ಗ್ಯಾರಂಟಿ ಯೋಜನೆಯ ಅನುಷ್ಠಾನಗಳ ಕಾರ್ಯಕ್ರಮ ಮತ್ತು ಜಿಲ್ಲಾಮಟ್ಟದ ಕಾರ್ಯಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದ್ದು ಇದರ ಅಂಗವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ದಾವಣಗೆರೆಯ ನಗರದ ಕೇಂದ್ರ ಭಾಗದ ಗುಂಡಿಮಹದೇವಪ್ಪ ಭವನದಲ್ಲಿ ಆಯೋಜಿಸಲಾಗಿದ್ದು, ಮುಖಂಡರಿಂದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಶಕ್ತಿ ಹಾಗೂ ಬಸವಣ್ಣನ ದಾಸೋಹ ತತ್ವ ಎನ್ನುವ ಅಭಿಮತ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ “2023ರ ಚುನಾವಣೆ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದೆವು. ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದು, ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್ ಸರ್ಕಾರ. ಮಹಿಳೆಯರ, ಯುವಕರ ಆರ್ಥಿಕ ಮತ್ತು ಸಮಾಜಿಕ ಭದ್ರತೆಗೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. 4.5 ಕೋಟಿಗೂ ಹೆಚ್ಚು ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ, ಬಿಟ್ಟಿಭಾಗ್ಯ, ಹಣ ಪೋಲು ಮಾಡುತ್ತಿರುವ ಯೋಜನೆ ಎನ್ನುವ ಅಪಪ್ರಚಾರ ತಡೆಯಲು ಅಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಈ ಬಗ್ಗೆ ತಿಳಿಸಬೇಕು. ಇದೀಗ ಅನ್ನ ಭಾಗ್ಯದಲ್ಲಿ ಸಿರಿದಾನ್ಯ, ಎಣ್ಣೆ ಬೇಳೆಕಾಳುಗಳನ್ನು ಕೊಡುವ ಯೋಜನೆ ಇದ್ದು, ಆಹಾರ ಭದ್ರತೆಯ ಜೊತೆಗೆ ಆರೋಗ್ಯದ ಭದ್ರತೆಯನ್ನು ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.

“ಗ್ಯಾರಂಟಿಗಳ ಕರ್ನಾಟಕ ಮಾಡೆಲ್ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಯಾಗುತ್ತಿದೆ. ಮಹಿಳೆಯರು ಗೃಹಲಕ್ಷ್ಮಿ ಹಣದಲ್ಲಿ ಉಳಿತಾಯ ಮಾಡಬೇಕು. ಜಿಎಸ್ಟಿಯಲ್ಲಿ ಎರಡನೇ ಸ್ಥಾನದಲ್ಲಿ, ಜಿಡಿಪಿಯಲ್ಲಿ ಒಂದನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯ ಇದೆ. ಗ್ಯಾರಂಟಿಗಳ ನಂತರವೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಾಗುತ್ತಿದೆ” ಎಂದು ತಿಳಿಸಿದರು.
ಜಾಗೃತ ಕರ್ನಾಟಕ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಮೋಹನ್ ಬಿಕೆ ಗ್ಯಾರಂಟಿಗಳ ಬಗ್ಗೆ ವಿಷಯ ಮಂಡನೆ ಮಾಡಿ, “ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಹತ್ತು ಸಾವಿರ ಕೋಟಿ ಹಣವನ್ನು ಖರ್ಚು ಮಾಡಿದೆ. 2 ನೇರಹಣದ ಯೋಜನೆಗಳು ಮತ್ತು ಮೂರು ಸೇವೆಯ ರೂಪದಲ್ಲಿ ಗ್ಯಾರಂಟಿ ಯೋಜನೆಗಳಿವೆ. ಈ ಯೋಜನೆ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಆದರೆ ಸತ್ಯವನ್ನು ತಿಳಿದುಕೊಳ್ಳಬೇಕು. ಕೆಲವರು ಯೋಜನೆಗಳು ಜಾರಿಯಾಗುವುದಿಲ್ಲ, ಜಾರಿಯಾದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಹೇಳಿದ್ದು, ಯಾವ ರಾಜ್ಯದಲ್ಲಿ ಅಧಿಕಾರಿಗಳಿಗೆ ಸರ್ಕಾರಿ ನೌಕರರಿಗೆ ಸಂಬಳಕ್ಕೆ ಹಣ ಇರುವುದಿಲ್ಲವೋ ಅಂತಹ ಸ್ಥಿತಿಯಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಆದರೆ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದೆ. 20 ಸಾವಿರ ಕೋಟಿ ಹೆಚ್ಚುವರಿ ವೇತನ ನೀಡುತ್ತಿದೆ” ಎಂದು ತಿಳಿಸಿದರು.

