ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಮಾವಿನಹೊಳೆ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲರಾದ ವಿಎನ್ ಗುರುಮೂರ್ತಪ್ಪ ರವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನತುಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶಿಸಿದ್ದಾರೆ.

ಗುರುಮೂರ್ತಪ್ಪ ಕರ್ತವ್ಯ ನಿರ್ವಹಣೆ ಅವಧಿಯಲ್ಲಿ 150 ಕ್ವಿಂಟಲ್ ಅಕ್ಕಿ ಹಾಗೂ 50 ಕ್ವಿಂಟಲ್ ಗೋಧಿ ಕೊರತೆ ಕಂಡು ಬಂದಿದೆ. ಶಾಲೆಯಿಂದ ಬಿಡುಗಡೆ ಹೊಂದಿದ್ದರೂ ಶಾಲೆಯ ದಿನನಿತ್ಯ ಕಾರ್ಯಗಳಲ್ಲಿ ಹಸ್ತಕ್ಷೇಪ ಕಂಡು ಬಂದಿದೆ. ಇಲಾಖೆಯ ಸೌಲಭ್ಯಗಳಾದ ಕಾಟ್ ಮತ್ತು ಬೆಡ್ ಗಳನ್ನು ಮಕ್ಕಳಿಗೆ ನೀಡದೆ ದಾಸ್ತಾನಿನ ಕೊಠಡಿಯಲ್ಲಿ ಇರಿಸಿರುವುದು ಹಾಗೂ ಮಕ್ಕಳಿಗೆ ಸ್ನಾನದ ಬಿಸಿನೀರಿನ ವ್ಯವಸ್ಥೆ ಮಾಡದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ವಿವರಣೆ ನೀಡಲಾಗಿದೆ.

ಲೋಪದೋಷಗಳನ್ನು ಗಮನಿಸಿ ಇಲಾಖೆ ತನಿಖೆಗೆ ನೋಟಿಸ್ ನೀಡಿದ್ದು, ನೋಟಿಸಿಗೆ ನೀಡಿದ ಉತ್ತರ, ಸಮಾಜಾಯಿಷಿಯು ಸಮಂಜಸವಾಗಿರುವುದಿಲ್ಲ. ಈ ಎಲ್ಲಾ ಅಂಶಗಳು ಮೇಲ್ನೋಟಕ್ಕೆ ಕರ್ತವಲೋಪ ಕಂಡುಬಂದಿದ್ದು ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಪಿಎಸ್ ಕಾಂತರಾಜುರವರು 5-3-2026 ರಂದು ಆದೇಶಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಂಚಮಸಾಲಿ ಪೀಠ ಲೆಕ್ಕಪತ್ರ ವಿವಾದ: ಆಡಳಿತಾಧಿಕಾರಿಗೆ ಟ್ರಸ್ಟಿಗಳಿಂದ ಜೀವಬೆದರಿಕೆ ಆರೋಪ
ಇದೇ ವಿಷಯವಾಗಿ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಸತಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.





