ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ.24.1 ಜನಸಂಖ್ಯೆಗೆ ಅನುಗುಣವಾಗಿ ಶೇ. 24 ಮೀಸಲಾತಿ ಇರಬೇಕಿದೆ. ನಾನು ಈ ಮೀಸಲಾತಿಯ ಪರವಾಗಿದ್ದೇನೆ. ಇದಕ್ಕಾಗಿ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಸಂಸದರು ಕೂಡ ಒತ್ತಡ ಹೇರಬೇಕು. ಇದಕ್ಕಾಗಿ ದೆಹಲಿಗೆ ಕೂಡ ಹೋಗಲಿದ್ದೇನೆ. ಇಲ್ಲವಾದಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಬರಲು ಸಾಧ್ಯವಿಲ್ಲ” ಎಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಹರಿಹರ ಸಮೀಪದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಇಂದು ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳು ಶೋಷಿತ ವರ್ಗಗಳಾಗಿರುವ ಇಂದಿನ ಪರಿಸ್ಥಿತಿಗೆ ಇದರ ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ನಾವು ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಅಂಬೇಡ್ಕರ್ ಹೇಳಿದಂತೆ ಶೋಷಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಸಂಘಟನೆ ಹೋರಾಟ ಬಹಳ ಮುಖ್ಯ” ಎಂದು ಅಭಿಪ್ರಾಯಪಟ್ಟರು.

“ಸಂವಿಧಾನಕ್ಕಿಂತಲೂ ಮುಂಚೆ ಶೋಷಿತ ಸಮುದಾಯಗಳು ಶಿಕ್ಷಣವನ್ನು ಪಡೆಯುವ ಸ್ಥಿತಿಯಲ್ಲಿ ಇರಲಿಲ್ಲ. ನಾವೆಲ್ಲಾ ಶಿಕ್ಷಣದಿಂದ ಉಂಚಿತವಾಗಿದ್ದೆವು. ಆದರೂ ವರ್ಣಾಶ್ರಮ ಜಾರಿಯಲ್ಲಿದ್ದ ಕಾಲದಲ್ಲಿ ವಾಲ್ಮೀಕಿ ಮಹರ್ಷಿ ವಿದ್ಯೆಕಲಿತು ಕುಟೀರದಿಂದಲೇ ವಿದ್ಯೆ ಕಲಿಸುವ ಕೆಲಸ ಪ್ರಾರಂಭಿಸಿದರು. ವಿದ್ಯೆ ಕಲಿತು ರಾಮಾಯಣದಂತ ಮಹಾಕಾವ್ಯವನ್ನು ಭಾರತಕ್ಕೆ ನೀಡಿದ್ದಾರೆ. ಅದೇ ರೀತಿ ಅಂಬೇಡ್ಕರ್ ವಿದ್ಯೆ ಕಲಿತು ಸಂವಿಧಾನದಂತಹ ಮಹಾನ್ ಗ್ರಂಥವನ್ನು ರಚಿಸಿದರು. ಆದ್ದರಿಂದ ಶೋಷಿತ ಸಮುದಾಯಗಳಿಗೆ ಶಿಕ್ಷಣ ಕಲಿಕೆ ಮಹತ್ವವಾದದು” ಎಂದು ಪ್ರತಿಪಾದಿಸಿದರು.

“ಅಂಬೇಡ್ಕರ್ ಸಂಸದೀಯ ಚರ್ಚೆಯಲ್ಲಿ ಹೇಳಿದಂತೆ 1947ರ ಸ್ವಾತಂತ್ರ್ಯದಲ್ಲಿ ಶೋಷಿತರಿಗೆ ಸಾಮಾಜಿಕ, ಆರ್ಥಿಕ, ಸ್ವಾತಂತ್ರ್ಯ ಸಮಾನತೆ ಸಿಕ್ಕಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥ ಬರಲಿದೆ ಎಂದು ಹೇಳಿದ್ದರು. ಹಾಗಾಗಿ ಉತ್ತಮ ಶಿಕ್ಷಣ ಪಡೆದು ಸಾಮಾಜಿಕವಾಗಿ ಆರ್ಥಿಕವಾಗಿ ಸಫಲರಾದ ಮಾತ್ರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶೋಷಿತರನ್ನು ಮೇಲೆತ್ತಲು ಸಾಧ್ಯವಾಗಲಿದೆ” ಎಂದು ಅಭಿಪ್ರಾಯಪಟ್ಟರು.

