ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಯಶಸ್ಸಿಗಾಗಿ ಜೆಸಿಟಿಯು (JCTU) – ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ದಾವಣಗೆರೆ ನಗರದ ಪಂಪಾಪತಿ ಭವನದಲ್ಲಿ ಮುಷ್ಕರಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಕಾರ್ಮಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬಂಡವಾಳಶಾಹಿಗಳ ಪೋಷಿಸುವ, ಕಾರ್ಮಿಕರ ಶೋಷಣೆಯ ವಿರುದ್ಧದ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹ ಕೇಳಿಬಂದಿತು.

ಸಮಾವೇಶದಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ರಾಜ್ಯ ಸಂಚಾಲಕ ಕೆ.ವಿ.ಭಟ್ ಮಾತನಾಡಿ,
“ವಿಸ್ತಾರವಾದ ಮತ್ತು ಕಾರ್ಮಿಕರ ಪರವಾಗಿದ್ದ 29 ಕಾನೂನುಗಳನ್ನು ಸಂಕುಚಿತಗೊಳಿಸಿ 4 ಕೋಡ್‌ಗಳಾಗಿ ಪರಿವರ್ತಿಸಿದ ಕಾರ್ಮಿಕ ವಿರೋಧಿ 4 ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು” ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
“ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೆಸರನ್ನು ವಿಬಿ ಜಿ.ರಾಮ್.ಜಿ ಎಂದು ಬದಲಾಯಿಸಿದರೆ ಕೃಷಿ ಕೂಲಿಕಾರ್ಮಿಕರ ಜೀವನ ಹಸನಾಗುವುದಿಲ್ಲ. ಜೊತೆಗೆ ಯೋಜನೆಯ ಭಾರವನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸಿದೆ. ಇದರಿಂದ ಯೋಜನೆಯನ್ನು ದುರ್ಬಲಗೊಳಿಸಿ ಹಳ್ಳಿಗಳಲ್ಲಿ ವಾಸಿಸುತ್ತಿರುವ ಬಡ ಕೃಷಿಕೂಲಿ ಕಾರ್ಮಿಕರ ಜೀವನವನ್ನು ದುಸ್ತರಗೊಳಿಸುವ ಹುನ್ನಾರ ಅಡಗಿದೆ. ಇದು ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿದೆ. ಎಪಿಎಂಸಿ ಕಾಯಿದೆ ತಿದ್ದುಪಡಿ ಬಿಲ್, ವಿದ್ಯುತ್ ಕಾಯಿದೆ ತಿದ್ದುಪಡಿ ಬಿಲ್, ವಿದೇಶಿ ನೇರ ಬಂಡವಾಳದ ನಿಯಮ ಪರಿಷ್ಕರಣೆ ಸೇರಿದಂತೆ ಅನೇಕ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿ ದೇಶದ ಕೋಟ್ಯಾಂತರ ಕಾರ್ಮಿಕರು ಮತ್ತು ರೈತರು ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮಾಡಲಿದ್ದಾರೆ. ಸಾರ್ವಜನಿಕರು, ವ್ಯವಹಾರಸ್ಥರು ಸ್ವಯಂ ಪ್ರೇರಣೆಯಿಂದ ಮುಷ್ಕರದಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.

ಕಾರ್ಮಿಕರ ಜಿಲ್ಲಾ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ “ಆಳುವ ಸರಕಾರಗಳು ಸಂಪೂರ್ಣವಾಗಿ ರೈತಕಾರ್ಮಿಕರ ವಿರುದ್ಧವಾದ ಧೋರಣೆಗಳನ್ನು ಅನುಸರಿಸುತ್ತಿವೆ. ಬಂಡವಾಳಶಾಹಿಗಳಿಗೆ ರಕ್ಷಣೆ ನೀಡುವುದಕ್ಕಾಗಿ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿಯನ್ನು ತಂದು ಕಾರ್ಮಿಕರ ಶೋಷಣೆ ಮಾಡುತ್ತಿದೆ. ಶತಮಾನಗಳಿಂದ ತ್ಯಾಗ, ಬಲಿದಾನ, ಹೋರಾಟಗಳಿಂದ ಗಳಿಸಿದ ಸೌಲಭ್ಯಗಳನ್ನು ಕೇಂದ್ರ ಸರಕಾರ ಕಸಿಯಲು ಯತ್ನಿಸುತ್ತಿದೆ. ಈ ಹುನ್ನಾರವನ್ನು ಹಿಮ್ಮೆಟ್ಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ಐಕ್ಯತೆಯಿಂದ ಕರೆ ನೀಡಿದ ಈ ಐತಿಹಾಸಿಕ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕ್ ವಲಯದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಮತ್ತು ಬೆಫಿ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ” ಎಂದು ತಿಳಿಸಿದರು.
