ಪಂಚಮಸಾಲಿ ಪೀಠಕ್ಕೆ ಭಕ್ತರಿಂದ, ಸಮಾಜ ಭಾಂದವರಿಂದ, ನೌಕರರಿಂದ, ಸರ್ಕಾರದಿಂದ ಅಪಾರ ಪ್ರಮಾಣದಲ್ಲಿ ಕೊಟ್ಯಾಂತರ ರೂ ಹಣ ಬಂದಿದೆ. ನನಗೆ ಹಾಗೂ ಪೀಠದ ಶ್ರೀಗಳಿಗೆ ಜೀವ ಬೆದರಿಕೆ ಇದ್ದು. ನನಗಾಗಲಿ, ಮಠದ ಗುರುಗಳ ಜೀವಕ್ಕಾಗಲಿ ಯಾವುದೇ ರೀತಿಯ ಜೀವ ಹಾನಿಯಾದಲ್ಲಿ ಅದಕ್ಕೆ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ, ಕಾರ್ಯದರ್ಶಿ ಕೆ.ಎಂ ಜ್ಯೋತಿಪ್ರಕಾಶ್, ಟ್ರಸ್ಟಿ ಚಂದ್ರಶೇಖರ ಪೂಜಾರ ಅವರೇ ಮೂಲ ಕಾರಣ” ಎಂದು, ದಾವಣಗೆರೆ ಜಿಲ್ಲೆ ಹರಿಹರದ ಪತ್ರಿಕಾಗೋಷ್ಠಿಯಲ್ಲಿ ಹರ ಪೀಠದ ಆಡಳಿತಾಧಿಕಾರಿ ಡಾ| ಹೆಚ್.ಪಿ ರಾಜಕುಮಾರ ಆರೋಪಿಸಿದರು.
ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಹಣಕಾಸು ಲೆಕ್ಕಪತ್ರದ ವಿಚಾರವಾಗಿ ಗಂಭೀರ ವಿವಾದ ಉಂಟಾಗಿದ್ದು, ಈ ಕುರಿತು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಡಿ ನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಆಡಳಿತಾಧಿಕಾರಿ ರಾಜಕುಮಾರ್ ಹಾಗೂ ಇತರರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು “ಸಮಾಜದಿಂದ ಹಾಗೂ ಸರ್ಕಾರದಿಂದ ಪೀಠದ ಅಭಿವೃದ್ಧಿಗೆ ಕೊಟ್ಯಾಂತರ ರೂಪಾಯಿ ಹಣ ಸಂಗ್ರಹವಾಗಿದ್ದು, ಅದರ ಖರ್ಚಿನ ಲೆಕ್ಕಪತ್ರವನ್ನು ಟ್ರಸ್ಟಿಗಳು ಸಮಾಜಕ್ಕೆ ನೀಡಬೇಕು. ಹಣ ನೀಡಿದ ಸಮಾಜಬಾಂಧವರು ಲೆಕ್ಕ ಕೇಳಿದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡದೆ ತಪ್ಪಿಸಿಕೊಳ್ಳಲಾಗುತ್ತಿದೆ” ಎಂದು ಅವರು ಆರೋಪಿಸಿದರು.
“ಸ್ವಾತಂತ್ರ್ಯ ನಂತರ ವಿಭಜನೆಯಾಗಿದ್ದ ಪಂಚಮಸಾಲಿ ಸಮಾಜವನ್ನು ಮತ್ತೆ ಒಗ್ಗೂಡಿಸಲು ಹಲವಾರು ಹಿರಿಯರು ದುಡಿದಿದ್ದು, ಅವರ ಪರಿಶ್ರಮದಿಂದ ಹರಿಹರದಲ್ಲಿ ಪಂಚಮಸಾಲಿ ಗುರುಪೀಠ ಬೆಳೆಯಿತು. ಸಮಾಜದ ಜನರು, ನೌಕರರು ಹಾಗೂ ದಾನಿಗಳು ಪೀಠದ ಅಭಿವೃದ್ಧಿಗೆ ಅಪಾರ ಪ್ರಮಾಣದಲ್ಲಿ ಹಣ ನೀಡಿದ್ದು, ಮಠದ ಕಟ್ಟಡ, ಅತಿಥಿ ಗೃಹ, ಭೋಜನಾಲಯ, ನೀರಿನ ಟ್ಯಾಂಕ್ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ” ಎಂದು ಹೇಳಿದರು.

