ಒಂದರಿಂದ ನಾಲ್ಕನೇ ತರಗತಿವೆರೆಗೆ ನೆಡೆಯುವ ಈ ಶಾಲೆಯಲ್ಲಿ ಇರುವುದು ಮೂರು ಜನ ಮಕ್ಕಳು, ಒಬ್ಬರೇ ಶಿಕ್ಷಕರು. ಇಂತಹದೊಂದು ಸರ್ಕಾರಿ ಪ್ರಾಥಮಿಕ ಶಾಲೆ ಇರುವುದು ದಾವಣಗೆರೆಯ ಉತ್ತರ ವಲಯದ ಸಿದ್ದನೂರು ಲಂಬಾಣಿಹಟ್ಟಿ ಗ್ರಾಮದಲ್ಲಿ. ವಿದ್ಯಾರ್ಥಿಗಳ ಕೊರತೆಯಿಂದ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. 20-30ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ದಾಖಲಾತಿ ಕುಂಠಿತವಾಗಲು ಪರೋಕ್ಷವಾಗಿ ಅಥವಾ ನೇರವಾಗಿ ಸರ್ಕಾರವೇ ಕಾರಣ ಎಂಬುದು ಇಲ್ಲಿನ ಸ್ಥಳೀಯರ, ಪೋಷಕರ ಆರೋಪ. ಕಾರಣ ಏನೆಂದರೆ ಇಲ್ಲಿನ ಹಳೆಯ ಕಟ್ಟಡಗಳ ದುರವಸ್ಥೆ, ಶಾಲೆ ಕಾಂಪೌಂಡ್ ಸುತ್ತಲೂ ಬೆಳೆದಿರುವ ಕಸಕಡ್ಡಿ, ಕಾಡು ತರಹದ ಪೊದೆಗಳು. ಸುತ್ತಲು ಹರಡಿರುವ ಗಲೀಜು, ಯಾವಾಗ ಬೀಳುತ್ತವೋ ಎಂದು ಭಯ, ಆತಂಕ ಹುಟ್ಟಿಸುವ ಶಾಲಾ ಕೊಠಡಿಗಳು. ಇರುವ ಒಂದು ಕೊಠಡಿಯಲ್ಲಿಯೇ ಎಲ್ಲಾ ಇಟ್ಟುಕೊಂಡು ಶಾಲೆ ನಡೆಸುತ್ತಿದ್ದರೂ, ಮಳೆ ಬಂದಾಗ ಅದು ಕೂಡ ಸೋರುವ ಕೊಠಡಿ.

ಇದು ಶಿಥಿಲಗೊಂಡು ಬೀಳುವ ಹಾಗಿರುವ ಸಿದ್ದನೂರು ತಾಂಡಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ. ಇದರ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.

ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಗ್ರಾಮದ ಮಹಿಳೆ ವಸಂತಾ ಬಾಯಿ “ಕುಸಿಯುತ್ತಿರುವ ಕಟ್ಟಡಕ್ಕೆ ನಮ್ಮ ಮಕ್ಕಳನ್ನು ಸೇರಿಸಲು ಆತಂಕ ಹೆಚ್ಚಾಗಿದೆ. ಕಟ್ಟಡ ಕುಸಿತದಂತಹ ಅವಘಡ ಆದರೆ ಯಾರು ಹೊಣೆ, ಮೊದಲು ಗುಣಮಟ್ಟದ ಕಟ್ಟಡ ಕಟ್ಟಿಸಿ, ನಂತರ ನಾವು ಶಾಲೆಗೆ ಮಕ್ಕಳನ್ನು ಸೇರಿಸುತ್ತೇವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಸಿದ್ದೇವೆ. ಆದರೆ ಶಾಲೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