“ಬಸವಣ್ಣ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಜಾತಿ ವರ್ಗ ವ್ಯವಸ್ಥೆ ಹೋಗಬೇಕು ಎಂದು ಪ್ರಯತ್ನ ಪಟ್ಟರು. ಇಂದಿಗೂ ಕೂಡ ಜಾತಿ ವ್ಯವಸ್ಥೆ ಉಳಿದುಕೊಂಡಿದೆ. ಜಾತಿ ಎನ್ನುವುದು ಒಂದು ಚಲನೆ ಇಲ್ಲದ ವ್ಯವಸ್ಥೆ. ಚಾಲನೆ ಬಂದಾಗ ಮಾತ್ರ ಆರ್ಥಿಕ ಸಮಾಜಿಕವಾಗಿ ಮೇಲೆ ಬರಲು ಸಾಧ್ಯ. ಜಾತಿ ವ್ಯವಸ್ಥೆ ಉಳಿಸಿ, ಶೋಷಿತರನ್ನು ತುಳಿಯಲು ನಿರಂತರವಾಗಿ ಪಟ್ಟಭದ್ರ ಶಕ್ತಿಗಳು ಕೆಲಸ ಮಾಡುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈ ಅಸಮಾನತೆಯನ್ನು ತೊಡೆದು ಹಾಕಲು ನಮ್ಮ ಸರ್ಕಾರ ಈ ಹಿಂದೆಯೇ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ನಿಗದಿಪಡಿಸಿ ಎಸ್ ಸಿ ಪಿ ಎಸ್ ಟಿ ಕಾನೂನು ತಂದಿದ್ದೇವೆ. ಆದ್ದರಿಂದಲೇ ಈ ವರ್ಷ 42018 ಕೋಟಿ ಅನುದಾನವನ್ನು ಪರಿಶಿಷ್ಟರಿಗೆ ಮೀಸಲಿರಿಸಲು ಸಾಧ್ಯವಾಗಿದೆ” ಎಂದು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್ ಮಹಾದೇವಪ್ಪ ಮಾತನಾಡಿ, “ಕರ್ನಾಟಕ ರಾಜ್ಯ ಸರ್ಕಾರ ಶೋಷಿತ ವರ್ಗಗಳ ನಾಯಕ ಹಿಂದುಳಿದ ವರ್ಗಗಳ ನೇತಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಅಲೆಮಾರಿಗಳ ಅಭಿವೃದ್ಧಿಗೆ ನಿರಂತರವಾಗಿ ನ್ಯಾಯ ಒದಗಿಸುವ ಕೆಲಸ ಮಾಡಿದೆ . ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ. ಪರಿಶಿಷ್ಟ ಪಂಗಡ ಮತ್ತು ಜಾತಿ, ಹಿಂದುಳಿದ ವರ್ಗಗಳು ಒಂದಾಗಿ ಹೋರಾಟ ನಡೆಸಬೇಕಿದೆ. ಆಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು, ಸಮುದಾಯಗಳು ಪ್ರಗತಿಯತ್ತ ನಡೆಯಲು ಸಾಧ್ಯವಾಗಲಿದೆ. ವಾಲ್ಮೀಕಿ, ಅಂಬೇಡ್ಕರ್, ಕನಕ, ಭಗೀರಥ ಸೇರಿದಂತೆ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಒಟ್ಟಾಗಿ ನಿರ್ಧಾರವನ್ನು ತೆಗೆದುಕೊಂಡು