ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?

Date:

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ ಮೊದಲ ವಾರದಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ದಾವಣಗೆರೆಗೆ ವಿವಿಧ ವಲಯಗಳ ಜನರ ಬೇಡಿಕೆಗಳ ಕುರಿತು ಹಲವು ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ಅಭಿವೃದ್ಧಿ, ಕೃಷಿ ನೀರಾವರಿ, ಉದ್ಯೋಗ, ಕೈಗಾರಿಕೆ ವಲಯಗಳಿಗೆ ಜಿಲ್ಲೆಯಲ್ಲಿ ಮುಖ್ಯ ಆದ್ಯತೆಯಾಗಿದೆ. ಈ ಮುಂಚೆ ಇದ್ದ ಹತ್ತಿ ಮಿಲ್‌ಗಳಂತಹ ಕೈಗಾರಿಕೆ ಸೇರಿದಂತೆ ಹಲವು ಕೈಗಾರಿಕೆಗಳ ಮರುಸ್ಥಾಪನೆ, ನೀರಾವರಿ ಯೋಜನೆಗಳ ವಿಸ್ತರಣೆ ಮತ್ತು ಭತ್ತ, ಮೆಕ್ಕೆಜೋಳ ಸೇರಿದಂತೆ ಬೆಂಬಲ ಬೆಲೆ ಹಾಗೂ ಕೈಗಾರಿಕೆ, ಸಾಫ್ಟ್ವೇರ್ ವಲಯ ಸೇರಿದಂತೆ ಹಲವು ಉದ್ಯಮಗಳ ಸ್ಥಾಪನೆ ಮತ್ತು ನಿರುದ್ಯೋಗ ನಿವಾರಣೆಗೆ ಸಂಬಂಧಪಟ್ಟಂತಹ ಅಂಶಗಳು ಮತ್ತು ಅನುದಾನ ರಾಜ್ಯ ಬಜೆಟ್‌ನಲ್ಲಿ ದಾವಣಗೆರೆಗೆ ಯೋಜನೆಗಳು ರೂಪಿತವಾಗಬೇಕು ಎನ್ನುವುದು ಇಲ್ಲಿನ ಜನರ ಹಕ್ಕೊತ್ತಾಯವಾಗಿದೆ.

ದಾವಣಗೆರೆ ಜಿಲ್ಲೆಯು ಕೃಷಿ, ಶಿಕ್ಷಣ ಹಾಗೂ ವ್ಯಾಪಾರದ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದ್ದು, ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾಗಿದೆ. ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ ಸೂಕ್ತ ಅನುದಾನ ನೀಡಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ಜಿಲ್ಲೆಯು ಭತ್ತ ಮತ್ತು ಮೆಕ್ಕೆಜೋಳದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಜಗಳೂರು, ಹೊನ್ನಾಳಿ, ಚನ್ನಗಿರಿ ಸೇರಿದಂತೆ ದಾವಣಗೆರೆಯಲ್ಲಿ ಅತಿಹೆಚ್ಚು ಮೆಕ್ಕೆಜೋಳವನ್ನು ಮತ್ತು ಹರಿಹರ ಹೊನ್ನಾಳಿ ಚನ್ನಗಿರಿ ಹಾಗೂ ದಾವಣಗೆರೆಯ ತಾಲೂಕಿನ ಭಾಗಗಳಲ್ಲಿ ಅತಿಹೆಚ್ಚು ಭತ್ತ ಬೆಳೆಯಲಾಗುತ್ತಿದೆ. ಈ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಬೆಂಬಲ ಬೆಲೆಗೆ ಯೋಜನೆಗಳನ್ನು ರೂಪಿಸಬೇಕು ಎನ್ನುವುದು ಕೃಷಿ ವಲಯದ ನಿರೀಕ್ಷೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಲ್ಲದೆ, ಈ ಹಿಂದಿನಿಂದಲೂ ದಾವಣಗೆರೆ ಒಂದು ಕೈಗಾರಿಕಾ ನಗರವಾಗಿ ಗುರುತಿಸಿಕೊಂಡಿದ್ದು, 2000ನೇ ಇಸವಿಗೂ ಮುನ್ನ ಅತಿಹೆಚ್ಚು ಹತ್ತಿಗಿರಣಿಗಳು ಇಲ್ಲಿ ಕಾರ್ಯಾಚರಿಸುತ್ತಿದ್ದವು. ಜಾಗತೀಕರಣದ ಹೊಡೆತದಿಂದ ಬಹುತೇಕ ಹತ್ತಿಗಿರಣಿಗಳು ಮುಚ್ಚಿ ಹೋಗಿದ್ದು, ಈ ಹಿಂದೆ ಮ್ಯಾಂಚೆಸ್ಟರ್ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ದಾವಣಗೆರೆ ಈಗ ಹೆಸರಿಗಷ್ಟೇ ಉಳಿದುಕೊಂಡಿದೆ.

