“ಯಾವುದೇ ದೇಶ, ಸಮಾಜವಾಗಲಿ ಸ್ತ್ರೀಯರಿಗೆ ಸಮಾನತೆ, ಶಿಕ್ಷಣ, ಸ್ವಾತಂತ್ರ್ಯ ನೀಡದಿದ್ದಲ್ಲಿ ಪ್ರಗತಿಯಾಗುವುದಿಲ್ಲ” ಎಂದು ಸಚಿವ ಸಂತೋಷ್ ಲಾಡ್ ಫೌಂಡೇಶನ್ ಮುಖ್ಯಸ್ಥ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ಸಂತೋಷ್ ಲಾಡ್ ಫೌಂಡೇಶನ್ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ವಿಚಾರ ಸಂಕಿರಣ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, “ಅಂಬೇಡ್ಕರ್ ಎಂದರೆ ವಿಶ್ವಕೋಶ, 36 ಪದವಿಗಳು, 54 ವಿಷಯ, 11 ಭಾಷೆ ಕಲಿತವರು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್. ಹೆಣ್ಣನ್ನು ಕೀಳಾಗಿ ಕಂಡು ಸತಿ ಸಹಗಮನ, ವಿಧವಾ ಪದ್ಧತಿ ಇತ್ಯಾದಿ ಅನಿಷ್ಟ ನಂಬಿಕೆಗಳಿಂದ ದೂರ ಇಟ್ಟಿದ್ದ ವ್ಯವಸ್ಥೆಯಲ್ಲಿ ಹಿಂದೂ ಕೋಡ್ ಬಿಲ್ ತಂದು ಮಹಿಳೆಯರಿಗೆ ಸ್ವಾತಂತ್ರ್ಯ, ಆಸ್ತಿ ಹಕ್ಕು, ಮತದಾನದ ಹಕ್ಕು ಸೇರಿದಂತೆ ಹಲವು ಸ್ವಾತಂತ್ರ್ಯ ಕೊಟ್ಟವರು. ಹೆಣ್ಣಿಗೆ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ ನೀಡದ ಸಮಾಜ ದೇಶ ಪ್ರಗತಿಯಾಗಲ್ಲ ಎಂದು ಅಂಬೇಡ್ಕರ್ ತಿಳಿದಿದ್ದರು. ಮಹಿಳೆಯರು ದೇವರಿಗಿಂತ ಹೆಚ್ಚಾಗಿರುವ ಡಾ. ಅಂಬೇಡ್ಕರರನ್ನು ಪೂಜಿಸಬೇಕು” ಎಂದು ಹೇಳಿದರು.
“ಪೂಜ್ಯ ಶ್ರೀಗಳು, ವಿದ್ಯಾರ್ಥಿಗಳು, ಎಲ್ಲರನ್ನೂ ಇಂತಹ ಕಾರ್ಯಕ್ರಮಗಳಿಗೆ ಕರೆಸುವ ಉದ್ದೇಶ, ಬುದ್ಧ ಬಸವ ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿಸುವುದಾಗಿದೆ. ಕಾರಣ ಅಂಬೇಡ್ಕರ್ ಜಾತಿ ವಿನಾಶ ಪುಸ್ತಕ ಬರೆದು ನಂತರ ಅದರ ಆಧಾರದ ಮೇಲೆಯೇ ಸಂವಿಧಾನ ಬರೆಯುತ್ತಾರೆ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಜನಸಾಮಾನ್ಯರ ನಡುವೆ ಗೌರವ ಕೊಡಬೇಕು” ಎಂಬುದಾಗಿದೆ.

