ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಗಾಗಿ ಅಲ್ಪಸಂಖ್ಯಾತರ ಬಿಗಿಪಟ್ಟು, ಮುಸ್ಲಿಂ ಅಭ್ಯರ್ಥಿಗಳ ಪರ ಬೆಂಬಲಿಗರು, ಸಮರ್ಥ್ ಶಾಮನೂರು ಹಾಗೂ ಇತರ ಅಭ್ಯರ್ಥಿಗಳ ಪರ ಬೆಂಬಲಿಗರ ಮಧ್ಯೆ ಘೋಷಣೆ, ಕೂಗಾಟ, ಹೈಡ್ರಾಮಾ ನಡೆದು ಅಭ್ಯರ್ಥಿಗಳ ಆಯ್ಕೆಗಾಗಿ ಆಗಮಿಸಿದ್ದ ರಾಜ್ಯ ಚುನಾವಣಾ ವೀಕ್ಷಕರಾದ ಹೆಚ್ಎಮ್ ರೇವಣ್ಣ, ಮಂಜುನಾಥ್ ಭಂಡಾರಿ ಹಾಗೂ ಇತರರು ಮುಜುಗರಕ್ಕೊಳಗಾಗಿ ಆಕಾಂಕ್ಷಿಗಳು ಮತ್ತು ಬೆಂಬಲಿಗರೊಂದಿಗೆ ಮಾತನಾಡದೆ ಕೇವಲ ಅರ್ಜಿಗಳನ್ನಷ್ಟೇ ಪಡೆದು ಸಭೆಯನ್ನು ಮೊಟಕುಗೊಳಿಸಿ ತೆರಳಿದ ಘಟನೆ ದಾವಣಗೆರೆಯ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಅಕಾಲಿಕ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು ಚುನಾವಣಾ ದಿನಾಂಕವನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ನಡೆಯಬೇಕಿದ್ದ ಅಭ್ಯರ್ಥಿಯ ಆಯ್ಕೆಯ ಕಸರತ್ತನ್ನು ತುರ್ತಾಗಿ ಮಾರ್ಚ್ 17ರಂದೇ ನಡೆಸಲು ಚುನಾವಣಾ ವೀಕ್ಷಕರನ್ನು ದಾವಣಗೆರೆಗೆ ಕಳಿಸಿ ಕೆಪಿಸಿಸಿ ಕ್ರಮ ಕೈಗೊಂಡಿತ್ತು.

ಈ ಹಿನ್ನೆಲೆಯಲ್ಲಿ 16 ಜನರ ವೀಕ್ಷಕರ ಸಮಿತಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಸಚಿವರು ಆಗಮಿಸದೇ ಗ್ಯಾರಂಟಿ ಸಮಿತಿಗಳ ಪ್ರಾಧಿಕಾರದ ಅಧ್ಯಕ್ಷ ಎಚ್ ಎಮ್ ರೇವಣ್ಣ, ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಆಂಜನೇಯ ಸೇರಿ ಮೂವರು ಇಂದು ದಾವಣಗೆರೆ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯ ನಂತರ ಆಕಾಂಕ್ಷಿಗಳು, ಬೆಂಬಲಿಗರು ಮತ್ತು ಕಾಂಗ್ರೆಸ್ನ ಪದಾಧಿಕಾರಿಗಳ ವಿಭಾಗಗಳು ತಮ್ಮ ಅನಿಸಿಕೆಗಳನ್ನು ಸಲ್ಲಿಸಿ ತಮ್ಮ ಬೆಂಬಲ ಮತ್ತು ಆಯ್ಕೆಯನ್ನು ತಿಳಿಸಬೇಕು. ಬರಹ ರೂಪದಲ್ಲಿ ಕೂಡ ಸಲ್ಲಿಸಬಹುದು ಎಂದು ಘೋಷಿಸಿದರು.

ಆನಂತರ ಒಬ್ಬೊಬ್ಬರಾಗಿ ತೆರಳಲು ಪ್ರಾರಂಭವಾದ ಕೂಡಲೇ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರಿಗೆ, ತಮ್ಮ ಸಮುದಾಯಕ್ಕೆ ಟಿಕೆಟ್ ಬೇಕೆಂದು ಕೂಗಾಟ ಮತ್ತು ರೋಷಾವೇಷದೊಂದಿಗೆ ಅರಚಾಟ ನಡೆಸಿದ ಘಟನೆಯಿಂದ ಸಭೆ ಅಸ್ತವ್ಯಸ್ತಗೊಂಡಿತು. ಕಾಂಗ್ರೆಸ್ ನಾಯಕರುಗಳು ಸೇರಿದಂತೆ ಪೊಲೀಸರು ಬೆಂಬಲಿಗರನ್ನು ಸಮಾಧಾನ ಪಡಿಸಲು ಯತ್ನಿಸಿದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದೆ ವೀಕ್ಷಕರು ಸಭೆಯನ್ನು ಮೊಟಕುಗೊಳಿಸಿ ಅರ್ಜಿಗಳನ್ನಷ್ಟೇ ಪಡೆದು ಹಿಂದಿರುಗಿದರು.

ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮುಖಂಡರು ಬೆಂಬಲಿಗರು ಕಾಂಗ್ರೆಸಿಗಾಗಿ ರಾಜ್ಯ, ಜಿಲ್ಲೆಯಲ್ಲಿ ನಾವು ಬೆಂಬಲವಾಗಿ ನಿಂತಿದ್ದು, ಇದುವರೆಗೂ ಕಾಂಗ್ರೆಸ್ ಅನ್ನು ಬೇಷರತ್ತಾಗಿ ಬೆಂಬಲಿಸಿ ಗೆಲ್ಲಿಸುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಪ್ರಮುಖವಾಗಿ ಮುಸ್ಲಿಂ ಸಮುದಾಯ ಕಾರಣವಾಗಿದೆ. ಕ್ಷೇತ್ರದಲ್ಲಿ 85,000ಕ್ಕೂ ಅತಿ ಹೆಚ್ಚು ಮತ, ಮತ್ತು ದೊಡ್ಡ ಸಮುದಾಯವಾಗಿರುವ ಮುಸ್ಲಿಂ ಸಮುದಾಯಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ನೀಡಲೇಬೇಕು, ಇಲ್ಲವಾದಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿ ಘೋಷಣೆಗಳನ್ನು ಕೂಗಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಉಪಚುನಾವಣೆ ನೀತಿ ಸಂಹಿತೆ ಜಾರಿ; ಪಾಲಿಕೆಯಲ್ಲಿ ಚುನಾವಣಾ ಕಛೇರಿ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪುತ್ರ ಸಮರ್ಥ ಶಾಮನೂರುರವರಿಗೆ ಕೂಡ ಟಿಕೆಟ್ ನೀಡಬೇಕು ಎಂದು ಕೆಲವು ಯುವಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಅಲ್ಪಸಂಖ್ಯಾತ ಮುಖಂಡರು “ಅಹಿಂದ ಅಹಿಂದ” ಎಂದು ಘೋಷಣೆಗಳನ್ನು ಕೂಗುತ್ತಿದ್ದರೇ, “ಸಮರ್ಥ್ ಸಮರ್ಥ್” ಎಂದು ಇನ್ನೊಂದು ಕಡೆ ಶಾಮನೂರು ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಿದ್ದರು.