ಹತ್ತಿಗಿರಣಿಗಳು ಮುಚ್ಚಿದ ನಂತರ ಯಾವುದೇ ಪ್ರಮುಖ ಉತ್ಪಾದನಾ ವಲಯದ ಕೈಗಾರಿಕೆಗಳು ದಾವಣಗೆರೆಯಲ್ಲಿ ಸ್ಥಾಪಿತವಾಗಿಲ್ಲ ಎನ್ನುವುದು ಕೈಗಾರಿಕಾ ವಲಯದ ಕೊರತೆಯಾಗಿದೆ.‌ ಸುತ್ತಮುತ್ತಲಿನ ಜಿಲ್ಲೆಗಳೂ ಸೇರಿದಂತೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದ್ದ ಕಾಟನ್ ಮಿಲ್‌ಗಳು ಹಾಗೂ ಹರಿಹರದ ಬೃಹತ್ ಕಿರ್ಲೋಸ್ಕರ್ ಕಾರ್ಖಾನೆಯೂ ಮುಚ್ಚಿದ, ನಿರ್ನಾಮವಾದ ನಂತರ ದಾವಣಗೆರೆಯಲ್ಲಿ ನಿರುದ್ಯೋಗ ಪ್ರಮುಖವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಗೆ ಟೆಕ್ಸ್‌ಟೈಲ್‌ ಪಾರ್ಕ್‌ಗಳು, ಫುಡ್ ಪ್ರೊಸೆಸಿಂಗ್ ಯೂನಿಟ್‌ಗಳೂ ಸೇರಿದಂತೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ಯೋಜನೆಗಳನ್ನು ಸ್ಥಾಪಿಸಬೇಕಾದ ಅನಿವಾರ್ಯತೆ ಇದೆ. ಇವುಗಳಿಂದ ಸ್ಥಳೀಯ ಮಟ್ಟದಲ್ಲಿ ಮತ್ತು ಗ್ರಾಮಾಂತರ ಮಟ್ಟದಲ್ಲಿಯೇ ಉದ್ಯೋಗಗಳು ಸೃಷ್ಟಿಯಾಗಬೇಕು. ಇದರಿಂದಾಗಿ ಗ್ರಾಮೀಣರ ನಿರುದ್ಯೋಗ ಕೂಡ ಕಡಿಮೆಯಾಗಲಿದ್ದು, ಗ್ರಾಮಗಳ ಆರ್ಥಿಕ ಪುನಶ್ಚೇತನಕ್ಕೂ ಸಾಧ್ಯವಾಗಲಿದೆ ಎನ್ನುವುದು ಜನರ ಆಶಯ.

ಬಜೆಟ್ ನಿರೀಕ್ಷೆಗಳ ಬಗ್ಗೆ ಮಾತನಾಡಿದ ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜಿಲ್ಲೆಗಳಲ್ಲಿ ಕೈಗಾರಿಕೆಗಳು ಹೆಚ್ಚಬೇಕಾದರೆ ನೀರು, ಒಳಚರಂಡಿ ವ್ಯವಸ್ಥೆ, ಉತ್ತಮ ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯಂತಹ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು. ಕೈಗಾರಿಕೆಗಳಿಗೆ ಸಂಬಂಧಪಟ್ಟಂತೆ ಕೈಗಾರಿಕಾ ವಲಯಗಳಲ್ಲಿ ದಾವಣಗೆರೆ ಜಿಲ್ಲೆ ಮೂಲಭೂತ ಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಮಹಾನಗರ ಪಾಲಿಕೆಯಾಗಿ ಬಹುವರ್ಷಗಳಾದರೂ ಉತ್ತಮ ನೀರು, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಇಲ್ಲ. ಸೌಲಭ್ಯ ಕಲ್ಪಿಸಲು ಹಣದ ಕೊರತೆ ಇದೆ” ಎಂದು ಆರೋಪಿಸಿದರು.

“ದಾವಣಗೆರೆಯ ಕೈಗಾರಿಕಾ ವಲಯಗಳಲ್ಲಿ ಮೂಲಸೌಕರ್ಯ ಒದಗಿಸಲು ಈ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು.‌ ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಪ್ರತ್ಯೇಕ ಅನುದಾನದೊಂದಿಗೆ ದಾವಣಗೆರೆ ಜಿಲ್ಲೆಯ ಕೈಗಾರಿಕಾ ವಲಯ, ಇಂಡಸ್ಟ್ರಿಯಲ್ ಎಸ್ಟೇಟ್‌ಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು” ಎಂದು ಮನವಿ ಮಾಡಿದರು.

