ರಾಜ್ಯ ಸರ್ಕಾರ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿ, ಮೀಸಲಾತಿಯಲ್ಲೂ ಕೂಡ ಶೋಷಣೆ ಅನುಭವಿಸುತ್ತಿರುವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಗ್ಯಾರಂಟಿ ನೀಡಬೇಕು ಎಂದು ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಮಠದ ಷಡಕ್ಷರ ಮುನಿದೇಶಿಕೇಂದ್ರ ಶ್ರೀಗಳು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಡಕ್ಷರಮುನಿ ಶ್ರೀಗಳು, “ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಗ್ಯಾರಂಟಿಗಳನ್ನು ನೀಡಿದ್ದಾರೆ. ಅದರೆ ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಸಮಾಜಕ್ಕೆ ಇನ್ನೂ ಒಳಮೀಸಲಾತಿ ಗ್ಯಾರಂಟಿ ಸಿಕ್ಕಿಲ್ಲ. ಈಗಲಾದರೂ ಮುಖ್ಯಮಂತ್ರಿಗಳು ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡಬೇಕು” ಎಂದು ಒತ್ತಾಯಿಸಿದರು.
“ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕವಾಗಿ ಮಾದಿಗ ಸಮುದಾಯ ಬಹಳ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಆ ನಿಟ್ಟಿನಲ್ಲಿ ಮಾದಿಗ ಸಮುದಾಯ ಒಳಮೀಸಲಾತಿ ನೀಡುವಂತೆ ಕಳೆದ 35 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದೆ. ಅದರೆ, ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನಮ್ಮ ಹೋರಾಟವನ್ನು ನಿರ್ಲಕ್ಷ್ಯಿಸಿವೆ. ಬರೀ ಭರವಸೆ ನೀಡುವ ಸರ್ಕಾರಗಳು ಜಾರಿಗೆ ತರಲಿಲ್ಲ. ಮೂಲ ಸಂವಿಧಾನದ ಆಶಯಗಳನ್ನು ಮೂಲೆಗೆ ಸರಿಸಿ ಸಮುದಾಯಗಳಿಗೆ ಘೋರ ಅನ್ಯಾಯ ಮಾಡಿವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಪ್ರಸ್ತುತ 56 ಸಾವಿರ ಹುದ್ದೆಗಳನ್ನು ತುಂಬಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಒಳಮೀಸಲಾತಿ ಅನ್ವಯಿಸದೇ ಹುದ್ದೆಗಳ ಭರ್ತಿ ಮಾಡುವುದು ಮಾದಿಗ ಸಮುದಾಯಕ್ಕೆ ತುಂಬ ಅನ್ಯಾಯವಾಗಲಿದೆ. ಒಳಮೀಸಲಾತಿ ಅಂದರೆ ಹಸಿದವನಿಗೆ ಅನ್ನ ನೀಡುವುದು ಎಂದರ್ಥ. ಸರಕಾರ ನಮ್ಮ ಬೇಡಿಕೆ ಈಡೇರಿಸಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಬಾರದು. ಮುಂದಿನ ದಿನಗಳಲ್ಲಿ ಬೇಡುವ ಸ್ಥಿತಿ ಬದಿಗಿರಿಸಿ ಕಿತ್ತುಕೊಳ್ಳುವ ಹಂತಕ್ಕೆ ಬರುತ್ತೇವೆ. ತಿರುಗಿಬೀಳುವ ಕಾಲ ದೂರವಿಲ್ಲ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಡುಗೆ ಅನಿಲ ಬೆಲೆ ಏರಿಕೆ: ಜಿಲ್ಲಾ ಕಾಂಗ್ರೆಸ್ ಹಾಗೂ ಮಹಿಳಾ ಘಟಕ ಪ್ರತಿಭಟನೆ
ಪತ್ರಿಕಾಗೋಷ್ಠಿಯಲ್ಲಿ ಎಚ್.ವಿಶ್ವನಾಥ, ಹೆಗ್ಗೆರೆ ರಂಗಪ್ಪ, ನಿರಂಜನ, ಪತ್ರಕರ್ತ ಕುಣಿಬೆಳಕೆರೆ ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.





