“ಬುದ್ಧ ಬಸವ ಅಂಬೇಡ್ಕರರು ಈ ನಾಡಿನ ಮೂರು ರತ್ನಗಳು. ಅವರು ವೈಚಾರಿಕ ನಿಲುವುಗಳನ್ನು ಇಟ್ಟುಕೊಂಡವರು. ಅಲ್ಲದೇ ಶೋಷಿತರ, ತಳವರ್ಗದವರ ಬಗ್ಗೆ ಕಾಳಜಿ ಇಟ್ಟುಕೊಂಡು ಸಮಾಜವನ್ನು ನೋಡಿದವರು. ಅವರಿಗೆ ಪ್ರಜ್ಞೆ, ಕರುಣೆ ಇತ್ತು. ಹಾಗಾಗಿಯೇ ಅವರ ಸ್ಮರಣೆಯನ್ನು ನಾವು ನಿತ್ಯ ಸಮಾಜದಲ್ಲಿ ಮಾಡುತ್ತಿದ್ದೇವೆ” ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ದಾವಣಗೆರೆಯಲ್ಲಿ ಸಂತೋಷ್ ಲಾಡ್ ಫೌಂಡೇಶನ್ ಆಯೋಜಿಸಿದ್ದ “ಬುದ್ಧ ಬಸವ ಅಂಬೇಡ್ಕರ್” ವಿಚಾರ ಸಂಕಿರಣದಲ್ಲಿ ನೀಡಿದ ಆಶೀರ್ವಚನದಲ್ಲಿ ಅಭಿಪ್ರಾಯಪಟ್ಟರು.

“ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ ಎಂದಿದ್ದಾರೆ ಬಸವಣ್ಣ. ಅದರಂತೆ
ಮನಸ್ಸು, ಮಾತು, ಕೃತಿ ಬೇರೆಬೇರೆಯಾದರೆ ಬದುಕು ನರಕವಾಗುತ್ತದೆ. ಅವನ್ನು ಒಂದೇ ಮಾಡಿಕೊಳ್ಳಬೇಕು.
ಬೇರೆಯವರ ದೋಷ ತಿದ್ದುವ ಮೊದಲು ನಮಗೆ ಆ ಅರ್ಹತೆ ಇದೆಯೇ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಒಳ್ಳೆಯ ಕಾರ್ಯಗಳಿಗೆ ಬೆಂಬಲಿಸಿದರೆ ಸಾಕು, ನಾವು ಕೂಡ ಬುದ್ಧ ಬಸವ ಅಂಬೇಡ್ಕರ್ ಆಗುತ್ತೇವೆ”ಎಂದು ಸಲಹೆ ನೀಡಿದರು.
“ಸಮಾಜದಲ್ಲಿ ಅಜ್ಞಾನದ ಕತ್ತಲು ತುಂಬಿಕೊಂಡಿದೆ. ಬುದ್ಧ ಬಸವ ಅಂಬೇಡ್ಕರರ ವಿಚಾರಧಾರೆಗಳನ್ನು ತಿಳಿದುಕೊಂಡು ಸಮಾಜ ಸುಜ್ಞಾನದ ಬೆಳಕನ್ನು ತುಂಬಿಕೊಳ್ಳಬೇಕು. ಕೆಟ್ಟು ಹೋಗಿರುವ ಇಂದಿನ ರಾಜಕಾರಣದಲ್ಲಿ ಜನರಿಗೆ ಏನು ಬೇಕು ಎಂದು ಕೇಳುವುದಲ್ಲ, ಜನರಿಗೆ ಏನು ಮಾಡಬೇಕು? ಏನುಬೇಕು ಎನ್ನುವುದನ್ನು ಯೋಚನೆ ಮಾಡುವವನು ನಿಜವಾದ ರಾಜಕಾರಣಿ, ಉತ್ತಮ ಜನನಾಯಕನಾಗಬಲ್ಲ” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಲೇಖಕಿ ವಿನಯಾ ಒಕ್ಕುಂದ ‘ಸಮಾನತೆ ಮತ್ತು ಅಂತರ್ಜಾತಿ ವಿವಾಹ -ಬಸವಣ್ಣನ ಉತ್ತುಂಗ ಸಾಧನೆ’ ಬಗ್ಗೆ ವಿಷಯ ಮಂಡನೆ ಮಾಡಿ ಮಾತನಾಡಿ, “12ನೇ ಶತಮಾನದಲ್ಲಿ 900 ವರ್ಷಗಳ ಹಿಂದೆಯೇ ಸಮಾಜದ ಸುಧಾರಣೆಗೆ ಬಸವಾದಿ ಶರಣರು ಶ್ರಮಿಸಿದ್ದಾರೆ. ಬಸವಣ್ಣನವರು ‘ಸೋಹಂ ಎಂದೆಣಿಸದೇ ದಾಸೋಹಂ ಎನ್ನಿರಯ್ಯಾ’ ಎಂದು ಹೇಳಿದ್ದಾರೆ.