“ಬಜೆಟ್ ಬೇಡಿಕೆಗಳ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಅಲ್ಲಾಭಕ್ಷಿ, “ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉನ್ನತ ಸರ್ಕಾರಿ ಆಸ್ಪತ್ರೆಯನ್ನು ಮಂಜೂರು ಮಾಡಬೇಕು. ಉತ್ತಮ ರಸ್ತೆ, ನೀರು ಮೂಲಸೌಕರ್ಯ ಒದಗಿಸಬೇಕು” ಎಂದು ತಿಳಿಸಿದರು.

ಮಧ್ಯ ಕರ್ನಾಟಕದ ಜಿಲ್ಲೆಯಾಗಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೂಡ ಮರೀಚಿಕೆಯಾಗಿ ಉಳಿದಿದೆ. ದಾವಣಗೆರೆ ಬಹುಭಾಗ ಸೇರಿದಂತೆ ಹರಿಹರ, ಚನ್ನಗಿರಿ, ಜಗಳೂರು, ಹೊನ್ನಾಳಿಯಂತಹ ನಗರಗಳು ಇನ್ನೂ ಒಳ ರಸ್ತೆಗಳ ದುರಸ್ತಿ, ಒಳಚರಂಡಿ ವ್ಯವಸ್ಥೆಯ ಅಸಮರ್ಪಕ ವಿಸ್ತರಣೆ, ಬೈಪಾಸ್ ಕಾಮಗಾರಿಗಳ ಕೊರತೆ, ಕಸವಿಲೇವಾರಿ ಸಮಸ್ಯೆ ಹಾಗೂ ಕುಡಿಯುವ ನೀರಿನ ಶಾಶ್ವತ ಯೋಜನೆಗಳನ್ನು ಸಂಪೂರ್ಣವಾಗಿ ಹೊಂದಿಲ್ಲ.‌ ಈ ಹಿನ್ನೆಲೆಯಲ್ಲಿ 2026ರ ಮುಂಬರುವ ಬಜೆಟ್ ಈ ನಗರಗಳ ಮೂಲಸೌಕರ್ಯಗಳನ್ನು ಒದಗಿಸಿ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ನೀಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.‌

ದಾವಣಗೆರೆಯಲ್ಲಿ ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಮತ್ತೆರಡು ಕ್ಷೇತ್ರಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಈ ಎರಡೂ ಕ್ಷೇತ್ರಗಳು ಸರ್ಕಾರಿ ಸಂಸ್ಥೆಗಳ ಇಚ್ಛಾಶಕ್ತಿ ಇಲ್ಲದೆ ಕೊರಗುತ್ತಿವೆ. ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾಗಿರುವುದರಿಂದ ವೈದ್ಯಕೀಯ ಕಾಲೇಜಿನ ಅಗತ್ಯ ಬಹು ಹೆಚ್ಚಾಗಿ ಕಾಡುತ್ತಿದೆ. ಖಾಸಗಿ ವೈದ್ಯಕೀಯ ಕಾಲೇಜು ಇದ್ದರೂ ಕೂಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿ ಆ ಮೂಲಕ ಉನ್ನತ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೌಲಭ್ಯ ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರವನ್ನು ಮತ್ತು ಶಿಕ್ಷಣ ಕ್ಷೇತ್ರವನ್ನು ಸುಧಾರಿಸಬೇಕಾಗಿದೆ. ಚಿಗಟೇರಿ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಕಾಲೇಜಿನ ಮಂಜೂರು ಮಾಡಿದಲ್ಲಿ ಆಸ್ಪತ್ರೆಗೆ ಸೂಪರ್ ಸ್ಪೆಷಾಲಿಟಿಯ ಸೌಲಭ್ಯ ಒದಗಿಬರಲಿದೆ.

