77ನೇ ಗಣರಾಜ್ಯೋತ್ಸವ ದಿನದ ಅಂಗವಾಗಿ ಅರ್ಹ ವಿದ್ಯಾರ್ಥಿಗಳಿಗೆ ಮುಸ್ಲಿಮ್ ಎಜುಕೇಷನ್ ಫಂಡ್ ಅಸೋಸಿಯೇಷನ್‌ನಿಂದ ವಿದ್ಯಾರ್ಥಿವೇತನ ಹಂಚಿಕೆ ಕಾರ್ಯಕ್ರಮ ಹಾಗೂ ದಾವಣಗೆರೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಅಜಮ್ ಪಾಷ ಇವರ ಸೇವಾ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭವನ್ನು ಭಾನುವಾರ ದಾವಣಗೆರೆಯ ಮುಸ್ಲಿಂ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕೆ. ಅಬ್ದುಲ್ ಜಬ್ಬಾರ್ ಸಾಬ್, “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು, ತಂದೆ ತಾಯಿಯ ಘನತೆ ಗೌರವವನ್ನು ಕಾಪಾಡಬೇಕು. ಹಾಗೂ ದೇಶದ ಉತ್ತಮ ನಾಗರೀಕರಾಗಬೇಕು. ಹಾಗೂ ದುಶ್ಚಟಗಳಿಂದ ದೂರವಿರಬೇಕು. ಪೋಷಕರು ತಮ್ಮ ಮಕ್ಕಳ ಮೇಲೆ ವಿಶೇಷ ಗಮನ ಹರಿಸಬೇಕು. ಮಕ್ಕಳು ಯಾರ ಜೊತೆ ಸಂಪರ್ಕದಲ್ಲಿದ್ದಾರೆ, ಎಷ್ಟು ಹೊತ್ತಿಗೆ ಕಾಲೇಜಿಗೆ ಹೋಗುತ್ತಾರೆ, ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು. ಉತ್ತಮ ವಿದ್ಯಾಭ್ಯಾಸ ಪಡೆದು ಅವಕಾಶಗಳನ್ನು ಬಳಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ನಿರ್ದೇಶಕರಾದ ಮೊಹಮ್ಮದ್ ಸಿರಾಜ್ ಮಾತನಾಡಿ, “ಈಗಿರುವ ಸುಸಜ್ಜಿತ ಮುಸ್ಲಿಮ್ ಹಾಸ್ಟೆಲ್ ಕಟ್ಟಡವು ಮಾನ್ಯ ಕೆ. ಅಬ್ದುಲ್ ಜಬ್ಬಾರ್ ರವರ ಪ್ರಯತ್ನದಿಂದ ನಿರ್ಮಿಸಲಾಗಿದ್ದು, ಹೊಸದಾಗಿ ನಿರ್ಮಾಣ ಮಾಡಲಾದ ಮೆಸ್, ಲೈಬ್ರರಿ ಹಾಲ್, ಸಭಾಂಗಣ ಇನ್ನಿತರೆ ಉದ್ದೇಶಗಳಿಗೆ ಉಪಯೋಗಿಸಬಹುದಾಗಿದೆ. ಹಾಗೂ ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯೋಗವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಅಜಮ್ ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿ, “ಪ್ರತಿ ವರ್ಷದಂತೆ ಈ ವರ್ಷವೂ ಸಹ ಸುಮಾರು 60 ಕ್ಕಿಂತಲೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ರೂ. 7.00 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿವೇತನವನ್ನು ಹಂಚಿಕೆ ಮಾಡಲಾಗುತ್ತಿದ್ದು, ಇದರಿಂದ ಸಾಕಷ್ಟು ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಹಾಗೂ ವೈದ್ಯಕೀಯ ಕೋರ್ಸ್ ಮಾಡುವ ಒಬ್ಬ ವಿದ್ಯಾರ್ಥಿಗೆ ದತ್ತು ತೆಗೆದುಕೊಂಡು ಅವರ ಪೂರ್ತಿ ಕೋರ್ಸ್ ಮುಗಿಯುವವರೆಗೂ ಅವರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ತಿಳಿಸಿದರು.

ದಾವಣಗೆರೆ ನಗರದ ವಿವಿಧ ಕಾಲೇಜುಗಳಲ್ಲಿ ತಾಂತ್ರಿಕ, ವೈದ್ಯಕೀಯ ಹಾಗೂ ಇತರೆ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 60 ಕ್ಕಿಂತಲೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ರೂ. 7.00 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿವೇತನವನ್ನು ಹಂಚಿಕೆ ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಪಾರದರ್ಶಕತೆಯನ್ನು ಕಾಪಾಡಲು ಅವರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮುಖಾಂತರ ವಿದ್ಯಾರ್ಥಿವೇತನವನ್ನು ಪಾವತಿ ಮಾಡುವ ವಿಧಾನವನ್ನು ಅನುಷ್ಠಾನಗೊಳಿಸಲಾಯಿತು.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ | ವಿಶ್ವವಿದ್ಯಾಲಯದ ಘಟಿಕೋತ್ಸವ: ಚಿನ್ನದ ಹುಡುಗಿ ನಯನ ಎನ್ ಬಿ ಏಳು ಪದಕ
ಕಾರ್ಯಕ್ರಮದಲ್ಲಿ ಮುಸ್ಲಿಂ ಮುಖಂಡರಾದ ಮೊಹಮ್ಮದ್ ಸಿರಾಜ್, ಅಬ್ದುಲ್ ಘನಿ ತಾಹಿರ್, ಎಂ.ಎನ್. ಸಮೀವುಲ್ಲಾ, ಬಿ. ಮೊಹಮ್ಮದ್ ಫೈರೋಜ್, ಅಬ್ದುಲ್ ನಾಸೀರ್ ಮೌಲಾನಾ, ಏಜಾಜ್ ಅಹಮದ್, ಪಿ. ಖಾಸೀಂ ಸಾಬ್, ಜಿಲ್ಲಾ ವಕ್ಫ್ ಅಧಿಕಾರಿ ಜಾಕೀರ್ ಹುಸೇನ್ ಹಾಗೂ ದಾವಣಗೆರೆ ಜಿಲ್ಲಾ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ಹಾಗೂ ವಿದ್ಯಾರ್ಥಿಗಳು, ಪೋಷಕರು, ಮುಸ್ಲಿಮ್ ಹಾಸ್ಟೆಲ್ ಹಾಗೂ ಜಿಲ್ಲಾ ವಕ್ಫ್ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.





