ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮ ಘಟಕದ ವತಿಯಿಂದ ಬೈಕ್ ರ್ಯಾಲಿ ನಡೆಸುವ ಮೂಲಕ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ರೈತ ದ್ವಜಾರೋಹಣ ನೆರವೇರಿಸಲಾಯಿತು. ನಂತರ ರೈತ ಗೀತೆಯo ಗಾಯನದ ಮೂಲಕ ರೈತರ ಶ್ರಮ, ತ್ಯಾಗ ಮತ್ತು ಸಮಾಜಕ್ಕೆ ಅವರ ಅಪಾರ ಕೊಡುಗೆಯನ್ನು ಸ್ಮರಿಸಲಾಯಿತು. ಇದೇ ವೇಳೆ ರೈತ ಸಂಘದ ಕಾರ್ಯಕರ್ತರಿಂದ, ರೈತರಿಂದ ರೈತರ ಹಕ್ಕುಗಳಿಗಾಗಿ ಹೋರಾಟದ ನಡೆಸುವ ಸಂಕಲ್ಪ ಮೂಡಿಬಂದಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಘಟಕದ ಅಧ್ಯಕ್ಷ ಮಲ್ಲೇಶಚಾರಿ “ರೈತ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ, ಇದು ರೈತರ ಹಕ್ಕುಗಳು ಮತ್ತು ಸಂಕಷ್ಟಗಳ ಕುರಿತು ಸರ್ಕಾರಗಳ ಗಮನ ಸೆಳೆಯುವ ಹೋರಾಟದ ಸಂಕೇತ. ಅನ್ನದಾತನ ಜೀವನ ಇಂದು ತೀವ್ರ ಸಂಕಷ್ಟದಲ್ಲಿದ್ದು, ಬೆಳೆಗಳ ಬೆಲೆಕುಸಿತ, ಸಾಲಭಾರ, ನೀರಿನ ಕೊರತೆ, ಹಾಗೂ ಅನಿಶ್ಚಿತ ಹವಾಮಾನದಿಂದ ರೈತ ಕಂಗೆಟ್ಟಿದ್ದಾನೆ” ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡರು ಮಾತನಾಡಿ, “ಸರ್ಕಾರಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಪರಿಣಾಮಕಾರಿ ನೀತಿಗಳನ್ನು ಜಾರಿಗೊಳಿಸಬೇಕು, ಕನಿಷ್ಠ ಬೆಂಬಲ ಬೆಲೆ ಖಚಿತಪಡಿಸಬೇಕು, ಸಾಲಮನ್ನಾ, ಬೆಳೆ ವಿಮೆ ಹಾಗೂ ನೀರಾವರಿ ಸೌಲಭ್ಯಗಳನ್ನು ಬಲಪಡಿಸಬೇಕು. ರೈತ ದಿನಾಚರಣೆ ಆಚರಿಸುವುದರಿಂದ ಮಾತ್ರ ಸಾಲದು, ವರ್ಷಪೂರ್ತಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಸರ್ಕಾರಗಳಿಗೆ ಇರಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ “ರೈತ ಉಳಿದರೆ ದೇಶ ಉಳಿಯುತ್ತದೆ”, “ರೈತರ ಹಕ್ಕುಗಳಿಗೆ ಭದ್ರತೆ ನೀಡಬೇಕು” ಎಂಬ ಘೋಷಣೆಗಳು ರ್ಯಾಲಿಯಲ್ಲಿ ಮೊಳಗಿದವು. ಈ ರ್ಯಾಲಿಯು ವಿಶೇಷ ಗಮನ ಸೆಳೆಯಿತು.

ರೈತರ ಏಕತೆಯ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲಾಯಿತು. ರೈತ ದಿನಾಚರಣೆಯ ಮೂಲಕ ರೈತರ ಹೋರಾಟ ಸದಾ ಜೀವಂತವಾಗಿರಬೇಕು ಮತ್ತು ಮುಂದಿನ ದಿನಗಳಲ್ಲಿ ಸರ್ಕಾರಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಸ್ಪಷ್ಟ ಹಾಗೂ ದೃಢ ಕ್ರಮ ಕೈಗೊಳ್ಳಬೇಕೆಂಬ ಸಂದೇಶವನ್ನು ಈ ಕಾರ್ಯಕ್ರಮ ರೈತರಲ್ಲಿ ಮೂಡಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿಬಿಜಿ ರಾಮ್ ಜಿ ಮಸೂದೆ; ಪ್ರತಿಭಟನೆ ವೇಳೆ ಗ್ರಾಕೂಸ್ ಸದಸ್ಯರು ಜಿಲ್ಲಾಧಿಕಾರಿಗಳ ಮಧ್ಯೆ ವಾಗ್ವಾದ
ಕಾರ್ಯಕ್ರಮದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಮಲ್ಲೇಶಚಾರಿ, ಹಿರಿಯ ಮುಖಂಡರಾದ ಎಲ್.ಎನ್. ನಾಗರಾಜರಾವ್, ಜಿ.ಪಿ. ಲೋಕೇಶಪ್ಪ ಗೌಡ್ರು, ಎಸ್. ಪರಶುರಾಮ, ಸತೀಶ್ ಜಿ, ಬಸವರಾಜಪ್ಪ ಗೌಡ್ರು (ಕೆ.ಟಿ.), ಮಂಜುನಾಥ್ ಎಂ.ಎಸ್, ಗಂಗಾಧರ ಕೆ, ಯೋಗೇಶ್ ಪಾಟೀಲ್ (ಜಿ.ಎಸ್.), ವೀರೇಂದ್ರ ಪಾಟೀಲ್ (ಜಿ.ಡಿ.), ಲಕ್ಷ್ಮಣ, ರಂಗೋಜಿರಾವ್ (ಎಲ್.ವೈ.), ಎನ್. ತಿಪ್ಪೇಶ್, ಗಿರೀಶ್ ಹೆಚ್, ರಮೇಶ್ ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.