“ಈ ಕಾರ್ಯಕ್ರಮದ ಉದ್ದೇಶ ಎಲ್ಲರೂ ಅಂಬೇಡ್ಕರ್ ಅವರನ್ನು ಓದಿಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎನ್ನುವ ಉದ್ದೇಶ. ಅವರನ್ನು ಎಸ್‌ಸಿ/ಎಸ್‌ಟಿ ಸಮಾಜಕ್ಕೆ, ಮೀಸಲಾತಿಗೆ ಮೀಸಲಾಗಿರಿಸಿದ್ದೇವೆ. ದೇಶದಲ್ಲಿ ನೀರನ್ನು ಶೋಷಿತರು ಮುಟ್ಟದಂತಹ ಪರಿಸ್ಥಿತಿಯಲ್ಲಿ ನೀರಿಗಾಗಿ ಚಳವಳಿ ನಡೆಸಿದವರು ಅಂಬೇಡ್ಕರ್. ಬಸವಣ್ಣನವರ ಸಾಮಾಜಿಕ ಸುಧಾರಣೆಯ ಕೆಲಸಗಳನ್ನು ಸಂವಿಧಾನದಲ್ಲಿ ಜಾರಿಗೆ ತಂದವರು ಅಂಬೇಡ್ಕರ್. ಇಂದು ದೇಶದಲ್ಲಿ ಬದಲಾವಣೆ ತರುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳು, ಯುವಜನರ ಮೇಲಿದೆ. ಆ ಹೊಣೆಯನ್ನು ಬುದ್ಧ ಬಸವ ಅಂಬೇಡ್ಕರ್ ವಿಚಾರಧಾರೆಗಳನ್ನು ಅರಿಯುವುರೊಂದಿಗೆ ಉತ್ತಮವಾಗಿ ನಿರ್ವಹಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅನುಭವ ಮಂಟಪದ ಶರಣರ ಒಟ್ಟು ಸಾರಾಂಶವೇ ಬಸವಣ್ಣ; ಬುದ್ಧ ಬಸವ ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಸಾಹಿತಿ ರಂಜಾನ್ ದರ್ಗಾ
ಕನಕ ಗುರುಪೀಠದ ನಿರಂಜನಾನಂದ ಶ್ರೀಗಳು ಆಶೀರ್ವಚನ ನೀಡಿ, “2500 ವರ್ಷದ ಹಿಂದೆ ಬುದ್ಧ, 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಸಮಾನತೆ ತರಲು, ಅಸಮಾನತೆ, ಜಾತಿ ತಾರತಮ್ಯ, ಶೋಷಿತರ ದೌರ್ಜನ್ಯ, ಶೋಷಣೆ ತಡೆಯಲು ಕೆಲಸ ಮಾಡಿದವರು. ಇಂದು ಸಾರ್ವಜನಿಕ ಜೀವನದಲ್ಲಿ ಅಲ್ಪ ಸ್ವಲ್ಪ ಗೌರವದ ಜೀವನ ಪಡೆಯಲು, ಬದುಕಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಕಾರಣೀಭೂತರಾವರು ಡಾ. ಬಿ ಆರ್ ಅಂಬೇಡ್ಕರ್. ದೇಶ, ಸಮಾಜ ಕೆಟ್ಟಿದೆ ಎಂದು ದೂಷಣೆ ಮಾಡುತ್ತಲೇ ಇರುತ್ತಾರೆ. ಆದರೆ ನಮ್ಮ ನಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿದರೆ ಸಮಾಜ ಸರಿಯಾಗುತ್ತದೆ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬುದ್ಧ ಬಸವ ಅಂಬೇಡ್ಕರರಂತೆ ಪ್ರಜ್ಞೆ, ಕರುಣೆ ಬೆಳೆಸಿಕೊಳ್ಳಬೇಕು; ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು
ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಪಾಂಡೋಮಟ್ಟಿ ವಿರಕ್ತ ಮಠದ ಮ ನಿ ಪ್ರ ಗುರುಬಸವ ಶ್ರೀಗಳು, ಡಾ. ಬಸವ ಜಯಚಂದ್ರ ಶ್ರೀಗಳು, ಷ. ಬ್ರ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಶ್ರೀ, ಕುಂಚಿಟಿಗ ಪೀಠದ ಶ್ರೀ ಶಾಂತವೀರ ಶ್ರೀಗಳು, ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಶ್ರೀಗಳು, ಹೆಳವ ಗುರು ಪೀಠದ ಬಸವ ಬೃಂಗೇಶ್ವರ ಶ್ರೀಗಳು, ವಾಲ್ಮೀಕಿ ಪ್ರಸನ್ನಾನಂದಪುರಿ ಶ್ರೀಗಳು, ರೆಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು, ಮಡಿವಾಳ ಗುರುಪೀಠದ ಬಸವ ಮಾಚೀದೇವ ಶ್ರೀಗಳು, ಬಸವ ಕುಂಬಾರಗುಂಡಯ್ಯಾ ಶ್ರೀಗಳು, ಅನ್ನದಾನಿ ಭಾರತೀ ಅಪ್ಪಣ್ಣ ಶ್ರೀಗಳು, ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಶ್ರೀಗಳು, ಕೇತೇಶ್ವರಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಶ್ರೀಗಳು, ಸಚಿವ ಸಂತೋಷ್ ಲಾಡ್, ಲೇಖಕಿ ವಿನಯಾ ಒಕ್ಕುಂದ, ಕನ್ನಡ ಅಧ್ಯಯನ ಪೀಠದ ಡಾ. ಅನಸೂಯ ಕಾಂಬಳೆ, ಡಾ. ಸಂಜೀವ ಕುಲಕರ್ಣಿ, ಬುದ್ಧ ಬಸವ, ಅಂಬೇಡ್ಕರ್ ಅನುಯಾಯಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.