“ಗ್ಯಾರಂಟಿಗಳಿಂದ ಜನಗಳು ಸೋಮಾರಿಯಾಗುತ್ತಾರೆ ಎಂದು ಪ್ರಚಾರ ಮಾಡಿದರು. ಆದರೆ ಯಾವ ಜನರೂ ಸೋಮಾರಿಯಾಗಿಲ್ಲ. ಈ ರೀತಿಯ ಪ್ರಪಂಚದ 40 ಕ್ಕೆ ಹೆಚ್ಚು ರಾಷ್ಟ್ರಗಳಲ್ಲಿ ಈ ತರಹದ ಯೋಜನೆಗಳು ಜಾರಿಯಿದ್ದು, ರಾಷ್ಟ್ರದಲ್ಲಿ ತಮಿಳುನಾಡು ಇದನ್ನು ಮೊದಲು ಜಾರಿ ಮಾಡಿದೆ. ತಮಿಳುನಾಡಿನ ಮಾನವ ಸೂಚ್ಯಂಕ ಅಭಿವೃದ್ಧಿ ರಾಷ್ಟ್ರದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಹಾಗೂ ಅಭಿವೃದ್ಧಿಗೆ ಯಾವುದೇ ಹಣ ಇಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಜನಗಳಿಗೆ ನೇರವಾಗಿ ಹಣ ನೀಡುವ ಯೋಜನೆಗಳು ಬಂದಾಗ ಮೊದಲ ಎರಡು ಮೂರು ವರ್ಷಗಳಲ್ಲಿ ಈ ರೀತಿ ಆಗುವುದು ಸಹಜ. ಆದರೆ ನಂತರದ ವರ್ಷಗಳಲ್ಲಿ ಅಭಿವೃದ್ಧಿಗೆ ಬರುವ ಹಣ ದುಪ್ಪಟ್ಟಾಗುತ್ತದೆ. ಗ್ಯಾರೆಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡಿದ ನಂತರವೂ ರಾಜ್ಯದ ಜಿಡಿಪಿ ಶೇಕಡ 42 ಇದ್ದರೆ, ದೇಶದ್ದು ಶೇ. 22 ಮಾತ್ರ ಇದೆ” ಎಂದು ಅಂಕಿ ಅಂಶಗಳ ಪ್ರಕಾರ ವಿವರಿಸಿದರು.

“ಗ್ಯಾರಂಟಿಗಳಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ, ತೆರಿಗೆ ಹಣವನ್ನು ಪೋಲು ಮಾಡುತ್ತಾರೆ, ಸಾಲ ಹೆಚ್ಚು ಮಾಡುತ್ತಾರೆ ಎನ್ನುತ್ತಾರೆ. ಆದರೆ ನಿಜವಾಗಿಯೂ ಜನರ ಕೈಗೆ ಹಣವನ್ನು ನೀಡುವುದರಿಂದ ಜನರ ಕೊಳ್ಳುವ ಮತ್ತು ಖರ್ಚು ಮಾಡುವ ಶಕ್ತಿಯ ಹೆಚ್ಚಳದಿಂದ ಆರ್ಥಿಕತೆಗೆ ಶಕ್ತಿ ಬರುತ್ತದೆ ಹಾಗೂ ಸಾಲದ ವಿಷಯದಲ್ಲಿ ಹೇಳಬೇಕಾದರೆ ಜಿಡಿಪಿಯ ಶೇಕಡ ಮೂರರಷ್ಟು ಸಾಲ ಮಾಡಬೇಕೆಂದು ಆರ್ಥಿಕ ತಜ್ಞರು, ನಿಯಮಗಳು ಹೇಳುತ್ತವೆ. ರಾಜ್ಯ ಜಿಡಿಪಿಯ ಶೇ. 2.9 ಸಾಲ ಮಾಡಿದ್ದರೆ ಕೇಂದ್ರ ಶೇ.4 ಸಾಲ ಮಾಡಿದೆ. ಇದರಲ್ಲಿ ಸಾಲ ಯಾರದು ಹೆಚ್ಚು ಎಂದು ಜನರೇ ನಿರ್ಧರಿಸಬೇಕು” ಅಂದರು.
