಮಿತ್ರಾ, ಜಗಳೂರು ತಾಲೂಕಿನ ಹಾಲಮ್ಮ, ಕೆ.ಸಿ ನಿರ್ಮಲ, ಡಿ. ಗೀತಾ, ಹೆಚ್.ಜಿ ಮಂಜುಳ, ಮಾಯಕೊಂಡ ಗೀತಾ, ಚನ್ನಮ್ಮ, ವಸಂತ, ಹಾಲಮ್ಮ, ಮಂಜುಳ, ಮಮತಾ ಮಾಯಕೊಂಡ, ಸುಶೀಲಾ, ರೇಣುಕಮ್ಮ, ವಸಂತ, ಸೇರಿದಂತೆ ಇತರರು ಭಾಗವಹಿಸಿದ್ದರು.





