ದಾವಣಗೆರೆ ಜಿಲ್ಲೆಯಲ್ಲಿ ನಿರಾತಂಕವಾಗಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದ್ದು, ಐವರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿವೆ. ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾವಿನ ಕೋಟೆ ಮತ್ತು ಸಾಸ್ವೆಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಮಾವಿನಕೋಟೆಯಲ್ಲಿ ಓರ್ವ ವೃದ್ಧ, ಮೂವರು ಮಕ್ಕಳು ಹಾಗೂ ಸಾಸ್ವೆಹಳ್ಳಿಯ ಓರ್ವ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿ ದಾಳಿ ಹೆಚ್ಚುತ್ತಿದ್ದರೂ ಗ್ರಾಮ ಪಂಚಾಯತ್ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಸದಸ್ಯರ ವಿರುದ್ಧ ಮಾವಿನಕೋಟೆ ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರ ಕ್ರಮಕ್ಕೆ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಾರಾಯಣ ಗುರು ‘ಸಾಮಾಜಿಕ ಕ್ರಾಂತಿಯ ಹರಿಕಾರ’: ಶಾಸಕ ಕೆ.ಎಸ್.ಬಸವಂತಪ್ಪ
ನಾಲ್ಕು ತಿಂಗಳ ಹಿಂದೆ ಶಾಸ್ತ್ರೀನಗರದಲ್ಲಿ ಬೀದಿ ನಾಯಿ ದಾಳಿಗೆ ಒಳಗಾಗಿ ಮುಖ, ಕೈಗೆ ತೀವ್ರ ಗಾಯಗಳಾಗಿದ್ದು, ರೇಬೀಸ್ ತಗುಲಿದ್ದ ಮಗುವೊಂದು ಬೆಂಗಳೂರಿನ ಆಸ್ಪತ್ರೆ ಸೇರಿ ನಾಲ್ಕಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗದೆ ಕಳೆದ ತಿಂಗಳು ಮೃತಪಟ್ಟಿತ್ತು.





