“ನ್ಯಾ.ಹೆಚ್.ಎನ್.ನಾಗಮೋಹನ್‌ದಾಸ್ ರವರ ಜಾತಿಗಣತಿ ಸಮೀಕ್ಷಾ ವರದಿ ಜುಲೈ ಒಳಗೆ ಸಲ್ಲಿಸಬೇಕು. ವಿರೋಧ ಪಕ್ಷಗಳು ಅಧಿವೇಶನದಲ್ಲಿ ಒಳಮೀಸಲಾತಿ ಈಡೇರಿಕೆಗಾಗಿ ತಮ್ಮ ಬದ್ಧತೆಯನ್ನು ಪ್ರಕಟಿಸಿ, ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಬೇಕು” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ಎನ್ ಮಲ್ಲೇಶ್ “ಆಗಸ್ಟ್ 01-2024 ರಂದು ಘನ ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರಗಳು ಆದ್ಯತೆಯ ಮೇರೆಗೆ ಜಾರಿಗೊಳಿಸಬಹುದು ಎಂಬ ಐತಿಹಾಸಿಕ ತೀರ್ಪನ್ನು ನೀಡಿ ಒಂದು ವರ್ಷ ಗತಿಸುತ್ತಿದೆ. ಎರಡೇ ತಿಂಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಜನಸಂಖ್ಯಾ ಸಮೀಕ್ಷೆಯನ್ನು ಪೂರ್ಣಗೊಳಿಸಿ ತಮ್ಮ ನೈತಿಕ ಜವಾಬ್ದಾರಿಯನ್ನು ಪೂರೈಸಿದ್ದರೆ, 30ವರ್ಷಗಳ ಒಳಮೀಸಲಾತಿ ಹೋರಾಟವು ಮತ್ತೊಂದು ಸುತ್ತಿನ ಹೋರಾಟವಾಗಿ ಪರಿವರ್ತನೆಯಾಗುವ ಅಗತ್ಯವಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈಗಲಾದರೂ ಇಂತಹ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸದೇ, ಆಡಳಿತರೂಢ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರಕಟಿಸಬೇಕಾಗಿದೆ. ಏಕೆಂದರೆ, ನ್ಯಾ. ನಾಗಮೋಹನ್ ದಾಸ್‌ರವರ ನೇತೃತ್ವದಲ್ಲಿ ನೇಮಕವಾದ ಏಕಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವೈಜ್ಞಾನಿಕ ಹಾಗೂ ವಸ್ತುನಿಷ್ಠ ವರದಿಯನ್ನು ಜುಲೈ 30 ರೊಳಗಡೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಹಾಗಾಗಿ ವರದಿಯನ್ನು ಆದಷ್ಟು ಬೇಗ ಪಡೆದು ಆಗಸ್ಟ್ 11 ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಸರ್ವಪಕ್ಷಗಳ ಅನುಮೋದನೆಯೊಂದಿಗೆ ಒಳಮೀಸಲಾತಿ ಬೇಡಿಕೆಯನ್ನು ಅಂಗೀಕರಿಸಿದರೆ, ನೇಮಕಾತಿ ಆಗಬೇಕಾದ 30 ಸಾವಿರಕ್ಕೂ ಅಧಿಕ ಹುದ್ದೆಗಳು ಸಮುದಾಯದ ನಿರುದ್ಯೋಗಿ ಯುವಕ, ಯುವತಿಯರು ಪಡೆಯಬಹುದಾಗಿದೆ” ಎಂದು ಅಭಿಪ್ರಾಯಪಟ್ಟರು.
“ವಿಷಾದಕರ ಸಂಗತಿ ಎಂದರೆ ಕಳೆದ 30 ವರ್ಷಗಳಲ್ಲಿ ಆಯೋಗ ನೇಮಕವಾಗಲು, ನೇಮಕವಾದ ಆಯೋಗಕ್ಕೆ ಅನುದಾನ ನೀಡಲು, ಸರ್ಕಾರಕ್ಕೆ ಒಪ್ಪಿಸಿದ ವರದಿಯನ್ನು ಅನುಷ್ಠಾನಗೊಳಿಸಲು 3 ದಶಕಗಳ ವಿಳಂಬ ಮುಂದುವರೆದಿರುವುದರಿಂದ ನೊಂದ ಸಮುದಾಯಗಳು ಯಾವುದೇ ಸರ್ಕಾರಗಳನ್ನು ನಂಬುವ ಸ್ಥಿತಿಯಲ್ಲಿಲ್ಲ. ಈ ಎಲ್ಲಾ ಕಹಿ ಅನುಭವಗಳು ಮುಂದುವರೆಯದಂತೆ ಸರ್ಕಾರವು ಆಗಸ್ಟ್ 11 ರಿಂದ ಆರಂಭವಾಗಲಿರುವ ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ತೀರ್ಮಾನವನ್ನು ಕೈಗೊಳ್ಳುವ ಮೂಲಕ ನುಡಿದಂತೆ ನಡೆಯಲು ಆಗ್ರಹಿಸಿ ಆಗಸ್ಟ್ 11, 2025 ರಿಂದ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟ ಆಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಈ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯೂರಿಯಾ ರಸಗೊಬ್ಬರ ಪೂರೈಕೆಗೆ ಜಗಳೂರಿನ ಹಲವೆಡೆ ರೈತಸಂಘ ರಸ್ತೆ ತಡೆದು ಪ್ರತಿಭಟನೆ
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜಿಎಸ್ ಲೋಕೇಶ್ ಹಾಲೇಕಲ್ಲು, ಜಿಲ್ಲಾ ಸಂ.ಸಂಚಾಲಕ ಸಮಾದೆಪ್ಪ, ಬಿಎಸ್ ಚನ್ನಬಸಪ್ಪ, ಮಂಜುನಾಥ ಕಬ್ಬೂರು, ಹೆಚ್ ಸಿ ಮಲ್ಲಪ್ಪ, ಲಿಂಗರಾಜು, ಪರಶುರಾಮ, ಗಿರೀಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.