“ಗ್ಯಾರೆಂಟಿಗಳನ್ನು ಮಹಿಳೆಯರಿಗೆ ಹೆಚ್ಚು ಕೊಟ್ಟಿರುವುದು ಕೇವಲ ಓಟಿನ ಪ್ರಶ್ನೆ ಅಲ್ಲ. ಜಗತ್ತಿನಲ್ಲಿ 100 ವರ್ಷಗಳಿಂದಲೂ ಮಹಿಳೆಯರ ಸ್ವಾಭಿಮಾನ ಮತ್ತು ಅವರ ಶ್ರಮಕ್ಕೆ ತಕ್ಕ ಪ್ರತಿಫಲಕ್ಕೆ ಹೋರಾಟ ನಡೆಯುತ್ತಿದೆ. ಸಂಶೋಧನೆಯ ಎಂದರೆ ಪ್ರಕಾರ ಮನೆಯಲ್ಲಿ ಮನೆ ,ಮಕ್ಕಳು ಇತರ ಕೆಲಸಗಳನ್ನು ನೋಡಿಕೊಳ್ಳುವ ಕೆಲಸ ಹೋಲಿಸಿದರೆ ಮನೆಯ ಶೇಕಡಾ ಮೂರನೇ ಎರಡರಷ್ಟು (2/3) ಕೆಲಸವನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ಗ್ಯಾರಂಟಿಗಳು ಇದಕ್ಕಾಗಿ ಅವರಿಗೆ ಸಂದಿರುವ ಗೌರವ ಮತ್ತು ವೇತನ ಎನ್ನಬಹುದು. ಗ್ಯಾರಂಟಿಗಳಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗಲು ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದು 2019ರಲ್ಲಿ 72 ಸಾವಿರ ಪ್ರತಿ ಕುಟುಂಬಕ್ಕೆ ವಿತರಿಸುವ ರಾಹುಲ್ ಗಾಂಧಿಯ ನ್ಯಾಯ್ ಯೋಜನೆಯೇ ಇದಕ್ಕೆ ಮುನ್ನುಡಿ ಆಗಿದೆ. ಶ್ರೇಷ್ಠ ಅರ್ಥಶಾಸ್ತ್ರಜ್ಞರಾದ ಡೆಫ್ರೊ, ಬ್ಯಾನರ್ಜಿ ಅಂತಹವರ ಜೊತೆ ಚರ್ಚಿಸಿ ರಾಹುಲ್ ಗಾಂಧಿ ಜನರಿಗೆ ನೇರವಾಗಿ ಕೈಗೆ ಹಣ ಕೊಡುವ ಯೋಜನೆ ರೂಪಿಸಿದರು. ಆರ್ಥಿಕ ಸುಧಾರಣೆಯ ಹಿನ್ನೆಲೆಯಲ್ಲಿ ಸಂವಿಧಾನದ ಆರ್ಟಿಕಲ್ 21, 39,40,41,44 ರ ವಿಧಿಗಳ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಜನರ ಕೈಗೆ ಹಣ ನೀಡುವುದನ್ನು ಪ್ರತಿಪಾದಿಸುತ್ತವೆ” ಎಂದು ಅಭಿಪ್ರಾಯಪಟ್ಟರು.

“ಇಂದು ಎರಡು ರೀತಿಯ ರಾಜಕಾರಣ ನಡೆಯುತ್ತಿದೆ. ಜನರಿಂದ ಕಿತ್ತು ಶ್ರೀಮಂತರಿಗೆ ನೀಡುವ ರಾಜಕಾರಣ ಒಂದೆಡೆ ಇದ್ದರೆ, ಜನರಿಗೆ ಹಣ ನೀಡುವ ರಾಜಕಾರಣ ಮತ್ತೊಂದೆಡೆ ಇದೆ. ಇಲ್ಲಿಯವರೆಗೂ ಕೇಂದ್ರ 12 ಲಕ್ಷ ಕೋಟಿ ಶ್ರೀಮಂತರ ಸಾಲದ ಹಣವನ್ನು ರೈಟ್ ಆಫ್ ಮಾಡಿದೆ. ಆದರೆ ಬಡವರಿಗೆ ಕೊಡುವ ಈ ಗ್ಯಾರಂಟಿ ಯೋಜನೆಗಳ ಹಣದ ಬಗ್ಗೆ ಅಸಹನೆ ಯಾಕೆ ಎಂದು ಅರ್ಥವಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಬಸವಣ್ಣನ ದಾಸೋಹ ತತ್ವದ ಮೇಲೆ ನಿಂತಿವೆ. ಬಸವಣ್ಣ ಹೇಳಿದ ದಾಸೋಹ, ಇಸ್ಲಾಂ ನಲ್ಲಿರುವ ಜಕಾತ್, ಸಿಖ್ ಧರ್ಮದ ಲಂಗರ್ ಇವೆಲ್ಲ ದಾಸೋಹದ ಪರಿಕಲ್ಪನೆಗಳು. ಅಂದು ಬಸವಣ್ಣ ಶಿವನಿಧಿಯನ್ನು ಸ್ಥಾಪಿಸಿ, ಜನರಿಂದಲೇ ಸಂಗ್ರಹಿಸಿ ಅಶಕ್ತ ಜನರಿಗೆ ನೀಡುವ ನಿಧಿಯನ್ನು ಸ್ಥಾಪಿಸಿದರು. ಆ ರೀತಿಯ ಯೋಜನೆಗಳೇ ಗ್ಯಾರಂಟಿ ಯೋಜನೆಗಳು” ಎಂದು ಪ್ರಸ್ತುತಪಡಿಸಿದರು.