ದಾಸೋಹಂ ಎಂದರೆ ಸುತ್ತಲಿನ ಸಮಾಜ, ಸಮುದಾಯಗಳು ಆತ್ಮೋನ್ನತಿ ಪಡೆಯಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು. ಕನ್ನಡದ ವಚನ ಸಾಹಿತ್ಯ ಸಂಪತ್ತಿನ ನಿಧಿಯಿದ್ದಂತೆ. ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ವಚನಗಳಲ್ಲಿ ಬಸವಣ್ಣನವರು ಕಟ್ಟಿಕೊಟ್ಟಿದ್ದಾರೆ” ಎಂದು ವಿಶ್ಲೇಷಿಸಿದರು.
“ಹೆಣ್ಣು ಮಕ್ಕಳಿಗೆ ಆತ್ಮಾಭಿಮಾನ ತಂದುಕೊಟ್ಟವರು ಬಸವಣ್ಣ. ಅವರು ಅಂದೇ ಹೆಣ್ಣು ಕೀಳು ಎಂಬುದನ್ನು ಅಲ್ಲಗಳೆದು, ಸಮಾನತೆಯ ಬಗ್ಗೆ ಪ್ರತಿಪಾದಿಸಿದರು. ಸಮಾನತೆ ಬಗ್ಗೆ ಜಗತ್ತಿನಲ್ಲಿ ಸಾಮುದಾಯಿಕ ಚಳುವಳಿಯಾಗಿ ವಚನ ಸಾಹಿತ್ಯವನ್ನು ಗುರುತಿಸಬಹುದು. ೧೨ ಶತಮಾನದಲ್ಲಿ ನೆಡೆದ ಶರಣ ಚಿಂತನೆ ಮಾನವತೆಯ ಶ್ರೇಷ್ಠ ಚಿಂತನೆಗಳಲ್ಲೊಂದು.
ಹೆಣ್ಣನ್ನು ಕೆಟ್ಟ ಮಾದರಿಯಲ್ಲಿ ನೋಡುವ ಸಮಾಜದಲ್ಲಿ ಇದನ್ನು ತೊಡೆದು ಹಾಕಲು ಅಂದೇ ಬಸವಣ್ಣ ಹೋರಾಟ ನೆಡೆಸಿದ್ದರು. ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಬಗ್ಗೆ ಪ್ರತಿಪಾದಿಸಿದ್ದ ಬಸವಣ್ಣನವರು ವಿವಾಹ ಸೇರಿದಂತೆ ಸಾಮಾಜಿಕವಾಗಿ ಹೆಣ್ಣಿನ ಸ್ವಾತಂತ್ರ್ಯವನ್ನು ಅಂತರ್ಜಾತಿ ವಿವಾಹಗಳ ಮೂಲಕ ಬೆಂಬಲಿಸಿದ್ದಾರೆ. ನೀಲಾಂಬಿಕೆಯನ್ನು ಅವರು ವಿವಾಹವಾದ ಘಟನೆ ಕೂಡ ಅವರ ಅಂತರ್ಜಾತಿ ವಿವಾಹಕ್ಕೆ ಅವರು ತೋರಿದ ಪ್ರೋತ್ಸಾಹ” ಎಂದು ವಿಷಯ ಮಂಡನೆಯಲ್ಲಿ ತಿಳಿಸಿದರು.

