ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ಕಾರ್ಮಿಕ, ರೈತರ ವಿರುದ್ಧ ಹಾಗೂ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದು ಜನರ ಸ್ವಾತಂತ್ರ್ಯ ಮತ್ತು ದುಡಿಯುವ ಜನರ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಪ್ರತಿಭಟಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘಟನೆಗಳು, ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಇಂದು ದಾವಣಗೆರೆಯ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ನಡೆಸಿದರು.
ದಾವಣಗೆರೆಯಲ್ಲಿ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ಪ್ರಾರಂಭಿಸಿದ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಹಾಗೂ ಕಾರ್ಯಕರ್ತರು ಜಯದೇವ ವೃತದಿಂದ ಪ್ರಾರಂಭಿಸಿ ಅಂಬೇಡ್ಕರ್ ವೃತ್ತ, ಹದಡಿ ರಸ್ತೆ ಮೂಲಕ ಎಚ್ ಕೆ ಆರ್ ವೃತ್ತ, ಭಗತ್ ಸಿಂಗ್ ನಗರ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಕೃಷಿ ಮಾರುಕಟ್ಟೆಯ ಪ್ರಾಂಗಣಕ್ಕೆ ತೆರಳಿ, ಮಂಡಿಪೇಟೆ ಮೂಲಕ ಹೊಂಡದ ಸರ್ಕಲ್, ನಗರಸಭೆ ಮುಂಬಾಗದ ಮೂಲಕ ಜಯದೇವ ವೃತ್ತದಲ್ಲಿ ಸಮಾರೋಪಗೊಂಡಿತು.

ಈ ವೇಳೆ ಮಾತನಾಡಿದ ಎಐಯುಟಿಯುಸಿ ರಾಜ್ಯಾಧ್ಯಕ್ಷ ಸೋಮಶೇಖರ್ ಬಳ್ಳಾರಿ “ಈ ದೇಶದಲ್ಲಿ ಅದಾನಿ ಅಂಬಾನಿಗಳಂತಹ ಬಂಡವಾಳಶಾಹಿಗಳ ಹಿತಾಸಕ್ತಿಗೋಸ್ಕರ, ಅವರ ಸಂಪತ್ತನ್ನು ಹೆಚ್ಚಿಸಲು ಕಾರ್ಮಿಕರ, ರೈತರ ಹಾಗೂ ಜನಸಾಮಾನ್ಯರ ವಿರುದ್ಧವಾಗಿ ಜನ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಮತ್ತು ಬಂಡವಾಳಶಾಹಿಗಳ ಅನುಕೂಲತೆಯ ದೃಷ್ಟಿಯಿಂದ ಕಾರ್ಮಿಕ ಕಾನೂನುಗಳನ್ನು ಸರಳೀಕರಣಗೊಳಿಸಿ ಲೇಬರ್ ಕೋಡ್ ಗಳನ್ನು ಜಾರಿಗೆ ತಂದು ಕಾರ್ಮಿಕರ ಸ್ವಾತಂತ್ರ್ಯ , ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಲವು ಜನವಿರೋಧಿ ನೀತಿ, ಕಾರ್ಮಿಕ ವಿರೋಧಿ ನೀತಿಗಳ ಮೂಲಕ ದುಡಿಯುವ ಅವಧಿಯ ಹೆಚ್ಚು ಮಾಡಿ, ಮುಷ್ಕರದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ, ಸಂಘಟನೆಯ ಹಕ್ಕು ಕಿತ್ತುಕೊಳ್ಳಲಾಗುತ್ತಿದೆ, ಕಾಯಂ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದರು.
“ಇದರೊಂದಿಗೆ ರೈತ ವಿರೋಧಿ ನೀತಿಗಳನ್ನು ಕೂಡ ಜಾರಿಗೊಳಿಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಿಗೆ ಸೇರಿ ಬಂಡವಾಳ ಶಾಹಿಗಳ ಪರ ನೀತಿಗಳನ್ನು ಜಾರಿಗೊಳಿಸುತ್ತಿವೆ. ಇದರ ವಿರುದ್ಧ 10 ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಒಟ್ಟಿಗೆ ಸೇರಿ ಕಾರ್ಮಿಕ, ರೈತ ವಿರೋಧಿ, ಜನ ವಿರೋಧಿ ನೀತಿಗಳನ್ನು ವಿರೋಧಿಸಿ ರದ್ದು ಮಾಡಲು ಒತ್ತಾಯಿಸಿ 2026, ಫೆಬ್ರವರಿ 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ನಡೆಸುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪರಿಶಿಷ್ಟರ ಎಸ್‌ಸಿಪಿಎಸ್‌ಟಿ ಅನುದಾನ ದುರ್ಬಳಕೆ ನಿಲ್ಲಿಸಿ: ದಸಂಸ ಮುಖಂಡ ಮಂಜುನಾಥ ಕುಂದುವಾಡ
ಬೈಕ್ ರಾಲಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ಉಮೇಶ್ ಆವರ್ಗೆರೆ, ರಾಘವೇಂದ್ರ ನಾಯರಿ, ಮಂಜುನಾಥ್ ಕೈದಾಳ್, ಮಧು ತೊಗಲೇರಿ, ಐರಣಿ ಚಂದ್ರು, ಲಕ್ಷ್ಮಣ್, ರಮೇಶ್ ದಾಸರ್, ಶಿವಕುಮಾರ್, ರೈತ ಸಂಘದ ಹೊನ್ನೂರು ಮುನಿಯಪ್ಪ, ಬುಳ್ಳಾಪುರ ಹನುಮಂತಪ್ಪ, ಜನಶಕ್ತಿಯ ಸತೀಶ್ ಅರವಿಂದ್, ಪವಿತ್ರ ಅರವಿಂದ್, ಆದಿಲ್ ಖಾನ್, ರಾಮಾಂಜನೇಯ, ಅಶ್ವಖ್ ಸೇರಿದಂತೆ ಹಲವರು ಭಾಗವಹಿಸಿದ್ದರು.





