ಕಾರ್ಮಿಕರ, ಕೈಗಾರಿಕಾ ವಿವಾದಗಳು ಬಾಕಿ ಇರುವ ಸಂದರ್ಭದಲ್ಲೇ ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕಾರ್ಗಿಲ್ ಕಂಪನಿಯ ವಿರುದ್ಧ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟ ಧರಣಿ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭೇಟಿ ನೀಡಿ ಕಾರ್ಮಿಕರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್, “ಇತಿಹಾಸದಾದ್ಯಂತ ಮಾಲೀಕರು ಕಾರ್ಮಿಕರನ್ನು ಶೋಷಿಸುತ್ತಾ ಬಂದಿದ್ದಾರೆ. ಕಾರ್ಗಿಲ್ ಕಂಪನಿ ಕಾರ್ಮಿಕರ ಮೇಲೆ ನಡೆಸುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯಗಳ ವಿರುದ್ಧ ಕಾರ್ಮಿಕರು ಕೈಗೊಂಡಿರುವ ಈ ಹೋರಾಟ ನ್ಯಾಯಸಮ್ಮತವಾಗಿದ್ದು, ಹೋರಾಟವೇ ಏಕೈಕ ಸರಿಯಾದ ದಾರಿ” ಎಂದು ಹೇಳಿದರು.

ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ “ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹಾಗೂ ಕೈಗಾರಿಕೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಶೋಚನೀಯ” ಎಂದು ವಿಷಾದ ವ್ಯಕ್ತಪಡಿಸಿದರು.
“ಕೂಡಲೇ ಕಂಪನಿಯ ಮಾಲೀಕರು ಧರಣಿ ಸ್ಥಳಕ್ಕೆ ಬಂದು ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾರ್ಗಿಲ್ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ಸುತ್ತಮುತ್ತಲಿನ ಸಾವಿರಾರು ರೈತರನ್ನು ಹೋರಾಟಕ್ಕೆ ಕರೆತರಬೇಕಾಗುತ್ತದೆ. ಮುಂದಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ಮಂಡಳಿಯೇ ನೇರ ಹೊಣೆ” ಎಂದು ಎಚ್ಚರಿಕೆ ನೀಡಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಪೀಪಲ್ಸ್ ಲಾಯರ್ಸ್ ಗಿಲ್ಡ್‌ನ ರಾಜ್ಯ ಸಂಚಾಲಕರಾದ ಅನೀಸ್ ಪಾಷಾ ಮಾತನಾಡಿ “ಕಾರ್ಮಿಕರ ಹೋರಾಟವನ್ನು ಬೆಂಬಲಿಸುತ್ತೇವೆ. ಪ್ರಸ್ತುತ ದಿನಗಳಲ್ಲಿ ನಮ್ಮನ್ನು ಆಳುತ್ತಿರುವ ಎಲ್ಲ ಸರ್ಕಾರಗಳು ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಇಂತಹ ನೀತಿಗಳನ್ನು ಸೋಲಿಸಲು ಒಗ್ಗಟ್ಟಿನ ಹೋರಾಟವೇ ಏಕೈಕ ಮಾರ್ಗ” ಎಂದು ಹೇಳಿದರು.

“ದೆಹಲಿಯಲ್ಲಿ ಒಂದು ವರ್ಷಕ್ಕಿಂತ ಅಧಿಕ ಕಾಲ ನಡೆದ ರೈತ ಚಳುವಳಿ ನಮ್ಮ ದೇಶದಲ್ಲಿ ಇತಿಹಾಸ ನಿರ್ಮಿಸಿದಷ್ಟೇ ಅಲ್ಲ, ಇತರ ಹೋರಾಟಗಳಿಗೂ ಮಾದರಿಯಾಗಿದೆ. ಅದೇ ಸ್ಪೂರ್ತಿಯಿಂದ ಕಾರ್ಗಿಲ್ ಕಾರ್ಮಿಕರ ಹೋರಾಟ ಮುಂದುವರಿದಲ್ಲಿ ನ್ಯಾಯಕ್ಕೆ ಜಯ ಸಿಗಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾನತೆ ಸಾಧಿಸಲು ನಾನು ಮೀಸಲಾತಿ ಪರ ಇದ್ದೇನೆ: ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬುಳ್ಳಾಪುರ ಹನುಮಂತಪ್ಪ, ಮರುಳಸಿದ್ದಯ್ಯ, ಸೇರಿದಂತೆ ಇತರ ರೈತ ಮುಖಂಡರು ಧರಣಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿ ಮಾತನಾಡಿದರು. ಕಾರ್ಗಿಲ್ ವರ್ಕರ್ಸ್ ಯೂನಿಯನ್ಅಧ್ಯಕ್ಷ ಸಂಜಯ್ ಜೆ, ಗೌರವಾಧ್ಯಕ್ಷ ಮಂಜುನಾಥ್ ಕೈದಾಳೆ, ಮಂಜುನಾಥ್, ಮಧು ತೊಗಲೇರಿ, ಮಂಜುನಾಥ್ ಕುಕ್ಕುವಾಡ ಸೇರಿದಂತೆ ನೂರಾರು ಕಾರ್ಮಿಕರು ಹಾಜರಿದ್ದರು..