“ಇಡೀ ಜಗತ್ತಿನಲ್ಲಿ ಹೆಚ್ಚು ಬಾರಿ ಬಹು ಓದಿಗೆ ಒಳಗಾದ ಸಾಹಿತ್ಯ ಎಂದರೆ ಅದು ವಚನ ಸಾಹಿತ್ಯ. ‘ಮೇಲ್ಜಾತಿ ಹುಟ್ಟಿನ ಭಾವನೆ, ಅದರ ಸಹಜ ಅಹಂಕಾರ ಕಳೆದುಕೊಳ್ಳುವ ಮೂಲಕ ಸಾಮಾಜಿಕ ಸಮಾನತೆ ಸಾಧಿಸಿ, ಜಾತಿ ವ್ಯವಸ್ಥೆಯ ಬೇರು ಕೀಳಲು ಸಾಧ್ಯವಾಗುತ್ತದೆ’ ಎಂಬುದು ಬಸವಣ್ಣನವರ ವಿಚಾರಧಾರೆಯಾಗಿತ್ತು. ಇದು ಅವರ ವಚನಗಳಲ್ಲಿ ಕಂಡು ಬರುತ್ತದೆ. ಬಸವಣ್ಣ ಕೇವಲ ಜನಿವಾರವನ್ನು ಕಿತ್ತೆಸೆಯಲಿಲ್ಲ. ಜನಿವಾರದ ಜೊತೆಗೆ ಸುತ್ತಲಿನ ಅಹಂ, ಮೂಡನಂಬಿಕೆಗಳನ್ನು, ಸಂಪ್ರದಾಯವನ್ನು ಕಿತ್ತೆಸೆಯುವ ಕಾರ್ಯ ಮಾಡಿದವರು” ಎಂದು ಅಭಿಪ್ರಾಯಪಟ್ಟರು.

“ತಳ ಸಮುದಾಯದ ವಚನಕಾರ್ತಿಯರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ ಎಂದರೆ, ಕೇಳಿಸಿಕೊಳ್ಳುವಂತೆ ಮಾಡಿದವರು ಬಸವಣ್ಣ. ಅಂಬೇಡ್ಕರ್ ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಸಮುದಾಯ ಮತ್ತು ಸಮಾಜ ಅಂತರ್ಜಾತಿ ವಿವಾಹ ಸಹಜವೆಂದು ಒಪ್ಪಿಕೊಂಡಾಗ ಮಾತ್ರ ಜಾತಿ ವಿನಾಶದ ಕಡೆಗೆ ನಾವು ಸಾಗುತ್ತೇವೆ ಎಂದಿದ್ದರು. ಬಸವಣ್ಣ ಸೇರಿದಂತೆ ವಚನಕಾರರು ವೇದ, ಆಗಮ ಶಾಸ್ತ್ರಗಳನ್ನು ಅಲ್ಲಗಳೆದುದು, ಜಾತಿ ಶ್ರೇಷ್ಠತೆಯನ್ನು ಕಳೆದು, ತೊಡೆದುಹಾಕುವುದೇ ಆಗಿತ್ತು” ಎಂದು ತಿಳಿಸಿದರು.

