ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ ಶಾಮನೂರುಗೆ ಘೋಷಣೆಯಾಗಿರುವ ಬೆನ್ನಲ್ಲೇ ಕ್ಷೇತ್ರದಲ್ಲಿ ಮುಸ್ಲಿಮರು, ಅಹಿಂದ ವರ್ಗದ ಆಕ್ರೋಶ ಭುಗಿಲೆದ್ದಿದ್ದು, ಭಾನುವಾರ ಸಂಜೆ ಅಖ್ತರ್ ರಜಾ ವೃತ್ತದಲ್ಲಿ ಸಾವಿರಾರು ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿ ಶಾಮನೂರು ಕುಟುಂಬ, ಕಾಂಗ್ರೆಸ್ ಮುಖಂಡರ ಹಾಗೂ ಸ್ಥಳೀಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಏಪ್ರಿಲ್ 9 ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇಂದು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮ ಪಡಿಸಿದ್ದು, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಶಾಮನೂರುಗೆ ಟಿಕೆಟ್ ಘೋಷಿಸಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿರುವ ಮುಸ್ಲಿಂ ಸಮುದಾಯ ಈ ಬಾರಿ ಅಹಿಂದ ವರ್ಗಕ್ಕೆ ಮುಖ್ಯವಾಗಿ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ಅನ್ನು ಘೋಷಿಸಬೇಕೆಂದು ಪಟ್ಟು ಹಿಡಿದಿತ್ತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಂಜಾನ್ ಪ್ರಾರ್ಥನೆ ವೇಳೆ ಈದ್ಗಾ ಮೈದಾನದಲ್ಲಿ ಹೆಜ್ಜೇನು ದಾಳಿ
ರಾಜ್ಯಮಟ್ಟದಲ್ಲಿ ಸಚಿವ ಜಮೀರ್ ಅಹ್ಮದ್, ರಹೀಂ ಖಾನ್, ತನ್ವೀರ್ ಸೇಠ್ ಸೇರಿದಂತೆ ಬಹಳಷ್ಟು ಮುಸ್ಲಿಂ ಮುಖಂಡರು ಅಲ್ಪಸಂಖ್ಯಾತ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಮುಸ್ಲಿಮರ ಒತ್ತಾಯವನ್ನು ಪರಿಗಣಿಸದ ಕಾಂಗ್ರೆಸ್ ಮತ್ತೆ ಶಾಮನೂರು ಮನೆತನಕ್ಕೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮುಸ್ಲಿಂ ಸಮುದಾಯದ ಯುವಕರು, ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಅಖ್ತರ್ ರಜಾ ವೃತ್ತದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಹಾಗೂ ಸ್ಥಳೀಯ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿ, ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ಈ ಬಾರಿ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹಲವು ಯುವಕರು “ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕಿತ್ತು, ಆದರೆ ಮತ್ತೆ ಶಾಮನೂರು ಮನೆತನಕ್ಕೆ ಟಿಕೆಟ್ ನೀಡಿ ಕಾಂಗ್ರೆಸ್ ಹಾಗೂ ಶಾಮನೂರು ಕುಟುಂಬ ಬೆಂಬಲಿಸಿದ್ದ ಮುಸ್ಲಿಮರನ್ನು ಕಡೆಗಣಿಸುವ ಮೂಲಕ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಮುಸ್ಲಿಮರಿಗೆ ಅನ್ಯಾಯ ಮಾಡಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹಾಗೂ ಅಭ್ಯರ್ಥಿ ಸಮರ್ಥ್ ಶಾಮನೂರ ವಿರುದ್ಧ ನಾವು ಮತ ಚಲಾಯಿಸುವ ಮೂಲಕ ತಕ್ಕ ಪಾಠ ಕಲಿಸಲಿದ್ದೇವೆ. ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿ, ಪಕ್ಷೇತರ ಸೇರಿದಂತೆ ಇತರೆ ಯಾರಿಗಾದರೂ ಮತ ನೀಡುವಂತೆ ಸಮುದಾಯಕ್ಕೆ ನಾವು ಕರೆ ನೀಡುತ್ತೇವೆ” ಆಕ್ರೋಶ ವ್ಯಕ್ತಪಡಿಸಿದರು.





