ಸಮಾಜದಲ್ಲಿ ಸಾಂಸ್ಕೃತಿಕ ಅಧ:ಪತನದಿಂದಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇದರಿಂದಾಗಿ ತಂದೆಯಿಂದ ಮಗಳ ಮೇಲೆ, ಅಣ್ಣ ತಂಗಿಯ ಮೇಲೆ ಅತ್ಯಾಚಾರದಂತಹ ಘಟನೆಗಳು ನಡೆದು, ಮನುಷ್ಯನ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ, ಮಹಿಳೆಯರ ಮೇಲಿನ ಶೋಷಣೆಗೆ ಕಾರಣವಾಗಿದೆ” ಎಂದು ದಾವಣಗೆರೆಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶ್ರೀಮತಿ ಶೋಭಾ ಆತಂಕ ವ್ಯಕ್ತಪಡಿಸಿದರು,

ದಾವಣಗೆರೆ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ “ಸಮಾಜದಲ್ಲಿ ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಸಮಾಜ, ಅದರ ಬದಲಿಗೆ ಹೆಣ್ಣು ಮಕ್ಕಳನ್ನು ಸಾಂಸ್ಕೃತಿಕವಾಗಿ, ವೈಚಾರಿಕವಾಗಿ ಗಟ್ಟಿಯಾಗಿಸುತ್ತಾ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಜ್ಞಾನ ಪಡೆದು ನೊಂದ ಮಹಿಳಾ ಸಮುದಾಯದ ಪರ ನಿಲ್ಲಬೇಕು” ಎನ್ನುವ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಐಎಂಎಸ್ಎಸ್ ನ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ರಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಮಹಿಳಾ ದಿನಾಚರಣೆ ಕೇವಲ ಒಂದು ದಿನ ಮಾತ್ರ ಮಹಿಳೆಯರ ಕರಕುಶಲತೆ, ಚಾಕಚಕ್ಯತೆಯನ್ನು ಪ್ರದರ್ಶಿಸುವ ದಿನವಾಗದೆ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ಪ್ರತಿಜ್ಞಾದಿನವಾಗಬೇಕು. ಆಗ ಮಾತ್ರ ಮಹಿಳಾ ದಿನಾಚರಣೆ ನಿಜಕ್ಕೂ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.

ಉಪನ್ಯಾಸಕರಾದ ಪಾರ್ಥಸಾರಥಿ ಮಾತನಾಡಿ “ಹೆಣ್ಣು ಜನಿಸಿದರೆ ಮೂಗು ಮುರಿಯುವ ಕಾಲ ಸರಿದು, ಒಂದು ಹೆಣ್ಣು10 ಗಂಡು ಮಕ್ಕಳಿಗೆ ಸಮ ಎನ್ನುವ ಕಾಲ ಇದಾಗಿದೆ” ಎಂದು ಶ್ಲಾಘಿಸಿದರು,
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಉಪಚುನಾವಣೆ ಟಿಕೆಟ್ ಗೆ ಬೆಂಬಲಿಗರ ಹೈಡ್ರಾಮ ಹಾಗೂ ಅಲ್ಪಸಂಖ್ಯಾತರ ಬಿಗಿಪಟ್ಟು
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಭೀಮಪ್ಪ, ಉಪನ್ಯಾಸಕರಾದ ಶ್ರೀಮತಿ ಸುರೇಖಾ, ಶ್ರೀಮತಿ ಶೋಭಾ, ಹಾಗೂ ಎ ಐ ಎಂ ಎಸ್ ಎಸ್ ನ ಸಂಘಟಕರಾದ ಕವಿತಾ, ಮಂಜುಳಮ್ಮ, ರಶ್ಮಿ, ಸರಸ್ವತಿ , ಬನಶ್ರೀ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.