“ನಾ ಸ್ರ್ತೀ ಸ್ವಾತಂತ್ರ್ಯಂ ಅರ್ಹತಿ ಎಂಬುದರ ಮೂಲಕ ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಮನುಶಾಸ್ತ್ರ ನಿರಾಕರಿಸಿತ್ತು. ಹೆಣ್ಣನ್ನು ಪಿತೃ ಆಳ್ವಿಕೆಯ ಪ್ರಧಾನ ಸಮಾಜದಿಂದ ಹೊರಗೆ ತಂದಿದ್ದು ಬಸವಣ್ಣ ಮತ್ತು ಶರಣರು. ಅಕ್ಕಮಹಾದೇವಿ ಅಂತಹ ಶರಣೆಯ ಅನುಭಾವಿಯನ್ನು ಕಡೆದಿದ್ದು ಬಸವ ಮತ್ತು ಶರಣರು. ಸ್ತ್ರೀಯರಿಗೆ ಎಂತಹ ಆತ್ಮಸಾಂಗತ್ಯ, ಗೌರವ ಬೇಕು ಎಂಬುದನ್ನು ಅಕ್ಕ ತನ್ನ ವಚನಗಳಲ್ಲಿ ಮೂಡಿಸಿದ್ದಾಳೆ. ಭಕ್ತಿ ಎಂಬುದು ಕೇವಲ ಆಚರಣೆಯಲ್ಲ. ಅದು ಅನುಭಾವಿಸಿ ಅನುಸರಿಸುವಂತದ್ದು ಎಂದು ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಸೇರಿದಂತೆ ವಚನಕಾರರು ನಿರೂಪಿಸಿದ್ದಾರೆ. ವಚನ ಸಂದೇಶದ ಚರಿತ್ರೆಯನ್ನು ಅಳಿಸಲು ಸಾಧ್ಯವಿಲ್ಲ. ವ್ಯಕ್ತಿಗಳನ್ನು ಕೊಲ್ಲಬಹುದು, ಅವರ ಚಿಂತನೆಗಳನ್ನಲ್ಲ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಳ್ಳರ ತಂಡ ಸಕ್ರಿಯ; ಗಡಿಭಾಗದ ಮನೆ, ಹಳ್ಳಿಗಳು ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ಸೂಚನೆ
ಕಾರ್ಯಕ್ರಮದಲ್ಲಿ ಹೆಬ್ಬಾಳು ಮಠದ ಮಹಾಂತ ರುದ್ರಮುನಿ ಶ್ರೀಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಪಾಂಡೋಮಟ್ಟಿ ವಿರಕ್ತ ಮಠದ ಮ. ನಿ. ಪ್ರ ಗುರುಬಸವ ಶ್ರೀಗಳು, ಡಾ. ಬಸವ ಜಯಚಂದ್ರ ಶ್ರೀಗಳು, ಷ. ಬ್ರ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಶ್ರೀ, ಕುಂಚಿಟಿಗ ಪೀಠದ ಶ್ರೀ ಶಾಂತವೀರ ಶ್ರೀಗಳು, ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಶ್ರೀಗಳು, ಕನಕ ಗುರುಪೀಠದ ನಿರಂಜನಾನಂದ ಶ್ರೀಗಳು, ಹೆಳವ ಗುರು ಪೀಠದ ಬಸವ ಬೃಂಗೇಶ್ವರ ಶ್ರೀಗಳು, ವಾಲ್ಮೀಕಿ ಪ್ರಸನ್ನಾನಂದಪುರಿ ಶ್ರೀಗಳು, ರೆಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು, ಮಡಿವಾಳ ಗುರುಪೀಠದ ಬಸವ ಮಾಚೀದೇವ ಶ್ರೀಗಳು, ಬಸವ ಕುಂಬಾರಗುಂಡಯ್ಯಾ ಶ್ರೀಗಳು, ಅನ್ನಧಾನಿ ಭಾರತೀ ಅಪ್ಪಣ್ಣ ಶ್ರೀಗಳು, ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಶ್ರೀಗಳು, ಕೇತೇಶ್ವರಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಶ್ರೀಗಳು, ಸಚಿವ ಸಂತೋಷ್ ಲಾಡ್, ಕಿಟೆಲ್ ಮಹಾವಿದ್ಯಾಲಯದ ಡಾ. ಶಂಭು ಹೆಗಡಾಳ, ಸಾಹಿತಿ ರಂಜಾನ್ ದರ್ಗಾ, ಕನ್ನಡ ಅಧ್ಯಯನ ಪೀಠದ ಡಾ. ಅನಸೂಯ ಕಾಂಬಳೆ, ಡಾ. ಸಂಜೀವ ಕುಲಕರ್ಣಿ, ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.





