ಭಾರತ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘಗಳ ಒಕ್ಕೂಟ (FMRAI) ತನ್ನ ಸಂಯೋಜಿತ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘವು (KSM&SRA) 1976ರ ಎಸ್ ಟಿ ಇ ಕಾಯ್ದೆಯನ್ನು ರಕ್ಷಿಸಿ, ಕೇಂದ್ರದ ಕಾರ್ಮಿಕ ವಿರೋಧಿ ಸಂಹಿತೆಗಳ ಜಾರಿಗೆ ತೀವ್ರ ಖಂಡನೆ ವ್ಯಕ್ತಪಡಿಸಿ, ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಕಾರ್ಮಿಕ ಹಿತಕ್ಕಾಗಿ ಕಾಯ್ದೆ ವಿರೋಧಿಸಿ ದಾವಣಗೆರೆ ಘಟಕದ ಸದಸ್ಯರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ, ಪ್ರಧಾನಿಗಳಿಗೆ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನ ಸಲ್ಲಿಸಲಾಯಿತು,

ದಾವಣಗೆರೆಯ ಪಿಜೆ ಬಡಾವಣೆಯಲ್ಲಿರುವ ಸಂಘದ ಕಚೇರಿಯ ಮುಂಭಾಗದಲ್ಲಿ ವೈದ್ಯಕೀಯ ಪ್ರತಿನಿಧಿಗಳು ಕಪ್ಪು ಪಟ್ಟಿಯನ್ನು ಧರಿಸಿ 4 ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಸುಟ್ಟು ಹಾಕಿ ಪ್ರತಿಭಟನೆಯನ್ನು ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು “ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (KSM&SRA) ಹಾಗೂ ಅದರ ಫೆಡರೇಶನ್ FMRAI, ಕೇಂದ್ರ ಸರ್ಕಾರವು 21 ನವೆಂಬರ್ 2025ರಿಂದ ಏಕಪಕ್ಷೀಯವಾಗಿ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಗಳ ಕಾರ್ಮಿಕ ವಿರೋಧಿ ನಡವಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತವೆ. 29 ಅಸ್ತಿತ್ವದಲ್ಲಿದ್ದ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಕೈಗೆತ್ತಿಕೊಂಡಿರುವ ಈ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸಿ, ಮಾಲೀಕರಿಗೆ ಉದ್ಯೋಗಿಗಳ ನೇಮಕ–ವಜಾ, ಪುನರ್ ರಚನೆ, ಹೊರಗುತ್ತಿಗೆ ಮತ್ತು ನಿಗದಿತ ಅವಧಿ ಒಪ್ಪಂದಗಳಲ್ಲಿ ಅತಿಯಾದ ಸ್ವಾತಂತ್ರ್ಯ ಕೊಡುತ್ತವೆ” ಎಂದು ಆತಂಕ ವ್ಯಕ್ತಪಡಿಸಿದರು.

“ಇದರಿಂದ ದೇಶದ ಲಕ್ಷಾಂತರ ಮಾರಾಟ ಪ್ರತಿನಿಧಿಗಳಿಗೆ ಉದ್ಯೋಗ ಭದ್ರತೆ ಕುಂದಿ, ಗುರಿ ಒತ್ತಡ, ಕೆಲಸದ ಶೋಷಣೆ ಮತ್ತು ಘನತೆಯ ಹಕ್ಕುಗಳಿಗೆ ಧಕ್ಕೆ ಉಂಟಾಗುವ ಭೀತಿ ಇದೆ. SPE ಕಾಯ್ದೆ 1976 ರ ರಕ್ಷಣೆಯನ್ನು ಮರುಸ್ಥಾಪಿಸುವಂತೆ ಕಾರ್ಮಿಕರು ದೀರ್ಘಕಾಲದಿಂದ ಬೇಡಿಕೆಗಳನ್ನು ಸಲ್ಲಿಸಿರುವುದನ್ನು ಸರ್ಕಾರ ನಿರ್ಲಕ್ಷಿಸಿರುವುದು ಕಾರ್ಪೊರೇಟ್ ಪರ ನೀತಿಯನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ: ಜೆಸಿಟಿಯು ಸಂಯುಕ್ತ ಹೋರಾಟ ಕರ್ನಾಟಕ ಪ್ರತಿಭಟನೆ
“ಇದಕ್ಕೆ ಪ್ರತಿಭಟನೆಯಾಗಿ FMRAI ಕಪ್ಪು ಬ್ಯಾಡ್ಜ್ ಧಾರಣೆ, ಜಿಲ್ಲಾ–ರಾಜ್ಯ ಮಟ್ಟದ ಪ್ರತಿಭಟನೆಗಳು, ಸಂಹಿತೆಗಳ ಪ್ರತಿಗಳನ್ನು ಸುಡುವುದು ಹಾಗೂ ಪ್ರಧಾನಮಂತ್ರಿಗೆ ಬೇಡಿಕೆ ಪತ್ರ ಸಲ್ಲಿಸುವಂತಹ ಹೋರಾಟಗಳನ್ನ ಘೋಷಿಸಿದ್ದು, ಎಲ್ಲಾ ಸೇಲ್ಸ್ ಪ್ರಮೋಷನ್ ಉದ್ಯೋಗಿಗಳು ಒಗ್ಗಟ್ಟಿನಿಂದ ಭಾಗವಹಿಸುವಂತೆ ಕರೆ ನೀಡಿದೆ. SPE ಕಾಯ್ದೆಯ ಮೇಲಿನ ದಾಳಿ ಎಂದರೆ ಸೇಲ್ಸ್ ಪ್ರಮೋಷನ್ ಉದ್ಯೋಗಿಗಳ ಹಕ್ಕು ಮತ್ತು ರಕ್ಷಣೆಗಳ ಮೇಲಿನ ದಾಳಿ ಆಗಿದ್ದು, ಬಲಿಷ್ಠ ಮತ್ತು ಏಕತೆಯ ಚಳವಳಿಯಿಂದ ಮಾತ್ರ ಸರ್ಕಾರದ ಮೇಲೆ ಒತ್ತಡ ತಂದು ಸಂಹಿತೆಗಳನ್ನು ಹಿಂತೆಗೆಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ
ಶ್ರೀಧರ ಟಿ, ಸಂಘದ ರಾಜ್ಯಾಧ್ಯಕ್ಷ ಆನಂದರಾಜು ಕೆ.ಹೆಚ್, ರಾಜ್ಯ ಕಾರ್ಯದರ್ಶಿ ವೆಂಕಟೇಶ್ ಎಂ.,
ಘಟಕದ ಅಧ್ಯಕ್ಷರ ಅಪ್ರೋಜ್ ಅಹ್ಮದ್, ಖಜಾಂಚಿಗಳಾದ ಪ್ರವೀಣ್, ರೆಹಮತ್, ರಾಜು, ಲಕ್ಷ್ಮಣ್, ಶಶಿ, ಪ್ರಶಾಂತ್, ಹಾಲೇಶ್, ಪ್ರದೀಪ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