“ಆದರೆ ಈ ಹಣದ ಸಮಗ್ರ ಲೆಕ್ಕವನ್ನು ಸಮಾಜಕ್ಕೆ ನೀಡಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ, ಕಾರ್ಯದರ್ಶಿ ಕೆ.ಎಂ ಜ್ಯೋತಿಪ್ರಕಾಶ್ ಹಾಗೂ ಟ್ರಸ್ಟಿ ಚಂದ್ರಶೇಖರ ಪೂಜಾರ ಅವರು ಲೆಕ್ಕಪತ್ರ ನೀಡಲು ನಿರಾಕರಿಸುತ್ತಿದ್ದಾರೆ” ಎಂದು ಸೋಮಣ್ಣ ಬೇವಿನಮರದ ಆರೋಪಿಸಿದರು.
“ಸಮಾಜದ ಬೆಂಬಲದೊಂದಿಗೆ “ಲೆಕ್ಕಕೊಡಿ ಚಳುವಳಿ” ಆರಂಭಿಸಿದ್ದು, ಲೆಕ್ಕ ನೀಡುವವರೆಗೂ ಈ ಹೋರಾಟ ಮುಂದುವರಿಯುತ್ತದೆ” ಎಂದು ಅವರು ಎಚ್ಚರಿಸಿದರು.
ಶ್ರೀಪೀಠದ ಆಡಳಿತಾಧಿಕಾರಿ ಡಾ| ಹೆಚ್.ಪಿ ರಾಜಕುಮಾರ ಮಾತನಾಡಿ, “ಪೀಠದ ಅಭಿವೃದ್ಧಿ ಕಾರ್ಯಗಳ ಹಣಕಾಸಿನ ಬಗ್ಗೆ ಹಲವರು ಪ್ರಶ್ನೆ ಕೇಳುತ್ತಿರುವ ಹಿನ್ನೆಲೆಯಲ್ಲಿ ಸಭೆ ಕರೆದಿದ್ದೆವು. ಸಭೆಯಲ್ಲಿ ಲೆಕ್ಕಪತ್ರ ಕೇಳಿದಾಗ ಧರ್ಮದರ್ಶಿಗಳು ನೀಡಲು ನಿರಾಕರಿಸಿದ್ದಲ್ಲದೆ, ಅವಹೇಳನಕಾರಿ ಭಾಷೆಯಲ್ಲಿ ಮಾತನಾಡಿದ್ದಾರೆ” ಎಂದು ಆರೋಪಿಸಿದರು.