ವೈದ್ಯಕೀಯ ಕಾಲೇಜು ಬೇಕೆಂಬುದನ್ನು ಹಲವು ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ ಹೋರಾಟಗಾರರ ಬಹುಕಾಲದಿಂದಲೂ ಬೇಡಿಕೆ ಇಡುತ್ತಲೇ ಇದ್ದಾರೆ. ಪಕ್ಕದ ಸಣ್ಣ ಸಣ್ಣ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳಿಗೆ ನೀಡಿರುವ ವೈದ್ಯಕೀಯ ಕಾಲೇಜು ಸೌಲಭ್ಯ ದಾವಣಗೆರೆಗೆ ಏಕಿಲ್ಲ ಎನ್ನುವುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ. ವೈದ್ಯಕೀಯ ಕಾಲೇಜಿನ ಸ್ಥಾಪನೆಯನ್ನು ಯಾವುದಾದರೂ ಪಟ್ಟಭದ್ರ ಹಿತಾಸಕ್ತಿಗಳು ತಡೆಯುತ್ತಿವೆಯೇ? ತಡೆಯುತ್ತಿದ್ದರೆ ಯಾವ ಕೈಗಳು ಕೆಲಸ ಮಾಡುತ್ತಿವೆ? ಎನ್ನುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಅಲ್ಲದೆ, ಆರೋಗ್ಯ ಕ್ಷೇತ್ರದಲ್ಲಿಯೂ ಕೂಡ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹಲವು ಸೌಲಭ್ಯಗಳಿಲ್ಲದೆ ಸೊರಗುತ್ತಿದ್ದು, ಸುಸಜ್ಜಿತ ಮಾನಸಿಕ, ನರ ವಿಜ್ಞಾನ ಮತ್ತು ಹೃದ್ರೋಗದ ಸೌಲಭ್ಯಗಳು ದೊರೆಯುತ್ತಿಲ್ಲ, ಬೇರೆಡೆಗೆ ಕಳುಹಿಸುತ್ತಿದ್ದಾರೆ.‌ ಅಲ್ಲದೆ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್ ಸೌಲಭ್ಯ ಕೂಡ ಇಲ್ಲದೆ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೊರೆ ಹೋಗಬೇಕಾಗಿದೆ. ಸರ್ಕಾರಿ ಆಸ್ಪತ್ರೆಗೆ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್ ಬೇಕೆಂದು ಬಹುದಿನಗಳಿಂದ ಆಗ್ರಹ ನಡೆಯುತ್ತಿದ್ದರೂ ಈವರೆಗೂ ಒದಗಿಸಿಲ್ಲ. ಖಾಸಗಿ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ಲಾಬಿ ಇದನ್ನು ತಡೆಯುತ್ತಿದ್ದು, ಈ ಬಾರಿಯಾದರೂ ಇದಕ್ಕೆ ಅನುದಾನ ಸಿಗಲಿದೆಯೇ ಎನ್ನುವ ನಿರೀಕ್ಷೆ ಮೂಡಿದೆ.‌

ಚಿಟಗೇರಿ ಜಿಲ್ಲಾಸ್ಪತ್ರೆ 2

ತಾಲೂಕು ಮತ್ತು ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳನ್ನೂ ಕೂಡ ಬಲಪಡಿಸುವ ಅವಶ್ಯಕತೆ ಇದೆ. ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಳ್ಳಿಗಳಿಂದ ಬಹುದೂರವಿದ್ದು, ಸ್ಥಳೀಯ ಮಟ್ಟದಲ್ಲೇ ಸಂಚಾರಿ ಆರೋಗ್ಯ ಕೇಂದ್ರಗಳು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ಬಾರಿಯಾದರೂ ಆರೋಗ್ಯ ಕ್ಷೇತ್ರದ ಈ ಬೇಡಿಕೆಗಳು 2026ರ ಬಜೆಟ್‌ನಲ್ಲಿ ಈಡೇರಲಿ ಎನ್ನುವುದು ಜನಾಭಿಪ್ರಾಯವಾಗಿದೆ. ಜತೆಗೆ ಪ್ರಸ್ತುತ ಉತ್ತಮ ಶಿಕ್ಷಣ ಸಂಸ್ಥೆಗಳು ಇದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಐಐಟಿ(IIT)ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಅಗತ್ಯತೆಯನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಒಂದಷ್ಟು ಭಾಗಗಳು ಭದ್ರಾ ಬಲದಂಡೆ ಯೋಜನೆಯಿಂದ ನೀರಾವರಿ ವ್ಯವಸ್ಥೆಯನ್ನು ಹೊಂದಿದ್ದರೂ ಕೂಡ ಜಿಲ್ಲೆಯ ಶೇಕಡಾ 80ಕ್ಕೂ ಹೆಚ್ಚು ಭಾಗ ಭದ್ರಾ ನೀರಾವರಿ ವ್ಯವಸ್ಥೆಯಿಂದ ಹೊರಗೆ ಉಳಿದಿದೆ. ಜಿಲ್ಲೆಯ ಜೀವನದಿ ಮತ್ತು ಕುಡಿಯುವ ನೀರಿನ ಮೂಲಾಧಾರ ಎನಿಸಿಕೊಳ್ಳುವ ತುಂಗಭದ್ರಾ ನದಿ ಜಿಲ್ಲೆಯಲ್ಲಿ ಸುಮಾರು 90 ಕಿಲೋಮೀಟರ್‌ನಷ್ಟು ದೂರ ಕ್ರಮಿಸುತ್ತದೆ. ಆದರೂ ಗ್ರಾಮೀಣ ಭಾಗದಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ. ಈ ನಿಟ್ಟಿನಲ್ಲಿ ತುಂಗಭದ್ರಾ ನದಿಯಿಂದ ಕೃಷಿ ಮತ್ತು ನೀರಾವರಿ ವಲಯಕ್ಕೆ ಸಮಗ್ರ ಕೊಡುಗೆ ಬೇಕಾಗಿದೆ.

