ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ವೀರಾಪುರ, ನಲ್ಲಿಹಕ್ಕಲು ತಾವರೆಕೆರೆ ಮುಗ್ಯಾತನಹಳ್ಳಿಯ 200 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮ್ಯಾಂಗನೀಸ್ ಮತ್ತು ಪ್ಲಾಟಿನಮ್ ಅದಿರು ನಿಕ್ಷೇಪಗಳಿರುವ ಬಗ್ಗೆ ದಾವಣಗೆರೆ ಜಿಲ್ಲಾಡಳಿತ ಕೈಗೊಂಡಿರುವ ಖನಿಜ ಅನ್ವೇಷಣೆಗೆ ಸುತ್ತಮುತ್ತಲಿನ ಗ್ರಾಮಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಖನಿಜ ಅನ್ವೇಷಣೆಗೆ ಟೆಂಡರ್ ನೀಡುವ ಕುರಿತು ಅಸಮಾಧಾನ ವ್ಯಕ್ತಪಡಿಸಿ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸರ್ಕಾರಿ ಗೋಮಾಳಗಳನ್ನು ಸೋಲಾರ್ ಪ್ಲಾಂಟಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಕುರಿತು ಆಕ್ಷೇಪ ಹೊರ ಹಾಕಿದ್ದಾರೆ.

ಈ ಬಗ್ಗೆ ದಾವಣಗೆರೆ ಜಿಲ್ಲಾಡಳಿತದಿಂದ ಚನ್ನಗಿರಿ ತಾಲೂಕು ಸಭಾಂಗಣದಲ್ಲಿ ನಡೆದ ಉಪವಿಭಾಗಾಧಿಕಾರಿಗಳ ಎಚ್ ಬಿ ಚನ್ನಪ್ಪ ನವರ ಸಮಾಲೋಚನ ಸಭೆಯಲ್ಲಿ ರೈತ ಸಂಘದ ಮುಖಂಡರುಗಳು, ಗ್ರಾಮಸ್ಥರು ಸೇರಿದಂತೆ ರೈತರು ಭಾಗವಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖನಿಜ ಅನ್ವೇಷಣೆಗೆ ಗುರುತಿಸಿರುವ ಈ ಪ್ರದೇಶದಲ್ಲಿ ಸಾವಿರಾರು ಎಕರೆ ಅಡಿಕೆ, ಆಹಾರ ಧಾನ್ಯ ಬೆಳೆಯುವ ಪ್ರದೇಶವಿದ್ದು ಪಶುಪಾಲನೆ, ಹೈನುಗಾರಿಕೆಯಂತಹ ಬಹುಪಯೋಗಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಇಲ್ಲಿ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ, ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಪ್ಲಾಟಿನಮ್, ಮ್ಯಾಂಗನೀಸ್ ನಿಕ್ಷೇಪಗಳ ಅನ್ವೇಷಣೆ ಮತ್ತು ಅಭಿವೃದ್ಧಿ, ಅದಿರು ಗಣಿಗಾರಿಕೆಯಿಂದ ಇಲ್ಲಿನ ಜನಜೀವನ ಮತ್ತು ಜನರ ನೆಮ್ಮದಿ ಹಾಳಾಗಲಿದೆ. ಜಿಲ್ಲಾಡಳಿತ ಖನಿಜ ಅನ್ವೇಷಣೆಯನ್ನು ಕೂಡಲೇ ನಿಲ್ಲಿಸಬೇಕು” ಎಂದು ಆಕ್ರೋಶ ಹೊರ ಹಾಕಿದರು.
ಇದರಿಂದಾಗಿ ಈ ಪ್ರದೇಶಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಬೆಳೆ ಹಾನಿ ಮತ್ತು ಭೌಗೋಳಿಕ ಚಿತ್ರಣಗಳು ಕೂಡ ಬದಲಾಗಲಿದೆ. ಯಾವುದೇ ಕಾರಣಕ್ಕೂ ಗ್ರಾಮ ಸಭೆಗಳ ಒಪ್ಪಿಗೆಯಿಲ್ಲದೆ ಯಾವುದೇ ಅನ್ವೇಷಣೆಯ ಅಥವಾ ಇದಕ್ಕೆ ಸಂಬಂಧಪಟ್ಟ ಕಾರ್ಯ ಕೈಗೊಳ್ಳಬಾರದು. ಈ ಸಂಬಂಧವಾಗಿ ಆಗಿರುವ ಅಧ್ಯಯನ ವರದಿಯನ್ನು ಸಾರ್ವಜನಿಕ ಗೊಳಿಸಬೇಕು” ಎಂದು ಒತ್ತಾಯಿಸಿದರು.