ಶಾಸಕ ಶಾಂತನಗೌಡ ಮಾತನಾಡಿ “ಬಿಟ್ಟಿ ಯೋಜನೆ ಎಂದ ವಿಪಕ್ಷದವರ ಮನೆಯ ಮಹಿಳೆಯರು ಕೂಡ ಇದರ ಫಲಾನುಭವಿಗಳು. ಹೆಣ್ಣು ಮನೆಯ ಆರ್ಥಿಕ ನಿರ್ವಹಣೆ ಮಾಡಿದರೆ ಯಾವುದೇ ಸಂಸಾರಗಳಲ್ಲಿ ಸಾಲ ಇರುವುದಿಲ್ಲ. ಗೃಹಲಕ್ಷ್ಮಿ ಮಹಿಳೆಯರಿಗೆ ಶಕ್ತಿ ಮತ್ತು ನೆಮ್ಮದಿ ತುಂಬಿದೆ” ಎಂದು ಅಭಿಪ್ರಾಯಪಟ್ಟರು.
ಶಾಸಕ ಬಸವಂತಪ್ಪ ಮಾತನಾಡಿ “ಇದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ರಾಹುಲ್ ಗಾಂಧಿಯವರ ಕನಸು. ಕಾಂಗ್ರೆಸ್ ತಾನು ಏನು ಹೇಳಿದೆಯೋ ಅದನ್ನು ಸಾಧ್ಯವಾಗಿಸಿ ಅನುಷ್ಠಾನಕ್ಕೆ ತಂದಿದೆ. ಗ್ಯಾರೆಂಟಿ ಯೋಜನೆಗಳು ನಿಲ್ಲುವುದಿಲ್ಲ ಮುಂದಿನ ಅವಧಿಗೂ ಮುಂದುವರಿಯುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭದ್ರಾಮೇಲ್ದಂಡೆ ಕಾಮಗಾರಿ ಅನುದಾನ ಬಿಡುಗಡೆಗೆ ಜಗಳೂರಿನಲ್ಲಿ ಸಂಘಟನೆಗಳ ಪ್ರತಿಭಟನೆ
ಕಾರ್ಯಕ್ರಮಕ್ಕೆ ಮುನ್ನ ದಾವಣಗೆರೆ ನಗರದ ಡಾ.ಬಿಆರ್ ಅಂಬೇಡ್ಕರ್ ವೃತ್ತದಿಂದ ಗುಂಡಿ ಮಹದೇವಪ್ಪ ಭವನದವರೆಗೂ ಗ್ಯಾರಂಟಿ ಯೋಜನೆಗಳ ಚಿತ್ರಪ್ರದರ್ಶನದ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್, ಉಪಾಧ್ಯಕ್ಷ ಎಸ್ ಆರ್ ಪಾಟೀಲ್, ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ವಿಠ್ಠಲ ಮಾಧವರಾವ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಸಿಂಹ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಮಂಜಪ್ಪ, ವನ್ಯ ಜೀವಿ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಅನೀಸ್ ಪಾಷಾ, ಕೆ ಎಸ್ ಮಂಜುನಾಥ್, ನಂಜನಾಯ್ಕ, ಲಿಯಾಖತ್ ಅಲಿ, ರಾಜೇಶ್ವರಿ ಟಿ ಎಂ, ಚಂದ್ರಶೇಖರ್, ಸದಸ್ಯರಾದ ಉಮೇಶ್, ಶ್ರೀನಿವಾಸ್, ಷಂಶೀರ್ ಅಹಮದ್, ಗದ್ಗೇಶ್, ಶಿವರಾಮ ನಾಯಕ್, ನಾಗರಾಜ್, ಶ್ರೀನಿವಾಸ ನಂದಿಗಾವಿ, ಗಿರೀಶ್, ನೀಲಗಿರಿಯಪ್ಪ, ಶಶಿಕಲಾ ಮೂರ್ತಿ, ಶಿವಶಂಕರ್ ಕೈದಾಳ್, ರಾಘವೇಂದ್ರ ಗೌಡ, ಅಲಿ ರಹಮತ್ ಸಾಧಿಕ್ ಪೈಲ್ವಾನ್ ಸೇರಿದಂತೆ ಜಿಲ್ಲಾಡಳಿತದ ಹಾಗೂ ಹಲವು ಇಲಾಖೆಗಳ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ಹಾಗೂ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.