ಬರಪೀಡಿತ ತಾಲೂಕುಗಳಾದ ಹೊನ್ನಾಳಿ ಜಗಳೂರು ತಾಲೂಕುಗಳಿಗೆ ನೀರಾವರಿ ವ್ಯವಸ್ಥೆ, ಕೆರೆ ತುಂಬಿಸುವ ವ್ಯವಸ್ಥೆ ಸೇರಿದಂತೆ ಕುಡಿಯುವ ನೀರಿನ ಶಾಶ್ವತ ಯೋಜನೆಗಳನ್ನು ರೂಪಿಸಬೇಕಾಗಿದೆ. ಅಲ್ಲದೆ ದಾವಣಗೆರೆ, ಹರಿಹರ, ಚನ್ನಗಿರಿ ತಾಲೂಕಿನ ಬಹುತೇಕ ಭಾಗಗಳೂ ಕೂಡ ನೀರಾವರಿ ವ್ಯವಸ್ಥೆಯಿಂದ ಹೊರಗೆ ಉಳಿದಿದ್ದು, ಎಲ್ಲೆಡೆಗೂ ನೀರಾವರಿ ವ್ಯವಸ್ಥೆ ಕಲ್ಪಿಸಿ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಬೇಕಾಗಿದೆ. ಚನ್ನಗಿರಿಯ ಭಾಗಕ್ಕೆ ಕೆರೆ ತುಂಬಿಸುವ ಯೋಜನೆಗಳ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ, ಉಬ್ರಾಣಿ ಏತ ನೀರಾವರಿ ಯೋಜನೆ, ಜಗಳೂರು ಕೆರೆ ತುಂಬಿಸುವ ಯೋಜನೆ, ಕುಡಿಯುವ ನೀರಿನ ಶಾಶ್ವತ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳು ಸಂಪೂರ್ಣಗೊಳ್ಳದೆ ಇತ್ತ ಕೆರೆಗಳನ್ನೂ ತುಂಬಿಸದೇ ಕುಂಟುತ್ತ ಸಾಗುತ್ತಿವೆ. ಇವುಗಳ ಈ ಎಲ್ಲ ಯೋಜನೆಗಳ ಸಾಕಾರಕ್ಕೆ ಈ ಬಜೆಟ್‌ನಲ್ಲಿ ಹಣ ನಿಗದಿಪಡಿಸಬೇಕು ಎನ್ನುವುದು ನೀರಾವರಿ ಹೋರಾಟಗಾರರು ಹಾಗೂ ರೈತ ಮುಖಂಡರ ಆಗ್ರಹವಾಗಿದೆ.

ಬಜೆಟ್ ಬೇಡಿಕೆಗಳ ಬಗ್ಗೆ ಮಾತನಾಡಿದ ರೈತ ಸಂಘದ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, “ಗ್ರಾಮೀಣ ಭಾಗದಲ್ಲಿ ರೈತರಿಗೆ ಬೇಸಿಗೆಯ ವಿದ್ಯುತ್ ಕೊರತೆ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಪ್ರತಿ ತಾಲೂಕಿಗೆ ಮೂರರಂತೆ ಮಾಸ್ಟರ್ ಯೂನಿಟ್ ಸರ್ವಿಸ್ ಸ್ಟೇಷನ್‌(ಎಂಯುಎಸ್ಎಸ್)ಗಳನ್ನು ಪ್ರಾರಂಭಿಸುವ ಮೂಲಕ ರೈತರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಅಲ್ಲದೆ ಕೋ-ಆಪರೇಟಿವ್ ವ್ಯವಸ್ಥೆಯಲ್ಲಿ ಮೆಕ್ಕೆಜೋಳ ಆಧಾರಿತ ಸಂಸ್ಕರಣೆ ಘಟಕಗಳು ಬೇಕಾಗಿವೆ. ಇದರಿಂದ ಎಥೆನಾಲ್ ಮತ್ತು ಪಶು ಆಹಾರ ಇತರೆ ಉತ್ಪನ್ನಗಳ ತಯಾರಿಕೆಯಿಂದ ಜಿಲ್ಲೆಯ ಮೆಕ್ಕೆಜೋಳ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಭತ್ತ ಸೇರಿದಂತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಬಜೆಟ್ ನಲ್ಲಿ ಘೋಷಣೆಯಾಗಬೇಕು. ನೀರಾವರಿ ಚಾನೆಲ್‌ಗಳು ಮತ್ತು ಡೆಕ್‌ಗಳ ನಿರ್ವಹಣೆ ಇಲ್ಲದೆ ಹಾಳಾಗಿವೆ. ಹಾಗಾಗಿ ಜಿಲ್ಲೆಯ ನೀರಾವರಿಗೆ ಸಂಬಂಧಿಸಿದ ಎಲ್ಲ ಭದ್ರಾ ಚಾನಲ್‌ಗಳು ಮತ್ತು ಡೆಕ್‌ಗಳನ್ನು ಹೊಸದಾಗಿ ನಿರ್ಮಿಸುವುದಕ್ಕಾಗಿ ಈ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ಅನುದಾನ ಘೋಷಿಸಬೇಕು” ಎಂದು ಒತ್ತಾಯಿಸಿದರು.