“ನಂತರ ಲೆಕ್ಕ ಪತ್ರ ನೀಡದೇ ಕಾಲಹರಣ ಮಾಡಿದ್ದು, ನಾವು ಅಲ್ಲಿಂದ ಹೊರಡಲು ತಯಾರಾದಾಗ ತಡೆದು ತಳ್ಳಾಡಿದ್ದು, ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದು, ನಂತರ ಆಯಾಸದಿಂದ ನರಳುತ್ತಿದ್ದ ನಾನು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಹರಿಹರದ ಹೆಚ್.ಪಿ ಬಾಬಣ್ಣ ಹಾಗೂ ಇತರರ ಸಹಕಾರದಿಂದ ಹರಿಹರ ಸಾರ್ವಜನಿಕ ಆಸ್ಪತ್ರೆಗೆ ಧಾಖಲಾಗಿ ಚಿಕಿತ್ಸೆ ಪಡೆದು, ನಂತರ ಪೊಲೀಸ್ ಠಾಣೆಗೆ ತೆರಳಿ, ಸಾಕ್ಷ ನಾಶಪಡಿಸುವ ಉದ್ದೇಶದಿಂದ ಮಠದ ಆವರಣದಲ್ಲಿನ ಅಧ್ಯಕ್ಷರ ಕಛೇರಿ ಬೀಗ ಒಡೆದು ಸಿಸಿಟಿವಿಯ ದೃಷ್ಯಾವಳಿ ಸಂಗ್ರಹಿಸಿಕೊಂಡಿರುವ ಡಿವಿಆರ್ ಕಿತ್ತುಕೊಂಡು ಹೋಗಿರುವ ಟ್ರಸ್ಟಿಗಳಾದ ಚಂದ್ರಶೇಖರ ಪೂಜಾರ, ಅವರ ಹಿಂಬಾಲಕರಾದ ಶಿವರಾಜ, ಲಿಂಗರಾಜ ಮೇಲೆ ಕ್ರಮಕ್ಕಾಗಿ ಅವರ ವಿರುದ್ದ ಪ್ರಕರಣ ದಾಖಲಿಸಿದ್ದೇನೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿ ನಡೆಯುವ ವೇಳೆ ಹೊನ್ನಾಳಿಯ ಪ್ರಶಾಂತ ಪೇಟೆ ಮಧ್ಯ ಪ್ರವೇಶಿಸಿ ಗದ್ದಲ ಸೃಷ್ಟಿಸಿದರು. ಈ ವೇಳೆ ಸೋಮಣ್ಣ ಬೇವಿನಮರದ ಮಾತನಾಡಿ, “ಪೀಠದ ಟ್ರಸ್ಟ್‌ಗೆ ಸೇರಿದ ಆಸ್ತಿ ಹಾಗೂ ಬ್ಯಾಂಕ್ ದಾಖಲೆಗಳು ಮಠದಲ್ಲಿ ಇಲ್ಲ, ಬಿ.ಸಿ ಉಮಾಪತಿ ಅವರ ಮನೆಯಲ್ಲಿ ಇವೆ. ಈ ಕುರಿತು ಶಿಗ್ಗಾಂವಿಗೆ ಬಂದು ಪರಿಶೀಲಿಸಿದರೆ ಸತ್ಯ ಹೊರಬರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿ ತಡೆಗೆ ಹರಿಹರ ರಾಜಕಾಲುವೆ ರಕ್ಷಣಾ ಸಮಿತಿ ಆಗ್ರಹ
ಪತ್ರಿಕಾಗೊಷ್ಠಿಯಲ್ಲಿ ಶ್ರೀಮಠದ ದಾಸೋಹ ಸಮಿತಿ ಅಧ್ಯಕ್ಷ ದಾವಣಗೆರೆಯ ನ್ಯಾಯವಾದಿ ಪ್ರಕಾಶ ಪಾಟೀಲ, ಹರಿಹರದ ಹೆಚ್.ಪಿ ಬಾಬಣ್ಣ, ರಾಣಿಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರಸಭೆಯ ಮಾಜಿ ಸದಸ್ಯ ರಾಜಣ್ಣ ಮೂಟಗಿ, ಮುಖಂಡರಾದ ಸಿದ್ದುಚಿಕ್ಕಬಿದರಿ, ರಾಜಣ್ಣ ಬುಡ್ದನಗೌಡ್ರ, ಎನ್.ಡಿ ಪಾಟೀಲ, ದಾವಣಗೆರೆಯ ಎಸ್ ಚನ್ನಬಸಪ್ಪ, ಬಿ.ಸಿ ಹನುಮಗೌಡ್ರ, ಹಾವೇರಿಯ ಡಾ| ಬಸವರಾಜ ವೀರಾಪುರ, ಸೋಮಣ್ಣ ಉಪಸ್ಥಿತರಿದ್ದರು.





