ಹಳೆಯ ಸಾಲಕ್ಕೆ ಹಣ ಪಾವತಿ ಪಡೆದು ರೈತರಿಗೆ 2021 ರಿಂದಲೂ ಕೃಷಿ ಸಾಲ ಕೊಡದೇ ಸತಾಯಿಸಿ, ಕುಂದು ಕೊರತೆ ಸಭೆಯನ್ನು ಕರೆಯದೇ ರೈತರನ್ನು ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರೈತ ಸಂಘದ ವತಿಯಿಂದ ಮಲೆಬೆನ್ನೂರು ಎಸ್ ಬಿ ಐ ಬ್ಯಾಂಕ್ ಮಲೆಬೆನ್ನೂರು ಶಾಖಾ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು “ರೈತರಿಗೆ 2021 ರಿಂದಲೂ ಕೃಷಿ ಸಾಲ ಕೊಡುತ್ತೇವೆ ಎಂದು ಆಶ್ವಾಸನೆ ನೀಡುತ್ತಲೇ ಬಂದಿರುತ್ತಾರೆ. ಇದುವರೆಗೂ ರೈತರಿಗೆ ಕೃಷಿ ಸಾಲ ಕೊಟ್ಟಿರುವುದಿಲ್ಲ. ಓಟಿಎಸ್ ಸಾಲ ಮುರಿದುಕೊಂಡು ನಿಮಗೆ ಮರುಪಾವತಿ ಬೇಗನೆ ಮಾಡಿಕೊಡುತ್ತೇವೆ ಎಂದು ಹೇಳಿ ಹಣವನ್ನೆಲ್ಲ ಕಟ್ಟಿಸಿಕೊಂಡು ರೈತರಿಗೆ ಕೃಷಿ ಸಾಲವನ್ನು ನೀಡಿಲ್ಲ. ಇಂತಹ ಪ್ರಕರಣಗಳು ಮಲೆಬೆನ್ನೂರು ಶಾಖೆಯಲ್ಲಿ ಬಹಳ ನಡೆದಿವೆ” ಎಂದು ಬ್ಯಾಂಕಿನ ಸಿಬ್ಬಂದಿಯ ಮೇಲೆ ಆರೋಪಿಸಿದರು.

ಹಾಲವಾಣ ಗ್ರಾಮದ ರೈತರಾದ ಪೂಜಾ ವಿಜಯಕುಮಾರ್ ಮಾತನಾಡಿ “ಬ್ಯಾಂಕಿನ ಸಿಬ್ಬಂದಿ ನಾಲ್ಕು ವರ್ಷಗಳ ಕಾಲ ಅಲೆದಾಡಿಸಿ ಇದುವರೆಗೂ ಸಾಲ ನೀಡಿರುವುದಿಲ್ಲ. ಬ್ಯಾಂಕಿನವರು ಪ್ರತಿ ಮೂರು ತಿಂಗಳಿಗೊಮ್ಮೆ ಕುಂದು ಕೊರತೆ ಸಭೆಯನ್ನು ಕರೆಯಬೇಕು ಒಂದು ಸಭೆಯನ್ನು ಕೂಡ ಕರೆದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿ, ತಮ್ಮ ಅಳಲನ್ನು ತೋಡಿಕೊಂಡರು.
ದಾವಣಗೆರೆ ಜಿಲ್ಲಾ ಲೀಡ್ ಬ್ಯಾಂಕಿನ ಮುಖ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದ ಮಾತನಾಡಿ “ರೈತರ ಸಮಸ್ಯೆಯನ್ನು ಒಂದು ವಾರದೊಳಗೆ ನಾವು ಮೇಲಾಧಿಕಾರಿಗಳ ಗಮನಕ್ಕೆ ತಂದು ನಿಮಗೆ ಸಾಲ ಸಿಗುವ ರೀತಿಯಲ್ಲಿ ಸಹಕಾರ ಮಾಡಿಕೊಡುತ್ತೇವೆ” ಎಂದು ಆಶ್ವಾಸನೆ ನೀಡಿದರು.

ಈ ವೇಳೆ ಆಕ್ರೋಶಭರಿತರಾದ ರೈತರು ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಯ ಮೇಲೆ ಧಿಕ್ಕಾರ ಕೂಗಿ, ಯಾವುದೇ ಕಾರಣಕ್ಕೂ ಸಬೂಬು ಹೇಳದೆ ಈಗಲೇ ಸಾಲ ದೊರಕಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಪೊಲೀಸ್ ಇಲಾಖೆ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪಟ್ಟು ಹಿಡಿದ ರೈತ ಮುಖಂಡರ ಜೊತೆ ಮಾತನಾಡಿ ನಾವು ಕೂಡ ನಿಮ್ಮ ಜೊತೆಗಿದ್ದೇವೆ ಒಂದು ವಾರದೊಳಗೆ ಎಲ್ಲಾ ರೈತರಿಗೆ ಸಾಲ ಕೊಡುವ ರೀತಿ ನಾವು ಕೂಡ ಸಹಕಾರ ಮಾಡುತ್ತೇವೆ ಎಂದು ಭರವಸೆ ಕೊಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ದಂದೆ ಪ್ರಶ್ನಿಸಿದ ಶಾಸಕರ ಮೇಲೆ ಕೇಸ್ ದಾಖಲು: ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ಆಕ್ರೋಶ
ಜಿಲ್ಲಾಧ್ಯಕ್ಷ ಆಲೂರು ನಾಗರಾಜ್, ತಾಲೂಕ್ ಅಧ್ಯಕ್ಷ ಹಾಲು ಬಸವರಾಜಪ್ಪ, ಪೂಜಾರಿ ವಿಜಯ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದೀಶ್, ತಿಪ್ಪೇಸ್ವಾಮಿ ಕಡರ್ನಾಯಕನಹಳ್ಳಿ, ಭಾನುವಳ್ಳಿ ಪರಮೇಶ್ವರಪ್ಪ, ಕೆಂಚನಹಳ್ಳಿ ಪರಮೇಶ್ವರಪ್ಪ, ವರದಿ ಶಿವಕ್ಕಳ ಆಂಜನೇಯ. ಹಾಗೂ ರೈತರು, ಹರಿಹರ ತಾಲೂಕಿನ ರೈತ ಮುಖಂಡರು ಭಾಗವಹಿಸಿದ್ದರು.





