ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ದಾವಣಗೆರೆ ಜಿಲ್ಲಾ ಘಟಕ, ದಾವಣಗೆರೆ ಉತ್ತರ, ದಕ್ಷಿಣ ವಲಯ ಹಾಗೂ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ, ಅಕ್ಷರ ದಾಸೋಹ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಮಾರ್ಚ್ 8ರಂದು ಪಿಜೆ.ಬಡಾವಣೆಯ ಸೆಂಟ್ ಫಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ದಾವಣಗೆರೆ ಡಯಟ್ (ಅಭಿವೃದ್ಧಿ) ಸಹಾಯಕ ನಿರ್ದೇಶಕಿ ಶ್ರೀಮತಿ ಗೀತಾ ವಿಶ್ವ ಮಹಿಳಾ ದಿನಾಚರಣೆಯ ವಿಶೇಷತೆ ಕುರಿತು ಮಾತನಾಡಿ,
“ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂಬ ನಾಣ್ಣುಡಿಯಂತೆ, ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳನ್ನು ಗೌರವಯುತವಾಗಿ ಕಾಣುವುದು ನಮ್ಮ ಪರಂಪರೆಯ ಮಹತ್ವದ ಅಂಶವಾಗಿದೆ” ಎಂದು ಅಭಿಪ್ರಾಯಪಟ್ಟರು.

“ಇಂದು ಮಹಿಳೆಯರು ರಾಜಕೀಯ, ಆರ್ಥಿಕ, ವೈಜ್ಞಾನಿಕ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲೂ ಮಹತ್ತರ ಸಾಧನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಕಲ್ಪನಾ ಚಾವ್ಲಾ, ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಪ್ರಸ್ತುತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಾಧನೆ, ಮಹಿಳೆಯರ ಪ್ರಗತಿಯನ್ನು ನೆನೆಯಬೇಕು” ಎಂದು ನೆನಪಿಸಿದರು.

“ಬಸವಣ್ಣ, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರು ಮಹಿಳಾ ಶಿಕ್ಷಣ ಮತ್ತು ಸಮಾನತೆಗೆ ನೀಡಿದ ಕೊಡುಗೆಯನ್ನು ಅವರು ನೆನಪಿಸಿದರು. ಜೊತೆಗೆ ರಾಣಿ ಚೆನ್ನಮ್ಮ, ಒನಕೆ ಓಬವ್ವ ಹಾಗೂ ರಾಣಿ ಅಬ್ಬಕ್ಕದೇವಿಯಂತಹ ವೀರ ವನಿತೆಯರ ತ್ಯಾಗ ಮತ್ತು ಸಾಹಸವನ್ನು ಸ್ಮರಿಸಿಬೇಕು. ಯಾವುದೇ ಕೆಲಸವನ್ನು ಮೇಲು-ಕೀಳು ಎಂದು ಕಾಣದೆ ದುಡಿಮೆ ಮೂಲಕ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಬೇಕು” ಎಂದು ಮಹಿಳೆಯರಿಗೆ ಸಲಹೆ ನೀಡಿದರು.

ದಾವಣಗೆರೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಶ್ವನಾಥ್ ಮತ್ತು ದಾವಣಗೆರೆ ದಕ್ಷಿಣವಲಯ ಈ.ಈ.ಸಿ.ಓ ಬಸವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಉತ್ತರ ವಲಯ ಮತ್ತು ದಕ್ಷಿಣವಲಯದ ಅಡಿಗೆ ಸಹಾಯಕರಲ್ಲಿ ಉತ್ತಮ ಅಡಿಗೆ ಸಹಾಯಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆವರಣದಲ್ಲಿ ‘ಭೀಮ ಗಾಯನ’
ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಕಲ್ಪನಾ ರವೀಂದ್ರನಾಥ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಗಳ ಎಚ್ .ಎಂ. ಮತ್ತು ದಾವಣಗೆರೆ ಉತ್ತರ ವಲಯದ ಗೌರವಾಧ್ಯಕ್ಷರಾದ ಶ್ರೀಮತಿ ಎಲ್ಲಮ್ಮ ಶಾನ್ವಾಡ್, ಕಾರ್ಯದರ್ಶಿ ವಿಜಯಕುಮಾರಿ ಬಿ, ಕೋಶಾಧ್ಯಕ್ಷೆ ಸುಧಾ ಬಾರ್ಕಿ, ಸಂಘಟನಾ ಕಾರ್ಯದರ್ಶಿ ಜುಬೇದ ಬಾನು, ಸಂಘಟನಾ ಕಾರ್ಯದರ್ಶಿ ರಹಮತ ಉನ್ನಿಸಾ ಹಾಗೂ ಸಾವಿತ್ರಿಬಾಯಿ ಫುಲೆ ಸಂಘದ ದಕ್ಷಿಣ ವಲಯದ ಕೋಶಾಧ್ಯಕ್ಷೆ ಶ್ರೀಮತಿ ಇಶ್ರತ ಸುಲ್ತಾನ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.





