“ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಅವಕಾಶಗಳು ಸಿಗುವುದು ಕಡಿಮೆ. ಅವಕಾಶ ಸಿಕ್ಕಾಗ ಮಹಿಳೆ ಕ್ರಾಂತಿಯನ್ನೇ ಮಾಡಬಲ್ಲಳು. ಸಮಾಜ, ದೇಶವನ್ನು ಮುನ್ನಡೆಸಬಲ್ಲಳು. ಇದಕ್ಕೆ ಉದಾಹರಣೆಯಾಗಿ ಕಿತ್ತೂರಿನಲ್ಲಿ ಚೆನ್ನಮ್ಮನಂತಹ ಅಂದಿನ ಕಾಲದಿಂದಲೂ ಹಿಡಿದು ಇಂದಿನ ಅನೇಕ ಮಹಿಳೆಯರ ಉದಾಹರಣೆ ನಮ್ಮ ಮುಂದಿದೆ” ಎಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆಯಲ್ಲಿ ಆಯೋಜಿಸಿದ್ದ ಬುಡಕಟ್ಟು ಮಹಿಳೆಯರ ಕುರಿತ ವಿಚಾರಗೋಷ್ಠಿಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಭಿಪ್ರಾಯಪಟ್ಟರು.
ಹರಿಹರ ಸಮೀಪದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ 28ನೇ ವರ್ಷದ ಮಠದ ವಾರ್ಷಿಕೋತ್ಸವ, ಪುರುಷೋತ್ತಮಾನಂದ ಶ್ರೀಗಳ ಪುಣ್ಯ ಸ್ಮರಣೆ, ಎಂಟನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಹೆಣ್ಣು ಮಕ್ಕಳಿಗೆ ಇಂದಿನ ದಿನಮಾನಗಳಲ್ಲಿ ಸಾಕಷ್ಟು ಅವಕಾಶಗಳನ್ನು ಎಲ್ಲ ಸಮಾಜಗಳು ನೀಡಬೇಕಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹಿಂದಿನಿಂದಲೂ ಮಹಿಳೆಯರನ್ನು ದೌರ್ಜನ್ಯದಿಂದ ಕೀಳಾಗಿ ಕಾಣುವ ಸ್ಥಿತಿ ಬೆಳೆದು ಬಂದಿದೆ. ರಾಜಕಾರಣಿಗಳು, ರಾಜಕೀಯ ಮುಖಂಡರು ಸೇರಿದಂತೆ ಎಲ್ಲ ವರ್ಗದ ಪುರುಷರು ತಾಯಿ, ಅಕ್ಕ ತಂಗಿ, ಹೆಂಡತಿ ಸೇರಿದಂತೆ ಎಲ್ಲಾ ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಯಬೇಕು” ಎಂದು ಕರೆ ನೀಡಿದರು.
“ಮಹಿಳಾ ಅಭಿವೃದ್ಧಿಗೆ ಜನನಿ ಸುರಕ್ಷಾ, ಉದ್ಯೋಗಿನಿ, ಗೃಹ ಲಕ್ಷಿ ಸೇರಿದಂತೆ ಸರ್ಕಾರ ನೀಡುವ ಅನೇಕ ಯೋಜನೆಗಳನ್ನು ಕುರಿತು ಅವರಿಗೆ ತಿಳಿಸಬೇಕಿದೆ. ಮನೆ, ಹಳ್ಳಿ ಸಮಾಜ ಸೇರಿದಂತೆ ದೇಶವನ್ನು ಮುನ್ನಡೆಸುವ ಶಕ್ತಿ ಸ್ತ್ರೀಯರಿಗಿದೆ. ಹೆಣ್ಣಿನ್ನು ಕೀಳಾಗಿ ನೋಡದೇ ಗೌರವದಿಂದ ಅವಕಾಶ ನೀಡಬೇಕು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮಹಿಳಾ ಗೋಷ್ಟಿ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ,
“ಇಂದು ಮಹಿಳಾ ಗೋಷ್ಠಿಯಲ್ಲಿ ಬುಡಕಟ್ಟು ಸಮಾಜದ ಮಹಿಳೆಯರ ಬಗ್ಗೆ ಚರ್ಚೆ ನಡೆಯುತ್ತಿದ್ದು ಬುಡಕಟ್ಟು ಸಮಾಜದ ಮಹಿಳೆಯರ ಜೊತೆಗೆ ಎಲ್ಲ ಮಹಿಳೆಯರ ಅಭಿವೃದ್ಧಿಗೆ ನಾವು ಶ್ರಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಶ್ರೀಮಠ ಕೂಡ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅವುಗಳ ಉಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು. ರಾಮಾಯಣ ಬರೆದ ವಾಲ್ಮೀಕಿ, ಒಬ್ಬ ತಪಸ್ವಿಯಾಗಿ ಶ್ರೇಷ್ಠ ಸಂತನಾಗಿ ವಾಲ್ಮೀಕಿ ಪ್ರಪಂಚದಲ್ಲಿ ಅಜರಾಮರವಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ವಾಲ್ಮೀಕಿ ಸಮಾಜ ಹಾಗೂ ಪರಿಶಿಷ್ಟ ಪಂಗಡ, ಹಾಗೂ ಶ್ರೀಮಠದ ಪರವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ, ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿರುವ ಶೇ. ಏಳರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಕಾನೂನು ರಕ್ಷಣೆಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ತಿಳಿಸಿ, ಕೇಂದ್ರ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವಂತೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಸೋಮಣ್ಣನವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡಲು ಆರೋಗ್ಯ ಹಕ್ಕಿನ ಜಾಥಾ
ಕಾರ್ಯಕ್ರಮದಲ್ಲಿ ಫೆಬ್ರವರಿ 9ರವರೆಗೆ ಅನೇಕ ಗೋಷ್ಠಿಗಳು ಜರುಗಲಿದ್ದು ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಸಾನಿಧ್ಯ ವಹಿಸುವರು. ಇದೇ ವೇಳೆ ವಧುವರರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ, ಹರಿಹರ ಶಾಸಕ ಬಿಪಿ ಹರೀಶ್, ಶಾಸಕ ಬಸವರಾಜ್ ದದ್ದಲ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಶಾಂತಲಾ ರಾಜಣ್ಣ, ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಮಹೇಂದ್ರ ಕುಮಾರ್ಸೇ ಸೇರಿದಂತೆ ಮಹಿಳೆಯರು, ಸಮಾಜದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.