ಅಲ್ಲದೆ ತಾಲೂಕಿನ ಮುಗ್ಯಾತನಹಳ್ಳಿ ಸೇರಿದಂತೆ ಹಲವು ಕಡೆ ಗೋಮಾಳ ಪ್ರದೇಶಗಳನ್ನು ಸುಧೀರ್ಘಾವಧಿಗೆ ಸೋಲಾರ್ ಪ್ಲಾಂಟ್ ಗಳಿಗೆ ಗುತ್ತಿಗೆ ನೀಡಿರುವುದನ್ನು ವಿರೋಧಿಸಿದರು. ಈ ಗೋಮಾಳ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಗ್ರಾಮಗಳ ಪಶು ಜಾನುವಾರುಗಳಿಗೆ ಮೇವಿಗಾಗಿ ಬಳಸಿಕೊಳ್ಳುತ್ತಿದ್ದು ಗೋಮಾಳಗಳು ಹಳ್ಳಿಗಳ ಜಾನುವಾರುಗಳಿಗೆ ಮೇವಿನ ತಾಣಗಳಾಗಿವೆ. ಈಗ ಏಕಾಏಕಿ ಸೋಲಾರ್ ಪ್ಲಾಂಟ್ ಗೆ ಗುತ್ತಿಗೆ ನೀಡಿರುವುದು ಜಾನುವಾರಗಳ ಮಾರಾಟ ಮತ್ತು ಮಾರಣ ಹೋಮಕ್ಕೆ ಕಾರಣವಾಗಲಿದೆ. ಪಶುಸಂಗೋಪನೆಗೆ ಹೊಡೆತ ಬೀಳಲಿದೆ. ಇದು ರೈತ ವಿರೋಧಿ ಕೃತ್ಯವಾಗಿದೆ. ಈ ಕೂಡಲೇ ಸೋಲಾರ್ ಪ್ಲಾಂಟ್ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
2006ರಲ್ಲಿ ಇದೇ ರೀತಿಯ ಪ್ಲಾಟಿನಂ ಮತ್ತು ಮ್ಯಾಂಗನೀಸ್ ಅದಿರು ನಿಕ್ಷೇಪಗಳ ಅನ್ವೇಷಣೆಯನ್ನು ಯೋಜಿಸಲಾಗಿತ್ತು. ಅಂದು ಗಣಿಗಾರಿಕೆಯ ವಿರುದ್ಧದ ತೀವ್ರ ಹೋರಾಟದಿಂದ ಯೋಜನೆಯನ್ನು ನಿಲ್ಲಿಸಲಾಗಿತ್ತು ಈಗ ಖನಿಜ ಅನ್ವೇಷಣೆಯ ಭೂತ ಮತ್ತೊಮ್ಮೆ ಹೊರಬಂದಿದೆ. ಇದರಿಂದಾಗಿ ಉಬ್ರಾಣಿ ಹೋಬಳಿಯ ರೈತರು ಆತಂಕಗೊಂಡಿದ್ದು ತಮ್ಮ ಕೃಷಿ ಭೂಮಿ ಹಾಗೂ ಅಡಿಕೆ ತೋಟಗಳ ರಕ್ಷಣೆಗೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಸ್‌ಸಿಪಿಎಸ್‌ಟಿ ಯೋಜನೆಯಡಿ ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕೆ ಅರ್ಜಿ ಆಹ್ವಾನ
ಈ ಕುರಿತು ಸಭೆಗೆ ಪ್ರತಿಕ್ರಿಯಿಸಿರುವ ಹೊನ್ನಾಳಿ ಉಪ ವಿಭಾಗಾಧಿಕಾರಿ ಎಚ್ ಬಿ ಚನ್ನಪ್ಪ, “ರೈತರ ಅಸಮಾಧಾನ ಮತ್ತು ಅಹವಾಲುಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು. ಸೂಕ್ತ ಪರಿಹಾರ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಬಗ್ಗೆ ಈದಿನ.ಕಾಂ ಗೆ ಪ್ರತಿಕ್ರಿಯೆ ನೀಡಿದ ರೈತ ಮುಖಂಡ ರಾಜೇಶ್ ನೆಲ್ಲಿಹಂಕಲು “2006ರಲ್ಲಿ ಈ ಹಿಂದೆ ಅಧ್ಯಯನ ಮಾಡಿದ ವರದಿಯನ್ನು ಆಧರಿಸಿ ಮತ್ತೆ ಜಿಲ್ಲಾಡಳಿತ ನಿಕ್ಷೇಪ ಶೋಧಕ್ಕೆ ಮುಂದಾಗಿದೆ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿಕ್ಷೇಪದ ಶೋಧಕ್ಕೆ ಮುನ್ನ ರೈತರ ಅಭಿಪ್ರಾಯ ಪಡೆಯಲು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಚನ್ನಗಿರಿ ತಾಲೂಕು ಕಛೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ರೈತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ನಾವು ಒಗ್ಗಟ್ಟಿನಿಂದ ‘ಇಲ್ಲಿ ಅದಿರು ನಿಕ್ಷೇಪದ ಶೋಧ ವಿರೋಧಿಸುತ್ತೇವೆ, ಶೋಧಕ್ಕೆ ನಮ್ಮ ಒಪ್ಪಿಗೆ ಇಲ್ಲ. ಯಾವುದೇ ಕಾರಣದಿಂದಲೂ ಇಲ್ಲಿ ಅದಿರು ನಿಕ್ಷೇಪಕ್ಕೆ ಶೋಧಕ್ಕೆ ನಾವು ಬಿಡುವುದಿಲ್ಲ’ ಎಂದು ತಿಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಅದಿರು ನಿಕ್ಷೇಪಗಳ ಶೋಧ ಕಾರ್ಯ ಕೈಬಿಡಬೇಕು. ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.