ಶಾಲೆಯ ಅವ್ಯವಸ್ಥೆ ಬಗ್ಗೆ ಮಾತನಾಡಿದ ಗ್ರಾಮದ ಮುಖಂಡ ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ
“ಶಾಲೆಗೆ ಒಬ್ಬರೇ ಶಿಕ್ಷಕರಿದ್ದು ಹೆಚ್ಚುವರಿ ಶಿಕ್ಷಕರು, ಹೊಸ ಕಟ್ಟಡ ಬೇಕೆಂಬುದು ಗ್ರಾಮಸ್ಥರ ಆಗ್ರಹ, ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕಾದ ಸರ್ಕಾರಿ ಶಾಲೆಯು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಹಳೆಯ ಕಟ್ಟಡಗಳು ಶಿಥಿಲಗೊಂಡಿವೆ. ಇರುವ ಒಂದು ಕೊಠಡಿಯಲ್ಲಿಯೇ ಶಾಲೆ ನೆಡೆಯುತ್ತಿದ್ದು, ಅದೂ ಮಳೆ ಬಂದರೆ ಸೋರುತ್ತದೆ. ಶಾಲೆಯ ಎದುರೇ ಕೆರೆಯಿದ್ದು, ಸರಿಯಾದ ಕಾಂಪೌಂಡ್ ವ್ಯವಸ್ಥೆ ಸಹ ಇಲ್ಲ. ಈಗಾಗಲೇ ಇಬ್ಬರು ಮಕ್ಕಳು ಶಿಕ್ಷಕರಿಲ್ಲದ ಸಮಯದಲ್ಲಿ ಆಡಲು ಹೋಗಿ ಕೆರೆಗೆ ಆಹುತಿಯಾಗಿದ್ದಾರೆ. ಇದು ಸಹ ಗ್ರಾಮಸ್ಥರ ಆತಂಕ, ಆಕ್ರೋಶಗೊಳ್ಳಲು ಕಾರಣ. ಹಾಗಾಗಿ ಶಾಲೆಯ ದಾಖಲಾತಿ ಕಡಿಮೆಯಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟು ಮನವಿ ಮಾಡಿದರೂ ಗಮನಹರಿಸಿಲ್ಲ. ಶಾಲಾ ಕಟ್ಟಡವನ್ನು ತುರ್ತಾಗಿ ದುರಸ್ಥಿಗೊಳಿಸಬೇಕು ಮತ್ತು ಕೂಡಲೇ ಹೊಸ ಕಟ್ಟಡ ಮಂಜೂರು ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈದಿನ ಡಾಟ್ ಕಾಮ್ ನೊಂದಿಗೆ ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ಮುಖಂಡ ಲಿಂಗರಾಜು ಗಾಂಧಿನಗರ ಮಾತನಾಡಿ, “ಕಡಿಮೆ ದಾಖಲಾತಿ, ವಿಧ್ಯಾರ್ಥಿಗಳ ನೆಪವೊಡ್ಡಿ ಈ ಶಾಲೆ ಮುಚ್ಚುವ ನಿರ್ಧಾರ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ಉತ್ತಮ ಬೆಳವಣಿಗೆಯಲ್ಲ. ಗ್ರಾಮಸ್ಥರ ಬೇಡಿಕೆಗಳಾದ ಶಾಲೆಗೆ ಹೊಸ ಕಟ್ಟಡ, ಕಾಂಪೌಂಡ್ ದುರಸ್ತಿಗೊಳಿಸುವುದು, ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಶಿಕ್ಷಕರ ನಿಯೋಜನೆ ಮಾಡಿದರೆ ಮಕ್ಕಳನ್ನು ಶಾಲೆಗೆ ದಾಖಲಿಸುತ್ತೇವೆ ಎಂಬುದು ಗ್ರಾಮಸ್ಥರ, ಪೋಷಕರ ಭರವಸೆಯಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಸರ್ಕಾರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುವ ಬದಲು ಇಂತಹ ಅಗತ್ಯವಿರುವ ಶಾಲೆಗಳಿಗೆ ಉತ್ತಮ ಸೌಲಭ್ಯ, ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಮೂಲಕ ಜನಸೇವೆಗೆ ಮುಂದಾಗಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಸಕರ ಬಳಿ ಮಾತನಾಡಿದ್ದು ಹೊಸ ಕಟ್ಟಡ ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಭರವಸೆಯಂತೆ ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.