ರೈತಸಂಘದ ಮುಖಂಡ ಕುರುಡಿ ಅರುಣ್ ಕುಮಾರ್ ಮಾತನಾಡಿ “ರೈತರು ಕಾರ್ಮಿಕರು ಒಂದಾಗಿ ಕೇಂದ್ರ ಸರಕಾರದ ರೈತಕಾರ್ಮಿಕ ವಿರೋಧಿ ನೀತಿಗಳನ್ನು ಸೋಲಿಸಬೇಕಾಗಿದೆ. ಕೇಂದ್ರ ಸರಕಾರ ಏನೇ ಮಾಡಿದರೂ ಬಹುಪರಾಕ್ ಹೇಳುವ ಗುಲಾಮ ಸಂಸ್ಕೃತಿ ಹೆಚ್ಚುತ್ತಿರುವುದು ದೇಶದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ದೆಹಲಿಯಲ್ಲಿ ನಡೆದ ರೈತ ಹೋರಾಟ ಮತ್ತು ಇತ್ತೀಚೆಗೆ ನಡೆದ ಬ್ಯಾಂಕ್ ಮಷ್ಕರದ ಮಾದರಿಯಲ್ಲಿ ಫೆಬ್ರವರಿ 12 ರ ಮುಷ್ಕರವನ್ನು ಯಶಸ್ವಿಗೊಳಿಸಿ ಸರಕಾರಕ್ಕೆ ಸ್ಪಷ್ಟ ಸಂದೇಶ ನೀಡುವ ಅಗತ್ಯವಿದೆ” ಎಂದರು.
ಜೆಸಿಟಿಯು ಜಿಲ್ಲಾ ಸಂಚಾಲಕ ಹೆಚ್.ಜಿ.ಉಮೇಶ್ ಅವರಗೆರೆ ಮಾತನಾಡಿ “ದಾವಣಗೆರೆ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟವು ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳ, ಯುವಜನತೆಯ ಬದುಕು ದುಸ್ತರವಾಗುತ್ತಿದೆ. ಇದನ್ನು ಜಿಲ್ಲಾಡಳಿತ ಈ ಕೂಡಲೇ ನಿರ್ಬಂಧಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ರೈತಕಾರ್ಮಿಕ ಜಂಟಿ ಸಮಿತಿಯ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಜಾಪ್ರಭುತ್ವ ಗಣರಾಜ್ಯ ಕುರಿತು ವಿಚಾರ ಸಂಕಿರಣ ಹಾಗೂ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ
ಸಮಾವೇಶವನ್ನು ಉದ್ದೇಶಿಸಿ ಎಐಟಿಯುಸಿ ಅವರಗೆರೆ ಚಂದ್ರು, ಸಿಐಟಿಯು ಆನಂದರಾಜು, ರೈತ ನಾಯಕ ಹೊನ್ನೂರು ಮುನಿಯಪ್ಪ, ಎಐಯುಟಿಯುಸಿ ಕೈದಾಳೆ ಮಂಜುನಾಥ್, ರೈತ ನಾಯಕ ಗುಮ್ಮನೂರು ಬಸವರಾಜ್, ಜನಶಕ್ತಿ ಪವಿತ್ರಾ, ಅಂಗನವಾಡಿ ಫೆಡರೇಶನ್‌ನ ಎಸ್.ಎಸ್.ಮಲ್ಲಮ್ಮ, ಆಶಾ ಸಂಘಟನೆಯ ಇಂದಿರಾ, ಬಿಸಿಯೂಟದ ರುದ್ರಮ್ಮ ಮುಂತಾದವರು ಮಾತನಾಡಿದರು. ರೈತ ನಾಯಕ ಬುಳ್ಳಾಪುರದ ಹನುಮಂತಪ್ಪ, ಕಂಪ್ಲೇಶ್, ಪರಮೇಶಪ್ಪ, ಕುಕ್ಕವಾಡ ಮಂಜುನಾಥ್, ಸಿಪಿಐ ಯಲ್ಲಪ್ಪ, ಸಿಪಿಐಎಮ್ ಶ್ರೀನಿವಾಸ್, ಇಪ್ಟಾ ಐರಣಿ ಚಂದ್ರು, ಹೊಸಳ್ಳಿ ಮಂಜುಳಾ, ಸರೋಜ, ರಂಗನಾಥ್, ಸಿ.ರಮೇಶ್, ಸತೀಶ್ ಅರವಿಂದ್, ಸುರೇಶ್ ಅವರಗೊಳ್ಳ, ಕೆ.ಮಹೇಶ್ವರಪ್ಪ ಹಾಗೂ ನೂರಾರು ರೈತ ಕಾರ್ಮಿಕರು ಭಾಗವಹಿಸಿದ್ದರು.