ರೈತ ಮುಖಂಡ ರಾಜ್ಯ ಕಾರ್ಯದರ್ಶಿ ಬುಳ್ಳಾಪುರ ಹನುಮಂತಪ್ಪ ಮಾತನಾಡಿ, “ಮೆಕ್ಕೆಜೋಳ ಬೆಳೆಯುವ ರೈತರನ್ನು ಸರ್ಕಾರ ಮತ್ತು ಕೈಗಾರಿಕೆಗಳು ಸಂಪೂರ್ಣವಾಗಿ ಕೈಬಿಟ್ಟಿದ್ದು, ಬೆಂಬಲ ಬೆಲೆ ಘೋಷಿಸಿದ್ದರೂ, ಕ್ವಿಂಟಲ್‌ ಮೆಕ್ಕೆಜೋಳ ₹1500ಕ್ಕೆ ಬಿಕರಿಯಾಗುತ್ತದೆ. ಇದಕ್ಕೆ ಸರ್ಕಾರ ಬಜೆಟ್‌ನಲ್ಲಿ ಪರಿಹಾರ ನೀಡಬೇಕು. ಅಲ್ಲದೆ ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಯ ವಿಚಾರವನ್ನು ಕೈ ಬಿಟ್ಟು ಅದರ ಬದಲಿಗೆ ಉಚಿತ ಮತ್ತು ಗುಣಮಟ್ಟದ ವಿದ್ಯುತ್ ನೀಡಬೇಕು” ಎಂದು ಒತ್ತಾಯಿಸಿದರು.

ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳ ಕುರಿತು ಕಾರ್ಮಿಕ ಮುಖಂಡ ಮಂಜುನಾಥ ಕೈದಾಳ ಪ್ರತಿಕ್ರಿಯಿಸಿದ್ದು, “ಜಿಲ್ಲೆಯಲ್ಲಿ ಲೇಬರ್ ಇಂಟೆನ್ಸಿವ್ ಇಂಡಸ್ಟ್ರಿಗಳು ಬರಬೇಕಾಗಿದೆ. ಕಿರ್ಲೋಸ್ಕರ್ ಮತ್ತು ಪ್ರಸಿದ್ಧ ಹತ್ತಿ ಗಿರಣಿಗಳು ಮುಚ್ಚಿದ ನಂತರ ಕಾರ್ಮಿಕರ ಆಧಾರಿತ ಕೈಗಾರಿಕೆಗಳು ಇಲ್ಲದಂತಾಗಿವೆ. ದಾವಣಗೆರೆಗೆ ಐಟಿ ಹಬ್‌ಗಳು ಬರಬೇಕಾಗಿದೆ ಎಂಬುದು ಕೇವಲ ಘೋಷಣೆಯಾಗದೆ ಈ ಬಜೆಟ್‌ನಲ್ಲಿ ಇನ್ಫೋಸಿಸ್, ಟಾಟಾ, ವಿಪ್ರೋ, ಮಹೀಂದ್ರ ಟೆಕ್ ಸೇರಿದಂತೆ ಹಲವು ಕಂಪನಿಗಳು ಇಲ್ಲಿ ತಮ್ಮ ಯೂನಿಟ್‌ಗಳನ್ನು ಸ್ಥಾಪಿಸುವ ಮೂಲಕ ಸಾಫ್ಟ್‌ವೇರ್ ವಲಯ ಪ್ರಾರಂಭಿಸಲು ಅಗತ್ಯ ಕ್ರಮ ಬೇಕಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ ಕೇಂದ್ರವಾಗಿ ಇಎಸ್ಐ ಆಸ್ಪತ್ರೆ ಇದ್ದು ಸ್ಕ್ಯಾನಿಂಗ್, ಉತ್ತಮ ಆಪರೇಷನ್ ಥಿಯೇಟರ್ ಮತ್ತು ವಿವಿಧ ವಿಭಾಗಗಳ ವೈದ್ಯರಿಲ್ಲದೆ ಕೊರತೆ ಎದುರಾಗಿದೆ. ಹಾಗಾಗಿ ಇದನ್ನು ಮೇಲ್ದರ್ಜೆಗೇರಿಸಿ ಉತ್ತಮ ಸೌಲಭ್ಯ ನೀಡಬೇಕಾಗಿದೆ.‌ ಅಲ್ಲದೆ ಚಿಗಟೇರಿ ಜಿಲ್ಲಾಸ್ಪತ್ರೆ ಅಥವಾ ಇಎಸ್ಐ ಆವರಣದಲ್ಲಿ ಜಯದೇವ ಹೃದ್ರೋಗ ಘಟಕ, ನಿಮ್ಹಾನ್ಸ್ ನರ ವಿಜ್ಞಾನ ಘಟಕ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಆರೋಗ್ಯ ವಲಯಕ್ಕೆ ನೀಡಬೇಕಾಗಿದೆ. ಈ ಬಾರಿ ಲೇಖಾನುದಾನದಲ್ಲಿ ಇವುಗಳಿಗೆ ಆದ್ಯತೆ ನೀಡಬೇಕು” ಎಂದು ಬೇಡಿಕೆ ಇಟ್ಟರು.

ಈ ಹಿಂದೆ ದಾವಣಗೆರೆಗೆ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಮೆಕ್ಕೆಜೋಳವನ್ನು ಈ ಜಿಲ್ಲೆಗೆ ಮೀಸಲಿರಿಸಿ ಮೆಕ್ಕೆಜೋಳ ಸಂಸ್ಕರಣ ಮತ್ತು ಮೌಲ್ಯವರ್ಧಿತ ಘಟಕಗಳ ಪ್ರಾರಂಭಕ್ಕೆ ಘೋಷಿಸಲಾಗಿತ್ತು. ಆದರೆ ಘೋಷಣೆಯಂತೆ ಜಿಲ್ಲೆಗೆ ಈವರೆಗೆ ಯಾವುದೇ ಯೋಜನೆಗಳ ಡಿಪಿಆರ್ ಆಗಿಲ್ಲ, ಯಾವುದೇ ಕೈಗಾರಿಕೆಗಳೂ ಜಿಲ್ಲೆಗೆ ಕಾಲಿಟ್ಟಿಲ್ಲ. ಇವೆಲ್ಲ ಕೇವಲ ಬಜೆಟ್‌ನ ಪುಸ್ತಕದಲ್ಲಷ್ಟೇ ಉಳಿದುಕೊಂಡಿವೆ. ಬಜೆಟ್ ಹಾಳೆಗಳಿಂದ ಈಚೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇವು ಬರುವುದು ಯಾವಾಗ ಎನ್ನುವುದು ದಾವಣಗೆರೆಯ ನಾಗರಿಕರ ಪ್ರಶ್ನೆಯಾಗಿದೆ.

ರಾಜ್ಯದ ಮೆಕ್ಕೆಜೋಳ ಬೆಳೆಯುವ ಅತಿ ದೊಡ್ಡ ಪ್ರದೇಶ ದಾವಣಗೆರೆ ಮತ್ತು ಸುತ್ತಮುತ್ತಲ ಜಿಲ್ಲೆಗಳಾಗಿವೆ. ಇಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸೂಕ್ಷ್ಮ, ಸಣ್ಣ ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಿಗೆ. ಕೈಗಾರಿಕೆಗಳಿಗೆ ಅವಕಾಶಗಳು ಹೆಚ್ಚಿವೆ. ದಾವಣಗೆರೆಯ ಅತಿ ದೊಡ್ಡ ಎಪಿಎಂಸಿ ಸೇರಿದಂತೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮತ್ತು ಚಿತ್ರದುರ್ಗದ ಜಿಲ್ಲೆಯ ಎಪಿಎಂಸಿಗಳಲ್ಲೂ ಕೂಡ ಮೆಕ್ಕೆಜೋಳದ ಅತಿ ದೊಡ್ಡ ವಹಿವಾಟು ನಡೆಯುತ್ತದೆ‌. ಇದರ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ದಾವಣಗೆರೆ ಜಿಲ್ಲೆಗೆ ಕೈಗಾರಿಕಾ ಯೋಜನೆಗಳು ಬೇಕಾಗಿದೆ. ಇದರಿಂದಾಗಿ ರೈತರಿಗೆ ಉತ್ತಮ ಬೆಲೆ ಮತ್ತು ಉತ್ಪಾದನೆಯ ಅವಕಾಶಗಳು ಹೆಚ್ಚಲಿವೆ. ಈಬಾರಿಯ ಬಜೆಟ್ ಸಣ್ಣ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳನ್ನು ಸಾಕಾರಗೊಳಿಸಲಿದೆಯೇ ಎನ್ನುವ ನಿರೀಕ್ಷೆಯಿದೆ.

ಲೇಖಾನುದಾನ-2026ರಲ್ಲಿ ಗ್ರಾಮಗಳ ನಿರುದ್ಯೋಗ ನಿವಾರಣೆಗೆ ಮತ್ತು ಆರ್ಥಿಕತೆಗೆ ಶಕ್ತಿ ತುಂಬಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಕೋ-ಆಪರೇಟಿವ್ ಅಥವಾ ಸಬ್ಸಿಡಿ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಇದರಿಂದಾಗಿ ನಿರುದ್ಯೋಗಿಗಳು ಸೇರಿದಂತೆ ಜನರಿಗೆ ಉದ್ಯಮ ಕಟ್ಟುವ ಅವಕಾಶ ದೊರೆಯುತ್ತದೆ. ಅಲ್ಲದೆ ಕನಿಷ್ಠ ಈ ವರ್ಗದ ಒಂದೊಂದು ಕೈಗಾರಿಕೆಯಲ್ಲಿ ಕನಿಷ್ಠ 5 ಮಂದಿಯಿಂದ 50 ಮಂದಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ದೊರೆಯುವ ಮೂಲಕ ಉದ್ಯೋಗ ಸೃಜನೆ ಸಾಧ್ಯ.

ಇದನ್ನೂ ಓದಿದ್ದೀರಾ? ರಾಜ್ಯ ಬಜೆಟ್ | ಯಾಲಕ್ಕಿ ನಾಡು ಹಾವೇರಿಯ ನಿರೀಕ್ಷೆಗಳೇನು?

ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ಮತ್ತು ರೈತ ಮುಖಂಡ ತೇಜಸ್ವಿ ಪಟೇಲ್ ಬಜೆಟ್‌ನ ಬೇಡಿಕೆಗಳ ಬಗ್ಗೆ ಮಾತನಾಡಿ, “ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಡಕೆ ಬೆಳೆಯುವ ಪ್ರದೇಶ ಹೆಚ್ಚುತ್ತಿದ್ದು, ಅಡಕೆ ಸಂಶೋಧನಾ ಕೇಂದ್ರ ಹಾಗೂ ಅಡಕೆ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಜಿಲ್ಲೆಗೆ ಅಗತ್ಯವಿದೆ. ಕೇಂದ್ರ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(CFTRI-ಸಿಎಫ್ ಟಿಆರ್ ಐ)ಯನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು. ಆಹಾರಧಾನ್ಯ ಮತ್ತು ಕಾಳುಗಳ ಸಂಶೋಧನೆಗೆ ಇದರ ಅಗತ್ಯವಿದೆ” ಎಂದು ನಿರೀಕ್ಷೆ ವ್ಯಕ್ತಪಡಿಸಿದರು.

ಆರೋಗ್ಯ, ಶಿಕ್ಷಣ, ಕಾರ್ಮಿಕ ವಲಯ, ಕೈಗಾರಿಕಾ ವಲಯ ಮತ್ತು ಕೃಷಿ ವಲಯ ಸೇರಿದಂತೆ ಹಲವಾರು ಬೇಡಿಕೆ ಮತ್ತು ನಿರೀಕ್ಷೆಗಳ ಬಗ್ಗೆ ಈಬಾರಿ ಮಂಡಿಸಲಿರುವ ಬಜೆಟ್‌ನಲ್ಲಿ ದಾವಣಗೆರೆಯ ಜನತೆ ನಿರೀಕ್ಷೆ ಇಟ್ಟಿದ್ದು, ಲೇಖಾನುದಾನ-2026ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾವಣಗೆರೆ ಜಿಲ್ಲೆಗೆ ಯಾವ್ಯಾವ ಸೌಲಭ್ಯ ಮತ್ತು ಅನುದಾನ ಘೋಷಣೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಮಂಡಿಸಲಿರುವ ಬಜೆಟ್‌ನಲ್ಲಿ ದಾವಣಗೆರೆ ಜನತೆಯ ಬೇಡಿಕೆಗಳನ್ನು ಈಡೇರಿಸಲಿ ಎನ್ನುವುದು ಇಲ್ಲಿಯ ಜನರ ಒತ್ತಾಯ ಮತ್ತು ಆಶಯವಾಗಿದೆ.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...