ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 2026–27ರ ಕರ್ನಾಟಕ ರಾಜ್ಯ ಬಜೆಟ್ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ (ಅಹಿಂದ) ವರ್ಗಗಳಿಗೆ ಅನ್ಯಾಯ ಮಾಡಿರುವ ಬಜೆಟ್ ಎಂದು ಖಂಡಿಸಿ ಎಸ್‌ಡಿಪಿಐ (Social Democratic Party of India) ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಅಕ್ತರ್ ರಜಾ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, “ರಾಜ್ಯದಲ್ಲಿ ಶೇ. 17ರಷ್ಟಿರುವ ಅಲ್ಪಸಂಖ್ಯಾತರಿಗೆ ₹4,48,004 ಕೋಟಿ ಮೊತ್ತದ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೇವಲ ₹4801.27 ಕೋಟಿ (ಸುಮಾರು 1.07%) ಮಾತ್ರ ಮೀಸಲಿಟ್ಟಿರುವುದು ಸಾಮಾಜಿಕ ನ್ಯಾಯಕ್ಕೆನಿರಾಕರಿಸಿದಂತಾಗಿದೆ. 2023ರ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಜೆಟ್ ನಲ್ಲಿ 10,000 ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದರು” ಎಂದು ಆರೋಪಿಸಿದರು.

“ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ (scholership) ಹಾಗೂ ಶುಲ್ಕ ಮರುಪಾವತಿ ಯೋಜನೆಗೆ ಕಳೆದ ವರ್ಷ ನೀಡಿದ್ದ ₹338 ಕೋಟಿ ಅನುದಾನವನ್ನು ಈ ಬಾರಿ ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಿರುವುದು ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಹೊಡೆತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ಅನುದಾನವನ್ನು ₹724.26 ಕೋಟಿಯಿಂದ ₹325 ಕೋಟಿಗೆ ಕಡಿತಗೊಳಿಸಿದ್ದು, ನಗರ ಪ್ರದೇಶಗಳಲ್ಲಿನ ಅಲ್ಪಸಂಖ್ಯಾತ ಸ್ಲಂ/ಕಾಲೊನಿ ಅಭಿವೃದ್ಧಿ ಯೋಜನೆ ಹಾಗೂ ವಿದ್ಯಾರ್ಥಿನಿಲಯ ಯೋಜನೆಗಳ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇವಲ 10.54% ಹಾಗೂ ಆರೋಗ್ಯ ಕ್ಷೇತ್ರಕ್ಕೆ 3.98% ಅನುದಾನ ನೀಡಿರುವುದು ಜನರ ಬದುಕಿನ ಸುಧಾರಣೆ ಹಾಗೂ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ” ಎಂದು ಟೀಕಿಸಿದರು.

“ಅಲ್ಪಸಂಖ್ಯಾತರಿಗೆ ಸೂಕ್ತ ಅನುದಾನ ನೀಡದ ಈ ಬಜೆಟ್ಟನ್ನು ತೇಜಸ್ವಿ ಸೂರ್ಯ ಸೇರಿದಂತೆ ಕೆಲವು ರಾಜಕಾರಣಿಗಳು “ಸಾಬ್ರ ಬಜೆಟ್” “ಹಲಾಲ್ ಬಜೆಟ್” ಎಂದು ಕರೆಯುತ್ತಿರುವುದು ಜವಾಬ್ದಾರಿಯಿಲ್ಲದ ಕೊಳಕು ರಾಜಕೀಯ. ಅಮೇರಿಕಾ ಕೇಳಿ ತೈಲ ಖರೀದಿಸುವ ಪರಿಸ್ಥಿತಿ ಸೃಷ್ಟಿಸಿದ ವಿದೇಶಾಂಗ ಇಲಾಖೆ, ನರೇಂದ್ರ ಮೋದಿಯನ್ನು ಪ್ರಶ್ನೆ ಮಾಡುವ ಬದಲು ಶಿಕ್ಷಣ, ಆರೋಗ್ಯ ಹಾಗೂ ಅಸಮಾನತೆಗಳಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದವರು ಧರ್ಮದ ಆಧಾರದಲ್ಲಿ ಬಜೆಟ್ ಹಾಗೂ ಜನರನ್ನು ವಿಭಜಿಸುತ್ತಿರುವುದು ಕೋಮುವಾದಿ ರಾಜಕಾರಣ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಒಟ್ಟಾರೆ ಶಿಕ್ಷಣ ಆರೋಗ್ಯ ಅಭಿವೃದ್ಧಿ, ದಲಿತರು ಹಿಂದುಳಿದವರು ಅಲ್ಪಸಂಖ್ಯಾತರನ್ನು ಕಡೆಗಣಿಸಿದ ಈ ಬಜೆಟ್ಟನ್ನು ಮುಂದಿನ ಪೂರಕ ಬಜೆಟ್ ನಲ್ಲಿ
ಸರ್ಕಾರ ಕಡಿತಗೊಳಿಸಿದ ಯೋಜನೆಗಳನ್ನು ಮರುಸ್ಥಾಪಿಸಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹರಿಹರ ರಾಜಕಾಲುವೆ ನಿರ್ಮಾಣ ಕಾಮಗಾರಿ ಒತ್ತುವರೆಗೆ ಸಹಾಯ ಆರೋಪ
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಎ ಆರ್ ತಾಹೀರ್,ರಾಜ್ಯ ಸಮಿತಿ ಸದಸ್ಯ ಫಯಾಜ್ ದಾವಣಗೆರೆ, ಜಿಲ್ಲಾ ಉಪಾಧ್ಯಕ್ಷರಾದ ರಜ್ಜಿ ರಿಯಾಝ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್, ಸೇರಿದಂತೆ ಜಿಲ್ಲಾ ಹಾಗೂ ನಗರ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು





