“ರೈತನಿಗೆ ಸಮಾಧಾನಕರ ಕನಿಷ್ಠ ಬೆಂಬಲ ಬೆಲೆ C2+50 ನೀಡಬೇಕು ಎಂದು ಸ್ವಾಮಿನಾಥನ್ ಆಯೋಗ ವರದಿ ನೀಡಿ 25 ವರ್ಷಗಳಾದರೂ ನಾವು ರೈತರ ಪರ ಎನ್ನುವ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಇದುವರೆಗೂ (ಎಂ ಎಸ್ ಪಿ) ಬೆಂಬಲ ಬೆಲೆ ಘೋಷಿಸಿಲ್ಲ. ಇದರ ಬಗ್ಗೆ ಪಕ್ಷಗಳಿಗೆ ಮತ ನೀಡಿರುವ ರೈತ ಸಮುದಾಯ ಆಲೋಚಿಸಬೇಕಿದೆ” ಎಂದು ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆಯ ಎಪಿಎಂಸಿ ಆವರಣದ ರೈತ ಭವನದಲ್ಲಿ ನಡೆದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು

“1995 ರಿಂದಲೂ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಇದಕ್ಕೆ ಸರ್ಕಾರವೇ ಕಾರಣ, ಇದಕ್ಕಾಗಿ ರೈತ ಪರ ನಿಲುವು ಜಾರಿಗೊಳಿಸಬೇಕು ಎಂದು ಸಂಸತ್ ಮುಂದೆ 1995ರಲ್ಲಿ ರೈತರು ಹೋರಾಟ ನಡೆಸಿದರು. ಇದಕ್ಕಾಗಿ ಅಂದಿನ ಕೇಂದ್ರ ಸರಕಾರ ರೈತರ ಆತ್ಮಹತ್ಯೆ ನಿಲ್ಲಬೇಕು ಎನ್ನುವ ಕಾರಣದಿಂದಾಗಿ ರೈತರ ಸಲಹೆ ಪಡೆದು ಎಂ ಎಸ್ ಸ್ವಾಮಿನಾಥನ್ ಆಯೋಗವನ್ನು ರಚಿಸಿತು. ಸ್ವಾಮಿನಾಥನ್ ಆಯೋಗವು ಕೂಲಂಕುಶವಾಗಿ ದೇಶದಲ್ಲಿ ಅಧ್ಯಯನ ನಡೆಸಿ ರೈತರ ಆತ್ಮಹತ್ಯೆಗೆ ವೈಜ್ಞಾನಿಕ ಕಾರಣ ಮತ್ತು ಪರಿಹಾರಗಳೇನು ಎಂಬುದಕ್ಕೆ ವರದಿ ನೀಡಿತು” ಎಂದು ವಿವರಿಸಿದರು.

“ಆಯೋಗದ ವರದಿ ಪ್ರಕಾರ ರೈತರಿಗೆ ಕೃಷಿಯಲ್ಲಿ ಆರ್ಥಿಕ ನಷ್ಟ, ಉತ್ಪನ್ನಕ್ಕೆ ಯೋಗ್ಯ ಬೆಲೆ ಇಲ್ಲದಿರುವುದು ಮತ್ತು ಕೃಷಿಯ ವೆಚ್ಚ ಮರುಪಾವತಿ ಆಗದೆ ಇರುವುದು ಆತ್ಮಹತ್ಯೆ ಹೆಚ್ಚಲು ಕಾರಣ ಎಂದು ಅಂದೇ ವರದಿ ನೀಡಿದೆ. ಆದರೆ ಇಂದು ರೈತನ ಆತ್ಮಹತ್ಯೆ ಆದಾಗ ಕೆಲವರು ರೈತ ಬೇರೆ ಬೇರೆ ವ್ಯಸನಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎನ್ನುತ್ತಾರೆ, ಅಂಥವರಿಗೆ ತಲೆ ಕೆಟ್ಟಿರುತ್ತದೆ. ರೈತನಿಗೆ ಸಮಾಧಾನಕರ ಕನಿಷ್ಠ ಬೆಂಬಲ ಬೆಲೆ ಸ್ವಾಮಿನಾಥನ್ ಆಯೋಗ ಹೇಳಿದಂತೆ ಸಿಟು ಪ್ಲಸ್ 50 ಅತ್ಯಗತ್ಯವಾಗಿ ಬೇಕಾಗಿದೆ” ಎಂದು ಪ್ರತಿಪಾದಿಸಿದರು.
“ಮುಂದಿನ ದಿನಗಳಲ್ಲಿ ರೈತರು ಕನಿಷ್ಠ ಬೆಂಬಲ ಬೆಲೆ ಪಡೆಯಲು ಹೋರಾಟದ ಚಳುವಳಿಗಳು ಹೇಗಿರಬೇಕು ಮತ್ತು ಎಲ್ಲಿ ನಡೆಸಬೇಕು, ಚಳುವಳಿ ಸ್ವರೂಪದ ಬಗ್ಗೆ ತಯಾರಿ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.

“ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆ ರದ್ದುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅಧಿಕಾರದಲ್ಲಿ ಇಲ್ಲದಿದ್ದಾಗ ಹೋರಾಟ ನಡೆಸಿದ್ದರು. ಇಂದು ಎಪಿಎಂಸಿ ಕಾಯ್ದೆಗಳನ್ನು ರದ್ದುಗೊಳಿಸದೇ ಮೂರು ವರ್ಷ ಅಧಿಕಾರ ನಡೆಸಿದ್ದು, ಜೊತೆಗೆ ಕಾರ್ಪೊರೇಟ್ ಕಂಪನಿ, ಬಂಡವಾಳಶಾಹಿಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಸರ್ಕಾರಗಳು ರೈತರ ಭೂಮಿಯನ್ನು ಬಲಿಕೊಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಶೀಘ್ರದಲ್ಲಿಯೇ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಸೇರಿದಂತೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿದ್ದು ರೈತ ಸಂಘಟನೆಯ ಅಭ್ಯರ್ಥಿಗಳು ಸ್ಪರ್ಧಿಸಿದರೆ ಅಥವಾ ರೈತರ ಪರವಾಗಿರುವ ಅಭ್ಯರ್ಥಿಗಳಿಗೆ ಸಂಘಟನೆ ಬೆಂಬಲಿಸಲಿದೆ. ಅಲ್ಲದೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣ ಕೊಟ್ಟು ಮತ ಪಡೆಯಲು ಸಂಚು ರೂಪಿಸಿದೆ” ಎಂದು ಆರೋಪಿಸಿದರು.

ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಜಮಖಂಡಿ ಮಾತನಾಡಿ “ವಿದ್ಯುತ್ ಅಕ್ರಮ ಸಕ್ರಮಕ್ಕೆ ಹಣ ಕಟ್ಟಿ ಕಾಯುತ್ತಿರುವ ರೈತರಿಗೆ ಅನ್ಯಾಯವಾಗುತ್ತಿದೆ. ಈ ಮಧ್ಯೆ ಹಲವು ಎಸ್ಕಾಂಗಳು ರೈತರಿಗೆ ವಿದ್ಯುತ್ ಸಂಪರ್ಕವನ್ನು ನಿಲ್ಲಿಸುವ ಬೆದರಿಕೆ ಹಾಕಿ, ದೌರ್ಜನ್ಯ ಎಸಗುತ್ತಿವೆ. ಈ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಬೇಕು” ಎಂದು ತಿಳಿಸಿದರು.
ರಾಜ್ಯ ಸಮಿತಿ ಸಭೆಯಲ್ಲಿ ಎಪಿಎಂಸಿ ಕಾಯ್ದೆ ಹಿಂಪಡೆಯಲು, ಸ್ವಾಮಿನಾಥನ್ ವರದಿ ಆಯೋಗದ ಜಾರಿ ಮತ್ತು ಸಿಟು ಪ್ಲಸ್ 50 ಜಾರಿ, ಬೆಂಬಲ ಬೆಲೆ ಎಂ ಎಸ್ ಪಿ (MSP) ಜಾರಿಗೊಳಿಸುವ ಕುರಿತು ಬೆಂಗಳೂರಿನಲ್ಲಿ ಅಧಿವೇಶನದ ಸಮಯದಲ್ಲಿ ಬೃಹತ್ ಹೋರಾಟವನ್ನು ನಡೆಸಬೇಕೆಂದು ತೀರ್ಮಾನಿಸಲಾಯಿತು. ಇದೇ ವೇಳೆ ರೈತ ಸಂಘ ಮತ್ತು ಹಸಿರು ಸೇನೆಯ ವಿದ್ಯಾರ್ಥಿ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲು ಇಂದಿನಿಂದ ಚಾಲನೆ ನೀಡಿ, ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಆರ್ ಎಸ್ ನಾಯಕ್ ರನ್ನು ನೇಮಿಸಲಾಯಿತು. ರೈತರ ಮಗಳಾದ ಸುಜಾತ ಪೋಳ ಇವರಿಗೆ ಬೆಳಗಾವಿ ವಿಶ್ವವಿದ್ಯಾನಿಲಯದಿಂದ ಪಿ ಎಚ್ ಡಿ ಪ್ರಧಾನ ಮಾಡದೇ ಅಲ್ಲಿನ ಅಧಿಕಾರಿಗಳಿಂದ ಆಗಿರುವ ಅನ್ಯಾಯದ ಕುರಿತು ಮುಖಂಡರಿಗೆ ಮನವಿ ಸಲ್ಲಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರೈತರ ಪಂಪ್ ಸೆಟ್ಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ತಮಟೆ ಚಳುವಳಿ
ಕಾರ್ಯಕ್ರಮದಲ್ಲಿ ರೈತ ಮುಖಂಡ ಹಿರಿಯ ಹೋರಾಟಗಾರ ರೆಡ್ಡಿಹಳ್ಳಿ ವೀರಣ್ಣ, ಬಸವರಾಜ ಜಮಖಂಡಿ, ದಾವಣಗೆರೆ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚೆನ್ನಬಸಪ್ಪ, ತಾಲೂಕು ಅಧ್ಯಕ್ಷ ವಿಶ್ವನಾಥ ಮಂಡ್ಲೂರು, ರಾಜ್ಯ ಸಮಿತಿ ಮುಖಂಡರಾದ ಹನುಮಂತಪ್ಪ, ಬಸವಂತಪ್ಪ, ಕಲ್ಮೇಶ್, ಚಿಕ್ಕೋಡಿ ಗೌಡ್ರು ವಸಂತಕುಮಾರ್, ಅರುಣ್ ಕುಮಾರ್, ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಬೇವಿನಮಠ ಮಹಾದೇವಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮುಖಂಡರು ಪದಾಧಿಕಾರಿಗಳು ಹಾಗೂ ದಾವಣಗೆರೆ ತಾಲೂಕು ಸಿದ್ದನೂರು, ಅಗಸನಕಟ್ಟೆ ಕೋಡಿಹಳ್ಳಿ ಗ್ರಾಮ ಸಮಿತಿಯ ಸದಸ್ಯರುಗಳು ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.





