ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯ (ಎನ್ ಆರ್ ಐ) ಕೋಟಾವನ್ನು ಜಾರಿಗೊಳಿಸುವ ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನಿರ್ಧಾರವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (AISEC) ದಾವಣಗೆರೆ ಸಮಿತಿ ತೀವ್ರವಾಗಿ ಖಂಡಿಸಿದೆ.
ಅನಿವಾಸಿ ಭಾರತೀಯ ಕೋಟಾ ವಿರೋಧಿಸಿರುವ ಸಮಿತಿ, “ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15 ಎನ್ ಆರ್ ಐ (ಅನಿವಾಸಿ ಭಾರತೀಯ) ಕೋಟಾವನ್ನು ಜಾರಿಗೊಳಿಸುವುದು ಮತ್ತು ಬಡ ಜನರ ಸೀಟುಗಳನ್ನು 25 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವ ಭಂಡತನದ ನಿರ್ಧಾರವು ವಿದ್ಯಾರ್ಥಿ ವಿರೋಧಿ ಮತ್ತು ಶಿಕ್ಷಣ ವಿರೋಧಿಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ತೀವ್ರ ಆರ್ಥಿಕ ಮತ್ತು ನೈತಿಕ ದಿವಾಳಿತನವನ್ನು ಖಂಡಿಸಲು ನಮಗೆ ಯಾವುದೇ ಪದಗಳಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

“ಕರ್ನಾಟಕದ ಜನತೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಯಾವುದೇ ದಾಳಿಯನ್ನು ಸಹಿಸುವುದಿಲ್ಲ. ಇಂಥಹ ಕಾನೂನುಬಾಹಿರ ಮತ್ತು ಅಕ್ರಮ ಎನ್ ಆರ್ ಐ ಕೋಟಾ, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ವಾಣಿಜ್ಯೀಕರಣ ಮತ್ತು ಖಾಸಗೀಕರಣಗೊಳಿಸುವ ರಾಜ್ಯ ಸರ್ಕಾರದ ಕಾರ್ಯಸೂಚಿಯ ಸ್ಪಷ್ಟ ಸೂಚನೆಯಾಗಿದೆ. ‘ರಾಜ್ಯ ಸರ್ಕಾರವು ಸಾರ್ವಜನಿಕ ಆಸ್ತಿಯ ರಕ್ಷಕ ಮಾತ್ರ, ಮಾಲೀಕರಲ್ಲ’ ಎಂದು ನಾವಿಲ್ಲಿ ನೆನಪಿಸಲು ಬಯಸುತ್ತೇವೆ” ಎಂದು ಎಚ್ಚರಿಸಿದೆ.
“ಸರ್ಕಾರಿ ಸಂಸ್ಥೆಗಳು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷದ ಖಾಸಗಿ ಆಸ್ತಿಯಲ್ಲ. ಇದನ್ನು ಲಕ್ಷಾಂತರ ಬಡ ಜನರ ಬೆವರು ಮತ್ತು ರಕ್ತದಿಂದ ನಿರ್ಮಿಸಲಾಗಿದೆ. ಅನಿವಾಸಿ ಭಾರತೀಯರ ಹೆಸರಿನಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಸೀಟುಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದು ಪ್ರಜಾಸತ್ತಾತ್ಮಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯದ ಗುಣಮಟ್ಟದ ತಳಹದಿಯ ಮೇಲಿನ ನೇರ ದಾಳಿಯಾಗಿದೆ” ಎಂದು ಕಿಡಿಕಾರಿದೆ.

“ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಯನ್ನು ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಇದೆ. ಆದರೆ ವಾಸ್ತವದಲ್ಲಿ “ಸರ್ಕಾರಿ ಶಾಲೆಗಳನ್ನು ಮುಚ್ಚುವ”, “ಧನ ಸಹಾಯ ಮಾಡಿದ ಕಾರ್ಪೊರೇಟ್ ಕಂಪನಿಗಳ ಹೆಸರನ್ನು ಶಾಲೆಗೆ ನಾಮಕರಣ ಮಾಡುವ” ಮತ್ತು “ಅನಿವಾಸಿ ಭಾರತೀಯ (NRI) ಕೋಟಾವನ್ನು ಜಾರಿಗೊಳಿಸುವ” ಕ್ರಮಗಳು ಸಾರ್ವಜನಿಕ ಶಿಕ್ಷಣವನ್ನು ಖಾಸಗೀಕರಣ ಮತ್ತು ಕಾರ್ಪೊರೇಟೀಕರಣಗೊಳಿಸುವ ಕೇಂದ್ರ ಸರ್ಕಾರದ ವಿನಾಶಕಾರಿ ಶಿಕ್ಷಣ ನೀತಿಗೆ ಸಂಪೂರ್ಣವಾಗಿ ಅನುಗುಣವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಸಮಿತಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.
“ಸರ್ಕಾರವು ನಿಜವಾಗಿಯೂ ನಮ್ಮ ಸಾರ್ವಜನಿಕ ಸಂಸ್ಥೆಗಳನ್ನು ಸುಧಾರಿಸಲು ಬದ್ಧವಾಗಿದ್ದರೆ, ಅದು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು, ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುವ ಬೃಹತ್ ತೆರಿಗೆ ವಿನಾಯಿತಿಗಳನ್ನು ನಿಲ್ಲಿಸಬೇಕು ಮತ್ತು ಮಂತ್ರಿಗಳ ಸಂಬಳ ಹಾಗೂ ಭತ್ಯೆಗಳನ್ನು ಕಡಿತಗೊಳಿಸಬೇಕು. ಹಣವನ್ನು ಶಿಕ್ಷಣಕ್ಕೆ ವಿನಿಯೋಗಿಸಬೇಕು. ‘ವ್ಯಾಪಾರ ಸಂಸ್ಥೆಗಳಿಗೆ ತೆರಿಗೆ ವಿಧಿಸಿ ಮತ್ತು ಜನರನ್ನು ಉಳಿಸಿ’ ಎಂಬುದು ಯಾವುದೇ ಪ್ರಜಾಪ್ರಭುತ್ವ ಸರ್ಕಾರದ ಮೂಲ ತತ್ವವಾಗಿರಬೇಕು” ಎಂದು ಅಭಿಪ್ರಾಯಪಟ್ಟಿದೆ.
“ಈ ಹಿಂದೆ, ಇಂತಹ ವಿದ್ಯಾರ್ಥಿ ಮತ್ತು ಶಿಕ್ಷಣ ವಿರೋಧಿ ಕ್ರಮಗಳನ್ನು AISEC ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಮುದಾಯವು ಬಲವಾಗಿ ವಿರೋಧಿಸಿ ಯಶಸ್ವಿಯಾಗಿ ತಡೆದ ಇತಿಹಾಸವನ್ನು ಸರ್ಕಾರ ಮರೆಯಬಾರದು. ಈ ಪ್ರಜಾಪ್ರಭುತ್ವ ವಿರೋಧಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಸರ್ಕಾರವನ್ನು ಒತ್ತಾಯಿಸಲು ವಿದ್ಯಾರ್ಥಿಗಳು, ವೈದ್ಯರು ಮತ್ತು ಕರ್ನಾಟಕದ ಸಮಸ್ತ ಜನರು ಒಗ್ಗೂಡಬೇಕೆಂದು AISEC ಕರೆ ನೀಡುತ್ತದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಲಂಚ, ಕರ್ತವ್ಯಲೋಪ, ದುರ್ನಡತೆ ಆರೋಪ; ವೈದ್ಯಾಧಿಕಾರಿ ಅಮಾನತು
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾ ಸಂಘಟನಾಕಾರರಾದ ಸುಮಾ ವಿ ಮಠದ್, ಹೇಮಾವತಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.





