ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟವನ್ನು ನಿಯಂತ್ರಿಸಬೇಕೆಂದು ಹರಿಹರ ನಗರದ ಗುರುಭವನದಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಸಮುದಾಯದ ಮುಖಂಡರು ಆಗ್ರಹಿಸಿದರು.
“ಹರಿಹರ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಅಂಗಡಿ, ಹೋಟಲ್, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಮಟ್ಕಾ ಜೂಜಾಟದ ಅರ್ಭಟವೂ ಇದೆ. ಮದ್ಯ ಮತ್ತು ಮಟ್ಕಾದ ವ್ಯಸನಕ್ಕೆ ಈಡಾಗಿರುವ ಪರಿಶಿಷ್ಟ ಹಾಗೂ ಇತರೆ ಸಮುದಾಯದ ಯುವಕರ ಬದುಕು ಬೀದಿಗೆ ಬೀಳುತ್ತಿದೆ, ಕುಟುಂಬದವರು ಉಪವಾಸಕ್ಕೆ ಈಡಾಗುತ್ತಿದ್ದಾರೆ. ಈ ಜ್ವಲಂತ ಸಮಸ್ಯೆ ನಿವಾರಣೆ ಮಾಡಬೇಕು” ಎಂದು ಸಮುದಾಯದ ಹಲವು ಮುಖಂಡರು ಮಾತನಾಡಿ ಆಗ್ರಹಿಸಿದರು.
ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, “ಕಡ್ಲೆಗೊಂದಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಗ್ರಾಮದ ನಿರ್ವಸತಿಗರಿಗೆ ವಸತಿ ಯೋಜನೆ ರೂಪಿಸಬೇಕು, ಕೊಕ್ಕನೂರು ಗ್ರಾಮದ ಡಾ.ಬಾಬು ಜಗಜೀವನರಾಮ್ ಭವನಕ್ಕೆ ವಿದ್ಯುತ್ ಸೌಲಭ್ಯ, ಬೆಳ್ಳೂಡಿಯಲ್ಲಿ ಅಪೂರ್ಣವಾಗಿರುವ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಬೇಕು, ಭಾನುವಳ್ಳಿಯಲ್ಲಿ ಶಿಥಿಲಗೊಂಡ ಅಂಬೇಡ್ಕರ್ ಭವನ ತೆರವುಗೊಳಿಸಿ ಹೊಸ ಭವನ ನಿರ್ಮಾಣ ಮಾಡಬೇಕಿದೆ” ಎಂದು ಒತ್ತಾಯಿಸಿದರು.

ಮುಖಂಡ ವಿಶ್ವನಾಥ ಮೈಲಾಳ ಮಾತನಾಡಿ, “ಕುಂದುಕೊರತೆ ಸಭೆಯಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ. ಈ ಸಭೆ ಕಾಟಾಚಾರಕ್ಕೆ ನಡೆಸಲಾಗುತ್ತಿದೆ, ಕಾನೂನಿನ ಬೆಂಬಲ ಇದ್ದರೂ ಅಸ್ಪೃಷ್ಯರ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ” ಎಂದು ಆರೋಪಿಸಿದರು.
ಸಂಗೀತ ಕಲಾವಿದ ಅಣ್ಣಪ್ಪ ಅಜ್ಜೇರ್ ಮಾತನಾಡಿ, “ಗುತ್ತೂರು ಗ್ರಾಮದಲ್ಲಿ ಪರಿಶಿಷ್ಟರಿಗೆ ರುದ್ರಭೂಮಿ ಇಲ್ಲ, ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ಮೃತರ ಅಂತ್ಯ ಸಂಸ್ಕಾರ ಮಾಡುವುದು ದುಸ್ತರವಾಗುತ್ತಿದೆ. ತಾಲೂಕು ಮತ್ತು ಜಿಲ್ಲಾಡಳಿತ ರುದ್ರಭೂಮಿಗೆ ಜಮೀನು ಮಂಜೂರು ಮಾಡಬೇಕು” ಎಂದು ಒತ್ತಾಯಿಸಿದರು.
ಗ್ರಾಮಾಂತರ ಡಿವೈಎಸ್ ಪಿ ಬಸವರಾಜ್ ಬಿ.ಎಸ್. ಮಾತನಾಡಿ, “ಸಭೆಯಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಕ್ರೂಢೀಕರಿಸಿ ಸಂಬಂಧಿತ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಸೂಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸರ್ಕಾರದ ಸೂಚನೆಯಂತೆ ಹಲವು ಭಾಗಗಳಲ್ಲಿ ಕುಂದು ಕೊರತೆ ಸಭೆಗಳು ಆಯೋಜಿಸಲಾಗಿದೆ. ಹಲವು ಅಧಿಕಾರಿಗಳು ಹಾಜರಿದ್ದು, ಪರಿಹಾರಕ್ಕೆ ಪ್ರಯತ್ನಿಸಲಾಗುವುದು” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತರಿಗೆ ಕೃಷಿಸಾಲ ನೀಡದ ಬ್ಯಾಂಕ್ ವಿರುದ್ಧ ಮಲೆಬೆನ್ನೂರಿನಲ್ಲಿ ರೈತಸಂಘ ಪ್ರತಿಭಟನೆ
ಸಭೆಯಲ್ಲಿ ಇನ್ ಸ್ಪೆಕ್ಟರ್ ಗಳಾದ ಆರ್.ಎಫ್ ದೇಸಾಯಿ, ಸುರೇಶ್ ಸಗರಿ, ಬಿಇಒ ಡಿ.ದುರುಗಪ್ಪ, ಸಿಡಿಪಿಒ ಪ್ರಿಯದರ್ಶಿನಿ, ದಲಿತ ಸಮುದಾಯದ ಮುಖಂಡರಾದ ರಾಜನಹಳ್ಳಿ ನಾಗೇಂದ್ರಪ್ಪ, ಕೆ.ಬಿ.ಮಂಜುನಾಥ್, ಕೊಟ್ರೇಶ್, ಹರಳಹಳ್ಳಿ ಹನುಮಂತಪ್ಪ, ಎ.ಕೆ ಭೂಮೇಶ್, ಎಚ್.ಸುಧಾಕರ, ಕೊತ್ವಾಲ್ ಹನುಮಂತಪ್ಪ, ಬೇವಿನಹಳ್ಳಿ ಶಿವರಾಂ, ಧೂಳೆಹೊಳೆ ಪರಶುರಾಮ್, ತಿಪ್ಪೇಶ್, ಬೆಳ್ಳೂಡಿ ಹಾಲೇಶ್, ಆರ್.ವಿಜಯಕುಮಾರ್, ವೈ.ಬಿ.ಪ್ರಭಾಕರ್, ಸಂತೋಷ ನೋಟದವರ, ಜಿ.ಕೆ.ಪಂಚಾಕ್ಷರಿ ಹಾಗೂ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
……
ಹರಿಹರದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಗ್ರಾಮಾಂತರ ಡಿವೈಎಸ್ ಪಿ ಬಸವರಾಜ್ ಬಿ.ಎಸ್. ಮಾತನಾಡಿದರು.