ಆಚರಿಸಬೇಕು. ಇಲ್ಲದಿದ್ದಲ್ಲಿ ನಾವು ದಿಕ್ಕಾಪಾಲಾಗಿ ಒಗೆದುಹೋಗಲಿದ್ದೇವೆ. ಸಂಘಟಿತರಾದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಲಿದೆ” ಎಂದು ಅಭಿಪ್ರಾಯಪಟ್ಟರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, “ಪ್ರತಿ ವರ್ಷ ಎಲ್ಲರೂ ಸೇರಿ ವಾಲ್ಮೀಕಿ ಜಾತ್ರೆಯನ್ನು ಆಚರಿಸಿ ಸಂಭ್ರಮದಿಂದ ಮನೆಗೆ ಹೋಗುವುದಲ್ಲ. ವಾಲ್ಮೀಕಿ ಜಾತ್ರೆ ಈ ಅವಧಿಯಲ್ಲಿ ನಮ್ಮ ಸಮುದಾಯದ ಎಷ್ಟು ಜನಗಳು ಉನ್ನತ ಅಧಿಕಾರಿಗಳಾಗಿದ್ದಾರೆ, ಉನ್ನತ ವ್ಯಾಸಂಗ, ಉದ್ಯೋಗ ಪಡೆದಿದ್ದಾರೆ ಎಂಬುದನ್ನು ನಾವು ಪರಮರ್ಶಿಸುವುದಾಗಿದೆ. ಪರಿಶಿಷ್ಟ ಪಂಗಡ, ಜಾತಿ ಮತ್ತು ಹಿಂದುಳಿದ ವರ್ಗಗಳು ಓದುವ ವಸತಿ ಶಾಲೆಗಳನ್ನು ಉನ್ನತಿಕರಿಸಬೇಕಿದೆ. ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಉನ್ನತ ಶಿಕ್ಷಣ ಪಡೆಯಲು ನೆರವಾಗುವ ಕೆಲಸ ಮಾಡಬೇಕು. ಈ ಸಮುದಾಯಗಳ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾಜ ಮುನ್ನಡೆಸುವ ಶಕ್ತಿಯಿರುವ ಮಹಿಳೆಗೆ ಅವಕಾಶ ನೀಡಬೇಕು: ನಾಗಲಕ್ಷ್ಮಿ ಚೌಧರಿ
ಕಾರ್ಯಕ್ರಮದಲ್ಲಿ ವಾಲ್ಮೀಕಿ ವಾಲ್ಮೀಕಿ ಗುರುಬಲದ ಪ್ರಸನ್ನ ಶ್ರೀಗಳು, ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ಶಾಸಕ ಬಸವರಾಜ ಗದ್ದಲ್, ಚಳ್ಳಕೆರೆ ಶಾಸಕ ರಘುಮೂರ್ತಿ, ಜಗಳೂರು ಶಾಸಕ ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ, ಶಾಸಕ ಬಸವಂತಪ್ಪ, ಸಂಸದ ಕುಮಾರ್ ನಾಯಕ್, ಪರಿಷತ್ ಸದಸ್ಯ ಯತೀಂದ್ರ, ಮಾಜಿ ಸಚಿವ ಆಂಜನೇಯ
ನೌಕರರ ಸಂಘದ ಶ್ರೀನಿವಾಸ್, ಹರಿಹರ ಶಾಸಕ ಬಿಪಿ ಹರೀಶ್, ಮಾಜಿ ಶಾಸಕ ವೈ ರಾಮಪ್ಪ, ಸಮಾಜದ ಮುಖಂಡ ವೀರಣ್ಣ ಸೇರಿದಂತೆ ಸಮಾಜದ ನೌಕರರು, ಹಲವು ಮುಖಂಡರು ಹಾಗೂ ಸಮಾಜ ಬಾಂಧವರು, ಸಾರ್ವಜನಿಕರು ಭಾಗವಹಿಸಿದ್ದರು.