ಇಲ್ಲಿನ ಅಡುಗೆಮನೆ ಕೂಡ ಹಾಳಾಗಿದ್ದು, ಶಿಥಿಲಗೊಂಡಿರುವ ಶಾಲಾ ಕೊಠಡಿಯಲ್ಲಿಯೇ ಅಡುಗೆ ತಯಾರಿಸಲಾಗುತ್ತಿದೆ. ಉಳಿದ ಕೊಠಡಿಗಳು ಸಂಪೂರ್ಣ ಹಾಳಾಗಿದ್ದು. ಕಸದ ರಾಶಿಯು ತುಂಬಿಕೊಂಡಿದೆ. ಅಲ್ಲದೆ ಹಿಂದೆ ಅಡುಗೆ ಕೋಣೆಗೆ ಹೊಸ ಕಟ್ಟಡ ನಿರ್ಮಿಸಲು ಬುನಾದಿ ಹಾಕಿದ್ದು, ಅದು ಉತ್ತಮ ಗುಣಮಟ್ಟದಲ್ಲಿ ಇಲ್ಲ ಎನ್ನುವ ಕಾರಣ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಇತರ ಮುಖಂಡರು ಒತ್ತಾಯಿಸಿದರು.

ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತೆ ಪೂಜಾ ನಂದಿಹಳ್ಳಿ ಮಾತನಾಡಿ, “ಗ್ರಾಮದ ಜನರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ತಯಾರಿದ್ದಾರೆ. ಆದರೆ ಇಲ್ಲಿನ ಅವ್ಯವಸ್ಥೆ ಮತ್ತು ಸೋರುವ ಕಟ್ಟಡದ ಭಯದಿಂದಾಗಿ ಬೇರೆ ಊರಿನ ಶಾಲೆಗೆ ಕಲಿಯಲು ಕಳಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಲು ಆಟೋ ಬಾಡಿಗೆಯನ್ನೇ ತಿಂಗಳಿಗೆ ಒಂದು ಸಾವಿರ ರೂಪಾಯಿ ನೀಡಬೇಕಾಗಿದೆ. ಇದು ಅಸಹಾಯಕ ಜನರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಉತ್ತಮ ಶಾಲೆಯನ್ನು ಕಟ್ಟಬೇಕು. ಅಲ್ಲಿಯವರೆಗೂ ಗ್ರಾಮಸ್ಥರ ನೇತೃತ್ವದಲ್ಲಿ ‘ಸರ್ಕಾರಿ ಶಾಲೆ ಉಳಿಸಿ ಹೋರಾಟ’ ನಡೆಯಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರಸೀಪುರ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಶಾಲೆ ಮುಚ್ಚದಂತೆ ಕ್ರಮವಹಿಸಿ; ಎಐಡಿಎಸ್‌ಓ
ಗ್ರಾಮದ ಅಂಚಿನಲ್ಲಿ ಉತ್ತಮ ಪರಿಸರದಲ್ಲಿರುವ ಮತ್ತು ಉತ್ತಮ ಸ್ಥಳ ಹೊಂದಿರುವ ಶಾಲೆಗೆ ಉತ್ತಮ ಕಟ್ಟಡ, ಸಿಬ್ಬಂದಿ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಪೋಷಕರ ಬೇಡಿಕೆಗಳಾದ ಕಾಂಪೌಂಡ್ ದುರಸ್ತಿಗೊಳಿಸುವುದು, ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಆಂಗ್ಲ ಮಾಧ್ಯಮವನ್ನು ಆರಂಭಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ ಮತ್ತು ಅಭಿಪ್ರಾಯವಾಗಿದ್ದು, ಸೌಲಭ್ಯ ಕಲ್ಪಿಸಬೇಕು ಎಂಬುದು ಎಲ್ಲರ ಕಳಕಳಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಿದರೆ ಸರ್ಕಾರಿ ಶಾಲೆಗಳಿಗೆ ವಿಧ್ಯಾರ್ಥಿಗಳ ದಾಖಲಾತಿಯು ಹೆಚ್ಚಿ ಸರ್ಕಾರಿ ಶಾಲೆಗಳು ಉಳಿಯುವುದರಲ್ಲಿ ಸಕಾರಾತ್ಮಕ ಹೆಜ್ಜೆ ಎನ್ನುವುದು ಸಾರ್ವಜನಿಕರೆಲ್ಲರ ಅಭಿಪ್ರಾಯ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




